ಬೆಳಗಾವಿ: ಇಲ್ಲಿನ ಸುವರ್ಣ ವಿಧಾನಸೌಧ ಆವರಣದಿಂದ ವಿಧಾನ ಪರಿಷತ್ ಸದಸ್ಯ ಸಿ.ಟಿ. ರವಿ ಅವರನ್ನು ಪೊಲೀಸರು ಬಂಧಿಸಿದ ಘಟನೆಯನ್ನು ಬಿಜೆಪಿ ಹಿರಿಯ ನಾಯಕರು ಗಂಭೀರವಾಗಿ ಪರಿಗಣಿಸಬೇಕು ಎಂದು ಶಾಸಕ ಅಭಯ ಪಾಟೀಲ ಹೇಳಿದರು.
ನಗರದಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಇಂಥ ಪ್ರಕರಣಗಳಲ್ಲಿ ಪಕ್ಷದ ಹಿರಿಯ ನಾಯಕರು ಮೌನ ವಹಿಸಿದರೆ, ಮುಂದಿನ ದಿನಗಳಲ್ಲಿ ಅವರಿಗೂ ಮತ್ತು ಇತರೆ ಶಾಸಕರಿಗೂ ಇದೇ ಸ್ಥಿತಿ ಬರಬಹುದು ಎಂದರು.
ಈ ವಿದ್ಯಮಾನ ಗಮನಿಸಿದ ಕಾರ್ಯಕರ್ತರು, ಒಂದು ವೇಳೆ ತಮಗೆ ಇಂಥ ಪರಿಸ್ಥಿತಿ ಬಂದರೆ ಗತಿ ಏನೆಂದು ಆತಂಕದಲ್ಲಿದ್ದಾರೆ. ರವಿ ಅವರ ಬಂಧನಕ್ಕೆ ಕಾರಣರಾದ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಹಿರಿಯ ನಾಯಕರು ಧ್ವನಿ ಎತ್ತಲು ಇದು ಸಕಾಲ ಎಂದು ಹೇಳಿದರು.