ಸಿ ಎಸ್‌ ಆರ್ ಅಡಿ 2 ಕೋಟಿ ರೂಗಳ ಅನುದಾನ

0
19

ಬೆಂಗಳೂರು: ಪೊಲೀಸ್ ಮಕ್ಕಳ ವಸತಿ ಶಾಲೆ ಮಕ್ಕಳ ವಸತಿ ನಿಲಯಗಳನ್ನು ನಿರ್ಮಿಸಲು ಹಾಗೂ ಶಾಲೆ ಪುನರ್ ನಿರ್ಮಾಣ ಮಾಡಲು ಸಿಎಸ್ ಆರ್ ಅಡಿ 2 ಕೋಟಿ ರೂಗಳ ಅನುದಾನವನ್ನು ಬಿಡುಗಡೆ ಮಾಡಿದೆ ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಹೇಳಿದ್ದಾರೆ.
ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌ ಮಾಡಿರುವ ಅವರು ರಾಜ್ಯದ ಏಕೈಕ (ಎನ್.ಎ. ಮುತ್ತಣ್ಣ ಸ್ಮಾರಕ) ಪೊಲೀಸ್ ಮಕ್ಕಳ ವಸತಿ ಶಾಲೆ ಮಕ್ಕಳ ವಸತಿ ನಿಲಯಗಳನ್ನು ನಿರ್ಮಿಸಲು ಹಾಗೂ ಶಾಲೆ ಪುನರ್ ನಿರ್ಮಾಣ ಮಾಡಲು ನಮ್ಮ ಗಣಿ ಮತ್ತು ಕಲ್ಲಿದ್ದಲು ಖಾತೆ ಅಧೀನದಲ್ಲಿ ಬರುವ ಕೋಲ್ ಇಂಡಿಯಾ ಕಂಪನಿಯ ಸಿಎಸ್ ಆರ್ ಅಡಿ 2 ಕೋಟಿ ರೂಗಳ ಅನುದಾನವನ್ನು ಬಿಡುಗಡೆ ಮಾಡಿದೆ.
ಈ ಹಿಂದೆ ಶಾಲೆ ಶಿಥಿಲಾವಸ್ಥೆಯಲ್ಲಿದ್ದ ಕಾರಣ ವಿದ್ಯಾರ್ಥಿಗಳ ಸಂಖ್ಯೆ ಕಡಿಮೆಯಾಗಿ ಶಾಲೆ ಮುಚ್ಚುವ ಪ್ರಸಂಗ ಬಂದಾಗ ಶಾಲೆಗೆ ಭೇಟಿ ನೀಡಿ ಹೋರಾಟ ಮಾಡಿ, ಸರ್ಕಾರಕ್ಕೆ ಮನವಿ ಸಲ್ಲಿಸಿ ಶಾಲೆಯನ್ನು ಪ್ರಾರಂಭಿಸಲಾಗಿತ್ತು.
ಹಿಂದಿನ ಹಾಗೂ ಈಗಿನ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು, ಪೊಲಿಸ್ ಹಕ್ಕುಗಳ ಹೋರಾಟಗಾರರು, ಜನಜಾಗೃತಿ ಸಂಘದ ಸದಸ್ಯರುಗಳು, ಶಾಲೆಯ ಹಳೆಯ ವಿದ್ಯಾರ್ಥಿಗಳು ನನ್ನನ್ನು ಭೇಟಿಮಾಡಿ ಶಾಲೆಯ ಪುನಶ್ಚೇತನಕ್ಕೆ ಮನವಿ ಸಲ್ಲಿಸಿದ್ದರು. ಈ ವಿಷಯವಾಗಿ ಬಸವರಾಜ ಹೊರಟ್ಟಿಯವರೊಂದಿಗೂ ಚರ್ಚೆ ಮಾಡಲಾಗಿತ್ತು.
ಈಗ ಶಾಲೆಯನ್ನು ಪುನಶ್ಚೇತನಗೊಳಿಸಲು ಅಗತ್ಯ ಇರುವ ಎಲ್ಲ ಕ್ರಮಗಳನ್ನು ಕೈಗೊಳ್ಳಲು ನನ್ನ ಇಲಾಖೆಯಿಂದ ಆರ್ಥಿಕ ನೆರವು ನೀಡಿ ನಮ್ಮ ಪೊಲೀಸ್ ಇಲಾಖೆಯ ಮಕ್ಕಳಿಗೆ ಉತ್ತಮ ಶಿಕ್ಷಣ ನೀಡುವ ಉದ್ದೇಶದಿಂದ ಪ್ರಾರಂಭವಾದ ಶಾಲೆಯನ್ನು ಮಾದರಿ ಶಾಲೆಯನ್ನಾಗಿ ನಿರ್ಮಾಣ ಮಾಡಲಾಗುವುದು.
ಇಂದು ತಮ್ಮ ಕೋರಿಕೆಗೆ ಸ್ಪಂದಿಸಿ ಅನುದಾನ ಬಿಡುಗಡೆ ಮಾಡಿಸಿದ ಹಿನ್ನಲೆಯಲ್ಲಿ ಪೋಲಿಸ್ ಆಯುಕ್ತರಾದ ರೇಣುಕಾ ಸುಕುಮಾರ ಹಾಗೂ ಎಸ್. ಪಿ. ಡಾ. ಗೋಪಾಲ ಎಂ. ಬ್ಯಾಕೊಡ್ ಅವರು ಇನ್ನಿತರ ಅಧಿಕಾರಿಗಳೊಂದಿಗೆ ಕಛೇರಿಗೆ ಆಗಮಿಸಿ ಧನ್ಯವಾದಗಳನ್ನು ತಿಳಿಸಿದರು ಎಂದಿದ್ದಾರೆ.

Previous articleಅತಿಥಿ ಉಪನ್ಯಾಸಕರಿಗೆ ಗುಡ್‌ ನ್ಯೂಸ್
Next articleಅಪಘಾತ: ಗಾಯಾಳುಗಳನ್ನು ತಮ್ಮ ವಾಹನದಲ್ಲೇ ಕರೆದೊಯ್ದು ಆಸ್ಪತ್ರೆಗೆ ದಾಖಲಿಸಿ ಮಾನವೀಯತೆ ಮೆರೆದ ಸಚಿವ ಸಂತೋಷ್‌ ಲಾಡ್‌