ಸಿಸಿ ಕ್ಯಾಮರಾಗೆ ಸ್ಪ್ರೇ ಮಾಡಿ ಎಸ್‌ಬಿಐ ಎಟಿಎಂನಿಂದ 18 ಲಕ್ಷ ದರೋಡೆ

ಕಲಬುರಗಿ: ಎಸ್.ಬಿ.ಐ. ಬ್ಯಾಂಕ್ ಎಟಿಎಂ ನಿಂದ ಹಣ ದೋಚಿ ಪರಾರಿಯಾದ ಘಟನೆ ನಡೆದಿದೆ.
ನಗರದ ಪೂಜಾರಿ ಚೌಕ್​ನಲ್ಲಿರುವ ಎಸ್​ಬಿಐ ಎಟಿಎಂ ಕಿಯಾಸ್ಕೊಂದರಿಂದ ದರೋಡೆಕೋರರು ₹18 ಲಕ್ಷ ದೋಚಿಕೊಂಡು ಪರಾರಿಯಾಗಿದ್ದಾರೆ. ದರೋಡೆ ಬೆಳಗಿನ ಜಾವ 3ಗಂಟೆ ಸುಮಾರಿಗೆ ನಡೆದಿದೆ ಎನ್ನಲಾಗಿದ್ದು, ಕಳ್ಳರು ತಮ್ಮ ಮುಖಗಳು ಎಟಿಎಂ ಕಿಯಾಸ್ಕ್ ಇರುವ ಕೋಣೆಯಲ್ಲಿ ಅಳವಡಿಸಲಾಗಿರುವ ಸಿಸಿಟಿವಿ ಕೆಮೆರಾದಲ್ಲಿ ಸೆರೆಯಾಗದಿರಲು ಅವುಗಳಿಗೆ ಕಪ್ಪುಮಸಿಯನ್ನು ಸ್ಪ್ರೇ ಮಾಡಿದ್ದಾರೆ. ಕಿಯಾಸ್ಕ್​ ಓಪನ್ ಮಾಡಲು ಕಳ್ಳರು ಗ್ಯಾಸ್ ಕಟ್ಟರ್ ಬಳಸಿದ್ದಾರೆ. ನಿನ್ನೆ ಸಂಜೆ ಎಟಿಎಂಗೆ ಬ್ಯಾಂಕ್ ಸಿಬ್ಬಂದಿ ಹಣ ಹಾಕಿದ್ದು, ಎಟಿಎಂನಲ್ಲಿ ಸೆಕ್ಯುರಿಟಿ ಗಾರ್ಡ್ ಇಲ್ಲದನ್ನು ಗಮನಿಸಿ ಕಳ್ಳರು ಕೈಚಳಕ ತೋರಿಸಿದ್ದಾರೆ. ಕೋಣೆಯಲ್ಲಿ ಎರಡು ಎಟಿಎಂ ಮೆಶಿನ್‌ಗಳಿದ್ದು, ಒಂದರಲ್ಲಿ ಹಣ ಇರಲಿಲ್ಲ. ಹಾಗಾಗಿ ಆ ಮೆಶಿನ್ ಮುಟ್ಟದೇ, ಹಣ ಇರುವ ಮೆಶಿನ್ ಅನ್ನು ನಿಖರವಾಗಿ ಗುರುತಿಸಿ ಅದನ್ನೇ ಒಡೆದು ಹಣ ದೋಚಲಾಗಿದೆ.
ಈ ಕುರಿತು ಕಲಬುರಗಿಯ ಸಬ್ ಅರ್ಬನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.