ಸಿಲಿಂಡರ್ ಸ್ಫೋಟ: ಮತ್ತೋರ್ವ ಮಹಿಳೆ ಸಾವು

ಗದಗ(ಮುಳಗುಂದ): ಸಮೀಪದ ಹೊಸೂರು ಗ್ರಾಮದಲ್ಲಿ ಅಡುಗೆ ಅನಿಲ(ಸಿಲಿಂಡರ್) ಸೋರಿಕೆಯಿಂದ ಸ್ಫೋಟಗೊಂಡ ಘಟನೆಯಲ್ಲಿ ಎರಡನೇ ಬಲಿ ಪಡೆದುಕೊಂಡಿದೆ. ಗದಗ ತಾಲೂಕು ಹೊಂಬಳ ಗ್ರಾಮದ ಶೇಖವ್ವ ಹೊರಪೇಟಿ(70) ಎಂಬ ಮಹಿಳೆ ಶುಕ್ರವಾರ ಬೆಳಗಿನ ಜಾವ ಹುಬ್ಬಳ್ಳಿಯ ಕೆಎಂಸಿಆರ್‌ಐನಲ್ಲಿ ಸಾವನ್ನಪ್ಪಿದ್ದಾಳೆ.
ಹೊಸೂರು ಗ್ರಾಮದ ಬಸಪ್ಪ ಫಕೀರಪ್ಪ ಆದಿಯವರ ಎನ್ನುವವರ ಮನೆಯಲ್ಲಿ ಅಡುಗೆ ಅನಿಲ ಸೋರಿಕೆಯಾಗಿ ಆರು ಜನ ತೀವ್ರ ಗಾಯಗೊಂಡಿದ್ದರು. ಅದರಲ್ಲಿ ಮುಳಗುಂದ ಪಪಂ ಮಾಜಿ ಅಧ್ಯಕ್ಷೆ ಲಕ್ಷ್ಮವ್ವ ಕಣವಿ ಮೊದಲು ಸಾವನ್ನಪ್ಪಿದರೆ ಎರಡನೆಯದಾಗಿ ಶೇಖವ್ವ ಸಾವನ್ನಪ್ಪಿದ್ದಾಳೆ.
ಹೊಸೂರು ಗ್ರಾಮದ ಆದಿಯವರ ಮನೆಯಲ್ಲಿ ಕಾರ್ಯಕ್ರಮವಿದ್ದ ಕಾರಣ ಅಡುಗೆ ಸಿದ್ಧತೆ ಮಾಡುತ್ತಿದ್ದರು. ಮಹಿಳೆಯೊಬ್ಬರು ಅಡುಗೆ ಮಾಡುವುದು ಮುಗಿದ ನಂತರ ಮನೆ ಬಾಗಿಲು ಹಾಕಿಕೊಂಡು ಹೊರಗೆ ಹೋದಾಗ ಅನಿಲ ಸೋರಿಕೆಯಾಗಿದ್ದನ್ನು ಗಮನಿಸಿದ ಪಕ್ಕದ ಮನೆಯಲ್ಲಿದ್ದ ಸೋದರ ಕುಟುಂಬದವರು ಹಾಗೂ ಪಕ್ಕದ ಮನೆಯವರು ಸೇರಿ ಬಾಗಿಲು ತಗೆಯುತ್ತಿದ್ದಂತೆ ಸಿಲಿಂಡರ್ ಸ್ಫೋಟಗೊಂಡ ಘಟನೆ ನಡೆದಿತ್ತು.
ಹೊಸೂರು ಗ್ರಾಮದ ಶರಣಪ್ಪ ಡಾಲಿನ, ಶಿವಪ್ಪ ಡಾಲಿನ, ಮಂಜುಳಾ ಆದಿಯವರ ಗಂಭೀರ ಗಾಯಗೊಂಡಿದ್ದು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇನ್ನೋರ್ವ ಮಹಿಳೆ ನಿರ್ಮಲಾ ಡಾಲಿನ ಚಿಕಿತ್ಸೆ ಪಡೆದು ಮನೆಗೆ ವಾಪಸ್ಸಾಗಿದ್ದಾರೆ.