ಸಿಲಿಂಡರ್ ಸ್ಪೋಟ: ಸಾವನ್ನಪ್ಪಿದವರ ಸಂಖ್ಯೆ ಮೂರಕ್ಕೆ ಏರಿಕೆ

ದಾವಣಗೆರೆ: ನಗರದ ಎಸ್ ಒ ಜಿ ಕಾಲೋನಿಯ ನಿವಾಸದಲ್ಲಿ ಸಂಭವಿಸಿದ ಸಿಲಿಂಡರ್ ಸ್ಪೋಟದಲ್ಲಿ ಮೃತಪಟ್ಟವರ ಸಂಖ್ಯೆ ಮೂರಕ್ಕೆ ಏರಿಕೆಯಾಗಿದೆ. ಸ್ಫೋಟದಲ್ಲಿ ಗಾಯಗೊಂಡಿದ್ದ ಪಾರ್ವತಮ್ಮ ಕಳೆದ ಜು.4 ರಂದು ಸಾವನ್ನಪ್ಪಿದ್ದರು. ಈಗ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಮಲ್ಲೇಶಪ್ಪ (64), ಲಲಿತಮ್ಮ (58) ದಂಪತಿ ಸಾವು ಕಂಡಿದ್ದಾರೆ. ಇದರಿಂದಾಗಿ ಸ್ಪೋಟಕ್ಕೆ ಬಲಿಯಾದವರ ಸಂಖ್ಯೆ ಮೂರಕ್ಕೆ ಏರಿಕೆಯಾಗಿದೆ.

ಕಳೆದ ಒಂದು ವಾರದ ಹಿಂದೆ ಅಡುಗೆ ಮಾಡಲು ಹೋದಾಗ ಸಿಲಿಂಡರ್ ಸ್ಫೋಟಗೊಂಡ ಪರಿಣಾಮ ಮನೆಯ ಮಾಲೀಕ ಮಲ್ಲೇಶಪ್ಪ, ಲಲಿತಮ್ಮ, ಪುತ್ರ ಪ್ರವೀಣ್ ಹಾಗೂ ಸೊಸೆ ಸೌಭಾಗ್ಯ ಗಂಭೀರವಾಗಿ ಗಾಯಗೊಂಡಿದ್ದರು. ಸೌಭಾಗ್ಯ ಅವರನ್ನು ತೀವ್ರ ನಿಗಾ ಘಟಕದಲ್ಲಿಟ್ಟು ಚಿಕಿತ್ಸೆ ನೀಡಲಾಗುತ್ತಿದೆ.

ಅಡುಗೆ ಅನಿಲ ಸೋರಿಕೆಯಾದಾಗ ಬೆಂಕಿ ಹತ್ತಿಕೊಳ್ಳುತ್ತದೆ ಇಲ್ಲವೇ ಸಿಲಿಂಡರ್ ಸ್ಫೋಟಿಸುವ ಸಾಧ್ಯತೆ ಜಾಸ್ತಿಯಿರುತ್ತದೆ. ಅನಿಲ ಘನೀಕೃತ ರೂಪ ಪಡೆದು ಸ್ಫೋಟಿಸುವುದು ತುಂಬಾ ಕಡಿಮೆ. ಇಂಥದ್ದೊಂದು ಅಪರೂಪದ ಅವಘಡಕ್ಕೆ ಇಲ್ಲಿನ ನಿವಾಸಿಗಳು ಬಲಿಯಾಗಿದ್ದಾರೆ.