ಸಿದ್ಧಾರೂಡ ಸ್ವಾಮಿ ಮಠದ ಲಕ್ಷ ದೀಪೋತ್ಸವ: ವಿಶೇಷ ಬಸ್ ವ್ಯವಸ್ಥೆ

0
22

ಹುಬ್ಬಳ್ಳಿ: ಮಹಾನಗರದ ಶ್ರೀ ಸಿದ್ಧಾರೂಢ ಸ್ವಾಮಿಯವರ ಮಠದಲ್ಲಿ ಡಿಸೆಂಬರ್ 1ರಂದು ರವಿವಾರ ಜರುಗಲಿರುವ ಲಕ್ಷ ದೀಪೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿ ಹಿಂದಿರುಗುವ ಭಕ್ತಾದಿಗಳ ಅನುಕೂಲಕ್ಕಾಗಿ ಹುಬ್ಬಳ್ಳಿಯಿಂದ ಜಿಲ್ಲೆಯೊಳಗೆ ಪ್ರಮುಖ ಸ್ಥಳಗಳಿಗೆ ಹಾಗೂ ಹೊರ ಜಿಲ್ಲೆಗಳಿಗೆ ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯಿಂದ ವಿಶೇಷ ಬಸ್ ವ್ಯವಸ್ಥೆ ಮಾಡಲಾಗಿದೆ ಎಂದು ಹುಬ್ಬಳ್ಳಿ ವಿಭಾಗೀಯ ನಿಯಂತ್ರಣಾಧಿಕಾರಿ ಎಚ್. ರಾಮನಗೌಡರ ತಿಳಿಸಿದ್ದಾರೆ.

ಉತ್ತರ ಕರ್ನಾಟಕದ ಪ್ರಮುಖ ಧಾರ್ಮಿಕ ಸ್ಥಳ ಹುಬ್ಬಳ್ಳಿಯ ಶ್ರೀ ಸಿದ್ಧಾರೂಢ ಸ್ವಾಮೀಜಿ ಮಠದಲ್ಲಿ ಪ್ರತಿ ವರ್ಷದಂತೆ ಈ ವರ್ಷ ಡಿಸೆಂಬರ್ 1ರಂದು ರವಿವಾರ ಸಂಜೆ 6 ಗಂಟೆಗೆ ಲಕ್ಷ ದೀಪೋತ್ಸವ ಕಾರ್ಯಕ್ರಮವು ವಿಜೃಂಭಣೆಯಿಂದ ಜರುಗಲಿದೆ. ಈ ಕಾರ್ಯಕ್ರಮದಲ್ಲಿ ಭಾಗವಹಿಸಲು ಜಿಲ್ಲೆಯ ಪ್ರಮುಖ ಸ್ಥಳಗಳು, ನೆರೆಯ ಜಿಲ್ಲೆಗಳು ಮತ್ತು ದೂರದ ಜಿಲ್ಲೆಗಳಾದ ವಿಜಯಪುರ, ಬಾಗಲಕೋಟೆಯಿಂದಲೂ ಸಹ ಅಪಾರ ಸಂಖ್ಯೆಯಲ್ಲಿ ಭಕ್ತಾದಿಗಳು ಆಗಮಿಸುವ ನಿರೀಕ್ಷೆ ಇದೆ.

ಭಕ್ತಾದಿಗಳು ಲಕ್ಷದೀಪೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿ ತಮ್ಮ ಸ್ಥಳಗಳಿಗೆ ಹಿಂದಿರುಗಲು ಅನುಕೂಲವಾಗುವಂತೆ ಹುಬ್ಬಳ್ಳಿಯಿಂದ ಜಿಲ್ಲೆಯೊಳಗೆ ಪ್ರಮುಖ ಸ್ಥಳಗಳಿಗೆ ಹಾಗೂ ಹೊರ ಜಿಲ್ಲೆಗಳಿಗೆ ಹೆಚ್ಚುವರಿ ವಿಶೇಷ ಬಸ್ಸುಗಳ ವ್ಯವಸ್ಥೆ ಮಾಡಲಾಗಿದೆ. ವಿಶೇಷ ಬಸ್ಸುಗಳು ಹೊಸೂರು ಬಸ್ ನಿಲ್ದಾಣ ಹಾಗೂ ಗೋಕುಲ ರಸ್ತೆ ಬಸ್ ನಿಲ್ದಾಣದಿಂದ ಹೊರಡುತ್ತವೆ.

ಹೊಸೂರು ಬಸ್ ನಿಲ್ದಾಣ ನವಲಗುಂದ, ನರಗುಂದ, ಬಾಗಲಕೋಟೆ, ವಿಜಯಪುರ, ಗದಗ, ರಾಯಚೂರು, ಕೊಪ್ಪಳ, ಹೊಸಪೇಟೆ ಕಡೆಗೆ ಹೋಗುವ ಬಸ್ಸುಗಳು ಈ ಬಸ್ ನಿಲ್ದಾಣದಿಂದ ಹೊರಡುತ್ತವೆ.ಹೆಚ್ಚಿನ ಮಾಹಿತಿಗಾಗಿ 7760991662 / 7760991685 ಸಂಖ್ಯೆಗೆ ಸಂಪರ್ಕಿಸಬಹುದಾಗಿದೆ.

ಗೋಕುಲ ರಸ್ತೆ ಬಸ್ ನಿಲ್ದಾಣ ಬೆಳಗಾವಿ,ಶಿರಸಿ, ಕಾರವಾರ, ಮಂಗಳೂರು, ಹಾವೇರಿ, ರಾಣೆಬೆನ್ನೂರು, ದಾವಣಗೆರೆ, ಶಿವಮೊಗ್ಗ ಕಡೆಗೆ ಹೋಗುವ ಬಸ್ಸುಗಳು ಈ ಬಸ್ ನಿಲ್ದಾಣದಿಂದ ಹೊರಡುತ್ತವೆ. ಹೆಚ್ಚಿನ ಮಾಹಿತಿಗಾಗಿ 7760991682 ಸಂಖ್ಯೆಗೆ ಸಂಪರ್ಕಿಸಬಹುದಾಗಿದೆ.

ಭಕ್ತಾದಿಗಳು ಹಾಗೂ ಸಾರ್ವಜನಿಕ ಪ್ರಯಾಣಿಕರು ವಿಶೇಷ ಬಸ್ಸುಗಳ ಸದುಪಯೋಗಪಡಿಸಿಕೊಳ್ಳುವಂತೆ ವಿಭಾಗೀಯ ನಿಯಂತ್ರಣಾಧಿಕಾರಿಯವರು ಮನವಿ ಮಾಡಿದ್ದಾರೆ.

Previous articleಪ್ರತೀಕಾರದ ರೋಚ`ಕಥೆ’
Next articleಪುದುಚೆರಿಗೆ ಇಂದು ಚಂಡಮಾರುತ