ಬೆಂಗಳೂರು: ಕಳೆದ ಎರಡು ತಿಂಗಳುಗಳಿಂದ ಕರ್ನಾಟಕದಲ್ಲಿ ಆಡಳಿತ ಯಂತ್ರ ಸಂಪೂರ್ಣವಾಗಿ ಕುಸಿದಿದೆ. ಸಿದ್ದರಾಮಯ್ಯನವರು ಯಾವುದೇ ಕ್ಷಣದಲ್ಲಿ ಸಿಎಂ ಸ್ಥಾನಕ್ಕೆ ರಾಜೀನಾಮೆ ಕೊಡಬಹುದು. ಅವರು ನಿರ್ಗಮಿಸುತ್ತಿರುವ ಮುಖ್ಯಮಂತ್ರಿ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಭವಿಷ್ಯ ನುಡಿದರು.
ದೆಹಲಿಯಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಸಚಿವರಿಗೆ ಸಿದ್ದರಾಮಯ್ಯ ಮೇಲೆ ವಿಶ್ವಾಸ ಇಲ್ಲ. ವಿಧಾನಸೌಧಕ್ಕೂ ಸಚಿವರು ಹೋಗುತ್ತಿಲ್ಲ. ಯಾವಾಗ ಮುಖ್ಯಮಂತ್ರಿ ರಾಜೀನಾಮೆ ಕೊಡುತ್ತಾರೋ, ಯಾವಾಗ ಸಿದ್ದರಾಮಯ್ಯರ ಪರವಾಗಿ ಬ್ಯಾಟಿಂಗ್ ಮಾಡಲು ದೆಹಲಿಗೆ ಹೋಗಬೇಕೋ ಎಂಬ ಆತಂಕ ಅವರಲ್ಲಿದೆ ಎಂದು ವಿಶ್ಲೇಷಿಸಿದರು.
ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ವೈಷ್ಣೋದೇವಿಗೆ ಹೋಗಿ ಬಂದಿದ್ದಾರೆ. ತಾಯಿ ಆಶೀರ್ವಾದ ಬೇಡಿಕೊಂಡು ಬಂದಂತಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಆಡಳಿತದ ಕ್ಷಣಗಣನೆ ಆರಂಭವಾಗಿದೆ. ಯಾವುದೇ ಕ್ಷಣದಲ್ಲಿ ರಾಜೀನಾಮೆ ಕೊಡಬಹುದು ಎಂದು ಹೇಳಿದರು. ಬಿಜೆಪಿ-ಜೆಡಿಎಸ್ ಪಾದಯಾತ್ರೆಯಲ್ಲಿ ಸಾವಿರಾರು ಜನರು ಉತ್ಸಾಹದಿಂದ ಭಾಗವಹಿಸಿದ್ದರು. ಪಾಪ; ಕಾಂಗ್ರೆಸ್ಸಿಗರು ಗಾಬರಿಯಿಂದ ನಮ್ಮ ಪಾದಯಾತ್ರೆ ತಲುಪುವ ಮುನ್ನ ಜನಾಂದೋಲನ ಮಾಡಿದ್ದರು. ಮತ್ತೊಂದೆಡೆ ಸ್ವತಃ ಸಿದ್ದರಾಮಯ್ಯನವರು ಮೈಸೂರಿನಲ್ಲಿದ್ದು, ಜನಾಂದೋಲನಕ್ಕೆ ಸಿದ್ಧತೆ ಮಾಡಿದ್ದರು. ಮುಖ್ಯಮಂತ್ರಿಗಳು ರಾಜ್ಯದ ಜನರ ವಿಶ್ವಾಸ ಕಳಕೊಂಡಿದ್ದಾರೆ. ಅವರ ಕುರಿತು ಕಾಂಗ್ರೆಸ್ಸಿನ ಶಾಸಕರೂ ವಿಶ್ವಾಸ ಕಳಕೊಳ್ಳುತ್ತಿದ್ದಾರೆ. ಹೈಕೋರ್ಟಿನ ತೀರ್ಪು ಬಂದ ಬಳಿಕವಾದರೂ ಸಿದ್ದರಾಮಯ್ಯ ರಾಜೀನಾಮೆ ನೀಡಲಿದ್ದಾರೆ ಎಂದು ವಿಜಯೇಂದ್ರ ವಿಶ್ವಾಸ ವ್ಯಕ್ತಪಡಿಸಿದರು.
ಸಿಎಂ ಸಿದ್ದರಾಮಯ್ಯ ಅವರು ಪತ್ನಿ ಹೆಸರಲ್ಲಿ ಪಡೆದಿರುವ ೧೪ ಮುಡಾ ನಿವೇಶನಗಳು ಮತ್ತೇ ಮುಡಾ ಪಾಲಾಗಿ ಬಡವರಿಗೆ ಸಿಗಲಿವೆ. ಕಾಂಗ್ರೆಸ್ ಸರಕಾರವು ಅಧಿಕಾರಕ್ಕೆ ಬಂದ ಬಳಿಕ ಭ್ರಷ್ಟಾಚಾರದಲ್ಲಿ ಮುಳುಗಿದೆ.
ಅಭಿವೃದ್ಧಿ ಕೆಲಸಗಳು ಶುರುವೇ ಆಗಿಲ್ಲ. ಯಾವುದೇ ಹೊಸ ಯೋಜನೆಯನ್ನು ಸಿದ್ದರಾಮಯ್ಯನವರ ನೇತೃತ್ವದ ಕಾಂಗ್ರೆಸ್ ಸರಕಾರ ಅನುಷ್ಠಾನ ಮಾಡುತ್ತಿಲ್ಲ ಎಂದು ಟೀಕಿಸಿದರು.