ಹಾವೇರಿ(ಶಿಗ್ಗಾವಿ): ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ಶಿಗ್ಗಾವಿ ಸವಣೂರು ಕ್ಷೇತ್ರದಲ್ಲಿ ಒಂದೇ ಒಂದು ಮನೆ ಕಟ್ಟಿಸಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಮಾಡಿದ್ದ ಆರೋಪಕ್ಕೆ ಇಂದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ತಿರುಗೇಟು ನೀಡಿದ್ದಾರೆ.
ಅವರು ಮಂಗಳವಾರ ಶಿಗ್ಗಾವಿ ತಾಲೂಕಿನ ಹಿರೇಮಣಕಟ್ಟಿ ಗ್ರಾಮಕ್ಕೆ ಭೇಟಿ ನೀಡಿ ಪ್ರವಾಹದ ಸಂದರ್ಭದಲ್ಲಿ ಶಿಗ್ಗಾವಿ ತಾಲೂಕಿನ ಹಿರೇಮಣಕಟ್ಟಿ ಗ್ರಾಮದಲ್ಲಿ ತಮ್ಮ ಅವಧಿಯಲ್ಲಿ 5 ಲಕ್ಷ ರೂ. ನೀಡಿ ನಿರ್ಮಿಸಿದ ಮನೆಯ ಮುಂದೆ ಫಲಾನುಭವಿಯೊಂದಿಗೆ ನಿಂತು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ತಿರುಗೇಟು ನೀಡಿದ್ದಾರೆ.
ಸನ್ಮಾನ್ಯ ಮುಖ್ಯಮಂತ್ರಿ ಗೌರವಾನ್ವಿತ ಸಿದ್ದರಾಮಯ್ಯ ಅವರೇ ನಿನ್ನೆ ನೀವು ಹುಲಗೂರಿನಲ್ಲಿ ಬಸವರಾಜ ಬೊಮ್ಮಾಯಿಯವರು ಶಿಗ್ಗಾವಿಯಲ್ಲಿ ಒಂದೂ ಮನೆ ಕಟ್ಟಿಲ್ಲ ಅಂತ ಹೇಳಿದ್ದಿರಿ, ಅದು ಹಸಿ ಸುಳ್ಳು, ಇಲ್ಲಿ ನಿಮ್ಮ ಕಣ್ಣ ಮುಂದೆ ಇದೆ. 2021-22ರಲ್ಲಿ ಪ್ರವಾಹ ಬಂದಂತಹ ಸಂದರ್ಭದಲ್ಲಿ ಶಿಗ್ಗಾವಿ ತಾಲೂಕಿನ ಹಿರೇ ಮಣಕಟ್ಟಿ ಗ್ರಾಮದಲ್ಲಿ ಸುಮಾರು ಮುನ್ನೂರು ಮನೆಗಳನ್ನು ಕಟ್ಟಿದ್ದೇವೆ. ಬಸವಣ್ಣೆಮ್ಮಾ ಮಾಳಪ್ಪನವರು ಅವರು ಐದು ಲಕ್ಷ ರೂ. ಮನೆ ನಿರ್ಮಾಣ ಮಾಡಿಕೊಂಡಿದ್ದಾರೆ. ಮನೆಯ ಮೇಲೆ ತಂದೆ ತಾಯಿ ಆಶೀರ್ವಾದ, ಜೈ ರಾಯಣ್ಣ ಅಂತ ಬರೆಸಿದ್ದಾರೆ. ಸಿದ್ದರಾಮಣ್ಣ ನಾವೂ ಜೈ ರಾಯಣ್ಣ ಅನ್ನುತ್ತೇವೆ. ನಮ್ಮ ಅಕ್ಕನೂ ಜೈ ರಾಯಣ್ಣ ಎನ್ನುತ್ತಾರೆ. ರಾಯಣ್ಣನಿಗೆ ಜಯವಾಗಿದೆ. ರಾಯಣ್ಣನಿಗೆ ಜೈ ಅಂದಿರುವುದಕ್ಕೆ ಅಕ್ಕಳಿಗೆ ಜಯವಾಗಿದೆ ಎಂದರು.
ನಮ್ಮ ಬಿಜೆಪಿ ಸರ್ಕಾರ ಇದ್ದಾಗ 2021-22 ಎಲ್ಲಿ ಪ್ರವಾಹದಿಂದ ಮನೆ ಕಳೆದುಕೊಂಡವರ ಸುಮಾರು 12,500 ಮನೆಗಳನ್ನು ಶಿಗ್ಗಾವಿ ಕ್ಷೇತ್ರದಲ್ಲಿ ಕಟ್ಟಿದ್ದೇವೆ. ಇದೇ ರೀತಿ ನಾವು ಕಟ್ಟಿಸಿರುವ ಎಲ್ಲರ ಮನೆಗಳ ಮುಂದೆ ನಿಂತು ಫೋಟೊಗಳನ್ನು ಕಳುಹಿಸುತ್ತೇನೆ. ನೀವು ಹಸಿ ಸುಳ್ಳು ಹೇಳುವುದನ್ನು ಬಿಡಿ, ಮುಖ್ಯಮಂತ್ರಿ ಸ್ಥಾನಕ್ಕೆ ಗೌರವ ಇರಲಿ, ಹಸಿ ಸುಳ್ಳು ಹೇಳಬೇಡಿ, ನಂಬುವಂತಹ ಸುಳ್ಳು ಹೇಳಿ, ನಮ್ಮ ಕೆಲಸಕ್ಕೆ ಪುರಾವೆ ಇಲ್ಲಿದೆ ಎಂದು ಹೇಳಿದರು.