ಸಿಡಿಲು ಬಡಿದು ವ್ಯಕ್ತಿ ಸಾವು

ಹಾವೇರಿ: ಹಾವೇರಿ ನಗರ ಸೇರಿದಂತೆ ಜಿಲ್ಲೆಯ ವಿವಿಧೆಡೆ ಸೋಮವಾರ ರಾತ್ರಿ ಗುಡುಗು, ಸಿಡಿಲು ಸಹಿತ  ಮಳೆಯಾಗಿದೆ.

ಕಳೆದ ನಾಲ್ಕೈದು ದಿನಗಳಿಂದ ನಿತ್ಯವೂ ಜಿಲ್ಲೆಯಲ್ಲಿ ಮಳೆಯಾಗುತ್ತಿದ್ದು, ಸೋಮವಾರ ರಾತ್ರಿಯೂ ಹಾನಗಲ್ಲ, ಬ್ಯಾಡಗಿ, ಹಾವೇರಿ, ರಾಣೆಬೆನ್ನೂರು, ಹಿರೇಕೆರೂರು, ರಟ್ಟೀಹಳ್ಳಿ ಸೇರಿದಂತೆ ಜಿಲ್ಲೆಯ ಬಹುತೇಕ ಕಡೆ ಮಳೆಯಾಗಿದೆ.  ಇಡೀ ದಿನ ಸೆಕೆ ವಾತಾವರಣ  ಇದ್ದರೂ ರಾತ್ರಿ ವೇಳೆಗೆ  ಏಕಾಏಕಿ ಗುಡುಗು ಗಾಳಿಯೊಂದಿಗೆ ಮಳೆ ಸುರಿದಿದೆ. ಜಿಲ್ಲೆಯಲ್ಲಿ ಸುರಿಯುತ್ತಿರುವ ಮಳೆ ರೈತರ ಮೊಗದಲ್ಲಿ ಮಂದಹಾಸ ಮೂಡಿಸಿದ್ದು, ಕೃಷಿ ಚಟುವಟಿಕೆಗಳು ಗರಿಗೆದರಿವೆ.

ಸಿಡಿಲು ಬಡಿದು ಸಾವು : ಸಿಡಿಲು ಬಡಿದು ವ್ಯಕ್ತಿಯೋರ್ವ ಮೃತಪಟ್ಟ ಘಟನೆ ಸೋಮವಾರ ಸಂಜೆ ಹಾವೇರಿ ತಾಲೂಕಿನ ಹೊಸರಿತ್ತಿನಲ್ಲಿ ನಡೆದಿದೆ.

ಹನಮಂತಗೌಡ ಶಿವನಗೌಡ ರಾಮನಗೌಡ (40) ಮೃತ ಕುರಿಗಾಯಿ ಎಂದು ಗುರುತಿಸಲಾಗಿದೆ.
ಕುರಿಗಳನ್ನು ಮೇಸಿಕೊಂಡು ಫ್ಲಾಟ್ ಏರಿಯಾ ಓಣಿ ದಾರಿ ಹೊಲದಲ್ಲಿ ನಿಂತುಕೊಂಡಾಗ ಸಿಡಿಲು ಬಡಿದು ಮೃತಪಟ್ಟಿದ್ದಾರೆ.
ಸ್ಥಳಕ್ಕೆ ತಹಶೀಲ್ದಾರ್ ಶರಣಮ್ಮ ಕಾರಿ, ಗುತ್ತಲ ಪೊಲೀಸ್ ಠಾಣೆಯ ಪಿಎಸ್ಐ ಬಸನಗೌಡ ಬಿರಾದರ, ರವಿ ಮಲ್ಲಾಡದ ಸೇರಿದಂತೆ ಅಧಿಕಾರಿಗಳು  ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.