ದಾವಣಗೆರೆ: ‘ಪಾಕಿಸ್ತಾನ ವಿರುದ್ಧ ಯುದ್ಧ ಅನಿವಾರ್ಯವಲ್ಲ’ ಎಂಬ ಹೇಳಿಕೆ ಮಾಧ್ಯಮಗಳ ಸೃಷ್ಟಿ. ಇದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಹೇಳಿಕೆಯಲ್ಲ ಎಂದು ಚನ್ನಗಿರಿ ಶಾಸಕ ಶಿವಗಂಗಾ ಬಸವರಾಜ್ ಮುಖ್ಯಮಂತ್ರಿಗಳ ಪರವಾಗಿ ಬ್ಯಾಟಿಂಗ್ ಬೀಸಿದ್ದಾರೆ.
ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹೇಳಿಕೆಯನ್ನು ಬಿಜೆಪಿಯವರು ತಪ್ಪಾಗಿ ಅರ್ಥೈಸಿಕೊಂಡಿದ್ದಾರೆ. ಬಿಜೆಪಿಯವರು ತಪ್ಪಾಗಿ ಅರ್ಥೈಸಿಕೊಳ್ಳುವುದೇ ಕೆಲಸವಾಗಿದೆ ಎಂದು ಛೇಡಿಸಿದರು.
ಮುಖ್ಯಮಂತ್ರಿಗಳು ಪಾಕಿಸ್ತಾನ ವಿರುದ್ಧ ಯುದ್ಧ ಬೇಡ ಎಂದು ಹೇಳಿಲ್ಲ. ಸಂದರ್ಭದಕ್ಕೆ ಸರಿಯಾಗಿ ನಡೆದುಕೊಳ್ಳಬೇಕು. ಯುದ್ಧ ಮಾಡುವ ಸಂದರ್ಭ ಬಂದರೆ ಮಾಡೋಣ ಎಂದು ಹೇಳಿದ್ದಾರೆ. ಇದನ್ನೇ ಬಿಜೆಪಿಯವರು ತಪ್ಪಾಗಿ ಅರ್ಥೈಸಿಕೊಂಡು ಮುಖ್ಯಮಂತ್ರಿಗಳ ವಿರುದ್ಧ ಜನರಿಗೆ ತಪ್ಪು ಸಂದೇಶ ನೀಡುತ್ತಿದ್ದಾರೆ ಎಂದರು.
ಮುಖ್ಯಮಂತ್ರಿಗಳ ಬದಲಾವಣೆ ಆಗಲಿದೆಯಾ ಎಂಬ ಪ್ರಶ್ನೆಗೆ ಡಿಸೆಂಬರ್ ನಂತರ ಈ ಬಗ್ಗೆ ಮಾತನಾಡುವೆ ಎಂಬುದಷ್ಟೇ ಉತ್ತರ ನೀಡಿದರು. ರಾಜ್ಯದಲ್ಲಿ ಸಾದು ಲಿಂಗಾಯತರ ೬೦ ಸಾವಿರ ತೋರಿಸಿದ್ದಾರೆ. ಆದರೆ ನನ್ನ ಮತ ಕ್ಷೇತ್ರದಲ್ಲಿಯೇ ೬೦ ಸಾವಿರ ಸಾದು ಲಿಂಗಾಯತರಿದ್ದಾರೆ. ನಾನು ಕೂಡ ನನ್ನ ಮತ ಕ್ಷೇತ್ರದಲ್ಲಿ ಜಾತಿ ಗಣತಿ ಸರ್ವೆ ಮಾಡಿಸುತ್ತಿದ್ದೇನೆ. ಪ್ರತಿ ಗ್ರಾಮದಲ್ಲಿ ಮತದಾರರ ಪಟ್ಟಿ ಹಿಡಿದು ಸರ್ವೆ ನಡೆಸಲಾಗುತ್ತಿದೆ ಎಂದು ಮಾಹಿತಿ ನೀಡಿದರು.