ಚಿಕ್ಕಮಗಳೂರು: ಮುಡಾ ಹಗರಣಕ್ಕೆ ಸಂಬಂಧಿಸಿದಂತೆ ರಾಜ್ಯಪಾಲರು ಸಮಗ್ರ ತನಿಖೆ ನಡೆಸಲು ಪ್ರಾಸಿಕ್ಯೂಷನ್ ಅನುಮತಿ ನೀಡಿದ್ದು, ಸಿಎಂ ಸ್ಥಾನಕ್ಕೆ ಸಿದ್ದರಾಮಯ್ಯ ರಾಜಿನಾಮೆ ನೀಡಿ ನಿಷ್ಪಕ್ಷಪಾತ ತನಿಖೆಗೆ ಸಹಕರಿಸಲಿ ಎಂದು ವಿಧಾನ ಪರಿಷತ್ ಸದಸ್ಯ ಸಿ.ಟಿ ರವಿ ಆಗ್ರಹಿಸಿದರು.
ಅವರು ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿ ಇಂತಹ ಸಂದರ್ಭದಲ್ಲಿ ಹಿಂದಿನ ಬಹುತೇಕ ಮುಖ್ಯಮಂತ್ರಿಗಳಾಗಿದ್ದವರು ಮೇಲ್ಪಂಕ್ತಿ ಹಾಕಿದ್ದಾರೆ. ರಾಮಕೃಷ್ಣ ಹೆಗ್ಡೆ ಅವರ ಮೇಲೆ ವಿವಿಧ ಹಗರಣಗಳ ಆರೋಪ ಬಂದಾಗ ರಾಜಿನಾಮೆ ನೀಡಿದ್ದರು ಎಂದು ತಿಳಿಸಿದರು.
ಬಿ.ಎಸ್ ಯಡೀಯೂರಪ್ಪ ಮುಖ್ಯಮಂತ್ರಿಯಾಗಿದ್ದಾಗ ಪ್ರಾಸಿಕ್ಯೂಷನ್‌ಗೆ ಅನುಮತಿ ಕೊಟ್ಟಾಗ ತಕ್ಷಣ ರಾಜಿನಾಮೆ ನೀಡಿದ್ದರು. ಮುಖ್ಯಮಂತ್ರಿ ಸಿದ್ದರಾಮಯ್ಯನವರು ೪೦ ವರ್ಷಗಳ ಸುದೀರ್ಘ ರಾಜಕೀಯ ಅನುಭವ ಇರುವವರಾಗಿದ್ದು, ಆ ಮೇಲ್ಪಂಕ್ತಿಯನ್ನು ಪಾಲಿಸುತ್ತಾರೆಂಬ ನಂಬಿಕೆ ಇದೆ ಎಂದರು. ರಾಜ್ಯದ ರಾಜಕೀಯ ನಾಯಕರು ಅನುಸರಿಸಿರುವ ನೈತಿಕ ಮೌಲ್ಯವನ್ನು ಸಿದ್ದರಾಮಯ್ಯನವರು ಎತ್ತಿ ಹಿಡಿಯಬೇಕು ಎಂದು ವಿನಂತಿಸುತ್ತೇನೆ ಎಂದರು