ಸಿಎಂ ಬದಲಾವಣೆ ಪ್ರಸಂಗ ಬಂದ್ರೆ ನಾನೇ ಸ್ಪರ್ಧಿಸುವೆ

0
7
ಶಾಮನೂರು ಶಿವಶಂಕರಪ್ಪ

ದಾವಣಗೆರೆ: ಸಿದ್ದರಾಮಯ್ಯನವರ ಮೇಲೆ ಹೈಕಮಾಂಡ್ ಆಶೀರ್ವಾದ ಇರುವವರೆಗೂ ಮುಖ್ಯಮಂತ್ರಿಯಾಗಿರುತ್ತಾರೆ. ಒಂದು ವೇಳೆ ಸಿಎಂ ಬದಲಾವಣೆ ಪ್ರಸಂಗ ಬಂದರೆ ಸಿಎಂ ಸ್ಥಾನಕ್ಕೆ ನಾನೇ ಸ್ಪರ್ಧೆ ಮಾಡುತ್ತೇನೆ ಎಂದು ಹಿರಿಯ ಶಾಸಕ ಡಾ.ಶಾಮನೂರು ಶಿವಶಂಕರಪ್ಪ ಹೇಳಿದ್ದಾರೆ.
ನಗರದ ತಮ್ಮ ನಿವಾಸ ‍ಶಿವ ಪಾರ್ವತಿಯಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುಡಾ ಪ್ರಕರಣದಲ್ಲಿ ವಿನಾಕಾರಣ ಸಿದ್ದರಾಮಯ್ಯ ವಿರುದ್ಧ ಆರೋಪ ಮಾಡಲಾಗುತ್ತಿದೆ. ಈ ಪ್ರಕರಣದಲ್ಲಿ ಯಾವುದೇ ಹುರುಳಿಲ್ಲ. ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿ ಮುಂದುವರಿಯುತ್ತಾರೆ ಎಂದರು.
ಮುಖ್ಯಮಂತ್ರಿಯಾಗಿ ಸಿದ್ದರಾಮಯ್ಯ ಒಳ್ಳೆಯ ಕೆಲಸಗಳನ್ನು ಮಾಡುತ್ತಿದ್ದಾರೆ. ಮುಂದೆಯೂ ಮುಖ್ಯಮಂತ್ರಿಯಾಗಿರುತ್ತಾರೆ. ರಾಜಕೀಯದಲ್ಲಿ ಸೀನಿಯರ್, ಜೂನಿಯರ್ ಅಂತಾ ಪ್ರಶ್ನೆಯೇ ಬರುವುದಿಲ್ಲ. ಕಾಂಗ್ರೆಸ್ ಪಕ್ಷದ ಹೈಕಮಾಂಡ್‌ ಯಾರನ್ನು ಮುಖ್ಯಮಂತ್ರಿ ಮಾಡಬೇಕೆಂಬುದಾಗಿ ಮನಸ್ಸು ಮಾಡುತ್ತದೋ ಅಂತಹವರೇ ಮುಖ್ಯಮಂತ್ರಿಯಾಗುತ್ತಾರೆ ಎಂದು ಅವರು ತಿಳಿಸಿದರು.
ಒಂದು ಮುಖ್ಯಮಂತ್ರಿ ಬದಲಾವಣೆಯಂತಹ ಪ್ರಸಂಗ ಎದುರಾದರೆ ನಾನೂ ಸಹ ಮುಖ್ಯಮಂತ್ರಿ ಹುದ್ದೆಯ ಆಕಾಂಕ್ಷಿ. ಎಲ್ಲಾ ಶಾಸಕರ ಅಭಿಪ್ರಾಯ ಸಂಗ್ರಹಿಸಿ, ಮತ ಹಾಕಿದರೆ ಮುಖ್ಯಮಂತ್ರಿಯಾಗುತ್ತಾರೆ. ಅಂತಹ ಸಂದರ್ಭ ಬಂದರೆ ನಾನು ಮುಖ್ಯಮಂತ್ರಿ ಹುದ್ದೆಯನ್ನು ಬಿಡುವುದಿಲ್ಲ. ನಾನೂ ಸಿಎಂ ಸ್ಥಾನದ ಸ್ಪರ್ಧೆಯಲ್ಲಿ ಇದ್ದೇ ಇರುತ್ತೇನೆ ಎಂದು ಅವರು ಹೇಳಿದರು.
ಕಾಂಗ್ರೆಸ್ ಪಕ್ಷದ ಶಾಸಕರು ನಿರ್ಧಾರ ಕೈಗೊಳ್ಳುತ್ತಾರೆ. ಶಾಸಕರು ಯಾರಿಗೆ ಬಹುಮತ ಕೊಡುತ್ತಾರೆ ಅಂತಹವರಿಗೆ ಕಾಂಗ್ರೆಸ್ ಪಕ್ಷದ ಹೈಕಮಾಂಡ್ ಒಪ್ಪುವುದು. ಸದ್ಯಕ್ಕೆ ಅಂತಹ ಪರಿಸ್ಥಿತಿಯೇನೂ ಇಲ್ಲ. ಸುಮ್ಮನೇ ಬಾಯಿಗೆ ಬಂದಂತೆಲ್ಲಾ ಮಾತನಾಡುವುದರಿಂದ ಪ್ರಯೋಜನವೂ ಇಲ್ಲ. ನಾನೂ ಪಕ್ಷದಲ್ಲಿ ಹಿರಿಯನಿದ್ದೇನೆ. ಮುಖ್ಯಮಂತ್ರಿ ಆಗಬೇಕೆಂದು ಕೆಲವರು ಬಾಯಿಗೆ ಬಂದಂತೆಲ್ಲಾ ಮಾತನಾಡುತ್ತಾ ಓಡಾಡಿಕೊಂಡಿದ್ದರೆ ಹಗುರ ಆಗ್ತಾರೆ ಅಷ್ಟೇ ಎಂದು ಪ್ರಶ್ನೆಯೊಂದಕ್ಕೆ ಅವರು ಪ್ರತಿಕ್ರಿಯಿಸಿದರು.

Previous articleಪಕ್ಕದ ಮನೆ ಮಗುವನ್ನೇ ಕಿಡ್ನಾಪ್ ಮಾಡಿ ಹಣಕ್ಕೆ ಡಿಮ್ಯಾಂಡ್
Next articleಬಸ್ ತಂಗುದಾಣ ತೆರವು ಖಂಡಿಸಿ ಪ್ರತಿಭಟನೆ