ಸಿಎಂ ಕುರ್ಚಿಗಾಗಿ ದಲಿತರು, ಲಿಂಗಾಯಿತ- ಒಕ್ಕಲಿಗರ ನಡುವೆ ಕಿತ್ತಾಟ

0
28

ಕಲಬುರಗಿ: ಸಿಎಂ ಕುರ್ಚಿಗಾಗಿ ಆಡಳಿತ ಪಕ್ಷ ಕಾಂಗ್ರೆಸ್‌ನಲ್ಲಿ ಕಿತ್ತಾಟ ನಡೆದು ಆಡಳಿತ ನಡೆಸುವಲ್ಲಿ ವಿಫಲವಾಗಿದೆ ಎಂದು ಬಿಜೆಪಿ ನಾಯಕ, ಸಂಸದ ಗೋವಿಂದ ಕಾರಜೋಳ ಹೇಳಿದರು.

ಎಸ್‌ಸಿಪಿ-ಟಿಎಸ್‌ಪಿ ಹಣ ದುರ್ಬಳಿಕೆ ವಿರುದ್ದ ಬಿಜೆಪಿ ಹಮ್ಮಿಕೊಂಡ ಹೋರಾಟದಲ್ಲಿ ಪಾಲ್ಗೊಳ್ಳಲು ಬುಧವಾರ ನಗರಕ್ಕೆ ಆಗಮಿಸಿದ ಅವರು ಸುದ್ದಿಗೋಷ್ಠಿಯಲ್ಲಿ ಮಾತನಾಡಿ ಸಿಎಂ ಕುರ್ಚಿಗಾಗಿ ದಲಿತರು, ಲಿಂಗಾಯಿತ- ಒಕ್ಕಲಿಗರ ನಡುವೆ ಕಿತ್ತಾಟ ಜೋರಾಗಿ ನಡೆಯುತ್ತಿರುವುದರಿಂದ ಆಡಳಿತ ಸಂಪೂರ್ಣ ಕುಸಿದಿದೆ. ಹೀಗಾಗಿ ಯಾವುದೇ ಅಭಿವೃದ್ಧಿ ಕಾರ್ಯ ನಡೆಯುತ್ತಿಲ್ಲ. ಮತ್ತೊಂದೆಡೆ ಸರ್ಕಾರದ ವೈಪಲ್ಯ ವಿರುದ್ಧ ಬೀದಿಗಿಳಿದು ದೊಡ್ಡ ಮಟ್ಟದಲ್ಲಿ ಹೋರಾಟ ಮಾಡಬೇಕಿರುವ ವಿಪಕ್ಷ ಬಿಜೆಪಿ ಸಹ ಊರ ಹೊರಗೆ ನಿಂತು ಕಚ್ಚಾಡು (ಬೊಗಳು)ತ್ತಿದ್ದೇವೆ. ಹೀಗಾಗಿ ಆಡಳಿತ ಪಕ್ಷವಾಗಿ ಕಾಂಗ್ರೆಸ್ ಹಾಗೂ ವಿಪಕ್ಷವಾಗಿ ಬಿಜೆಪಿ ವಿಫಲ ಹೊಂದಿವೆ ಎಂದರು. ಬಿಜೆಪಿ ಕಚ್ಚಾಟವನ್ನು ದೆಹಲಿಯವರು ಬಗೆಹರಿಸುತ್ತಾರೆ.

ಈ ಹಿಂದೆ ದಲಿತ ವರ್ಗದ ಖರ್ಗೆ ಸಿಎಂ ಆಗಬೇಕು ಎನ್ನಲಾಗುತ್ತಿತ್ತು. ಆದರೆ ಅವರಾಗಲಿಲ್ಲ. ಈಗ ದಲಿತರು ಸಿಎಂ ಆಗುವ ಅವಕಾಶವಿದೆ. ಮುಂದೆ ಕಾಂಗ್ರೆಸ್ ಮೂರಂಕಿ ದಾಟುವುದಿಲ್ಲ. ಹೀಗಾಗಿ ದಲಿತ ವರ್ಗದ ಡಾ. ಜಿ. ಪರಮೇಶ್ವರ, ರಮೇಶ ಜಾರಕಿಹೊಳಿ ಹಾಗೂ ಮುನಿಯಪ್ಪ ಹೀಗೆ ಯಾರೊಬ್ಬರಲ್ಲಿ ಒಬ್ಬರು ಸಿಎಂ ಆಗಲಿ. ಇದಕ್ಕೆ ಎಐಸಿಸಿ ಅಧ್ಯಕ್ಷರು ಮುಂದಾಗಲಿ ಹಾಗೂ ಇತಿಹಾಸ ನಿರ್ಮಾಣವಾಗಲಿ ಎಂದರು.

ಸಿಎಂ ಕಿತ್ತಾಟ ಜೋರಾಗಿ ರಾಜಕೀಯ ಡೋಲಾಯಮಾನವಾದರೆ ಬಿಜೆಪಿ ನೋಡಿಕೊಂಡು ಸುಮ್ಮನೇ ಇರೋದಿಲ್ಲ. ಮಹಾರಾಷ್ಟ್ರದಂತೆ ಇಲ್ಲೂ ಆಗುತ್ತದೆ ಎಂದು ಹೇಳಲಾಗದು. ಆದರೆ ಎಣ್ಣೆ ಬಂದಾಗ ಕಣ್ಣು ಮುಚ್ಚಿಕೊಳ್ಳುವುದಿಲ್ಲ ಎಂದು ಕಾರಜೋಳ ಮಾರ್ಮಿಕವಾಗಿ ಹೇಳಿದರು.

Previous articleಸೋಲಿನ ಬೆನ್ನಲ್ಲೇ ಏಕದಿನ ಕ್ರಿಕೆಟ್‌ಗೆ ಸ್ಟೀವ್ ಸ್ಮಿತ್ ವಿದಾಯ
Next articleಕುಡುಕ ಪತಿಯ ಕಾಟ: ಮೂವರು ಮಕ್ಕಳೊಂದಿಗೆ ಪತ್ನಿ ಆತ್ಮಹತ್ಯೆ