ಸಿಎಂ,ಡಿಸಿಎಂ ಮೇಲೆ ಕ್ರಮ ಜರುಗಿಸುವ ತಾಕತ್ ಕಾಂಗ್ರೆಸ್ ಹೈಕಮಾಂಡ್‌ಗೆ ಇಲ್ಲ

ಹುಬ್ಬಳ್ಳಿ: ಕಾಂಗ್ರೆಸ್ ಹೈಕಮಾಂಡಗೆ ಸಿಎಂ,ಡಿಸಿಎಂ ಮೇಲೆ ಕ್ರಮ ಕೈಗೊಳ್ಳುವ ತಾಕತ್ ಇಲ್ಲ ಎಂದು ಸಂಸದ, ಮಾಜಿ ಸಿಎಂ ಜಗದೀಶ ಶೆಟ್ಟರ್ ಹೇಳಿದರು.
ನಗರದಲ್ಲಿ ಮಂಗಳವಾರ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಸಿಎಂ,ಡಿಸಿಎಂ ಕಾಂಗ್ರೆಸ್ ಹಿರಿಯ ನಾಯಕರನ್ನ ಭೇಟಿಗೆ ಸಂಬಂಧಪಟ್ಟಂತೆ ಮಾತನಾಡಿದರು.
ಸುಮ್ಮನೆ ಕರೆಸಿಕೊಂಡು ಕಳಿಸುವುದು. ನಂತರ ವಾರ್ನ್ ಮಾಡಿದ್ದೇವೆ ಎಂದು ಹೇಳುತ್ತಾರೆ. ಇದರಿಂದ ಯಾವುದೇ ಪ್ರಯೋಜನ ಆಗಲ್ಲ. ಇನ್ನಷ್ಟು ಅವರಿಂದ ವಸೂಲಿ ಮಾಡಿ ಕಳಿಸುತ್ತಾರೆ ಅಷ್ಟೇ. ಒಂದು ಎಟಿಎಂ ಥರ ಬಳಸಿಕೊಳ್ಳುತ್ತಾರೆ ಎಂದರು.
ಕಾಲ್ತುಳಿತ ಪ್ರಕರಣ ಕುರಿತು ರಾಜ್ಯ ಸರ್ಕಾರ ಜವಾಬ್ದಾರಿ ತೆಗೆದುಕೊಳ್ಳದ ವಿಚಾರ, ದೊಡ ದುರಂತ ನಡೆದು ಮೂರು ಗಂಟೆ ಆದರೂ ಸರಕಾರದ ಗಮನಕ್ಕೆ ಬಂದಿಲ್ಲ ಅಂದರೆ ಏನು? ಅಧಿಕಾರಿಗಳು ತಮ್ಮ ಗಮನಕ್ಕೆ ಕೂಡಲೇ ತಂದಿಲ್ಲ ಎಂದಿದ್ದಾರೆ. ರಾಜ್ಯದಲ್ಲಿ ಸರಕಾರ ಇದೆಯೋ ಇಲ್ಲವೋ ತಿಳಿತಾ ಇಲ್ಲ. ಇಂದು ಸರಕಾರ ಹಾಗೂ ಸಿಎಂ ಅಸ್ತಿತ್ವದ ಪ್ರಶ್ನೆ ಬರುತ್ತಿದೆ. ಜವಾಬ್ದಾರಿ ವ್ಯಕ್ತಿಯಾಗಿರುವ ಸಿಎಂ ಐದು ನಿಮಿಷ ಇರಲು ಯೋಗ್ಯರಲ್ಲ. ಕೂಡಲೇ ಸಿಎಂ, ಡಿಸಿಎಂ ಸ್ಥಾನಕ್ಕೆ ರಾಜೀನಾಮೆ ಕೊಡಬೇಕು ಎಂದು ಆಗ್ರಹಿಸಿದರು.
ರಾಜ್ಯ ಸರ್ಕಾರದ ವಜಾಕ್ಕೆ ಆಗ್ರಹಿಸಿ ಬಿಜೆಪಿ ರಾಜ್ಯ ಘಟಕ ರಾಜ್ಯಪಾಲರಿಗೆ, ರಾಷ್ಟ್ರಪತಿಗಳಿಗೆ ಮನವಿ ಕೊಡುವ ಚಿಂತನೆ ಮಾಡಿದೆ. ಅನಿವಾರ್ಯ ಮನವಿ ಕೊಡಬೇಕಾಗುತ್ತದೆ. ರಾಜ್ಯ ಸರ್ಕಾರ ರಾಜ್ಯದಲ್ಲಿ ಸತ್ತು ಹೋಗಿದೆ ಎಂದು ಕಿಡಿಕಾರಿದರು.