ಬೆಳಗಾವಿ : ಬಿಜೆಪಿ ಸರ್ಕಾರದಲ್ಲಿ ಅಲ್ಪಸಂಖ್ಯಾತ ಆಯೋಗದ ಅಧ್ಯಕ್ಷರಾಗಿದ್ದ ಅನ್ವರ್ ಮಾಣಿಪ್ಪಾಡಿ ಅವರಿಗೆ ವಕ್ಫ್ ಆಸ್ತಿ ಕಬಳಿಕೆ ಬಗ್ಗೆ 150 ಕೋಟಿ ರೂ. ಆಮಿಷವೊಡ್ಡಿದ ಆರೋಪದ ಬಗ್ಗೆ ಸಿಬಿಐ ತನಿಖೆಗೆ ವಹಿಸಲಿ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಆಗ್ರಹಿಸಿದ್ದಾರೆ.
ಬೆಳಗಾವಿ ಅಧಿವೇಶನದಲ್ಲಿ ಮಾತನಾಡಿ 2016ರಲ್ಲಿ ವಕ್ಫ್ ಆಸ್ತಿ ಕಬಳಿಕೆ ಬಗ್ಗೆ ವರದಿ ನೀಡಿದ್ದರು. ಆದರೆ ಅಂದಿನ ಸಿಎಂ ಉಪಲೋಕಾಯುಕ್ತರ ವರದಿ ಮುಚ್ಚಿ ಹಾಕಿದ್ದರು. ಅಲ್ಪಸಂಖ್ಯಾತರ ಆಯೋಗದ ಹಿಂದಿನ ಅಧ್ಯಕ್ಷರು ಸರ್ಕಾರಕ್ಕೆ ಶಿಫಾರಸು ಸಲ್ಲಿಸಿದ್ದನ್ನು ಸಿದ್ದರಾಮಯ್ಯ ಸಚಿವ ಸಂಪುಟ ತಿರಸ್ಕರಿಸಿತು. ಸಿಎಂ ಅವರಿಗೆ ಸಿಬಿಐ ಬಗ್ಗೆ ಬಹಳ ವಿಶ್ವಾಸ ಇದೆ. ನಾನು ಸಿಎಂಗೆ ಸವಾಲ್ ಹಾಕುತ್ತೇನೆ, 150 ಕೋಟಿ ಆಮಿಷ ಆರೋಪವನ್ನು ಸಿಬಿಐಗೆ ವಹಿಸಲಿ. ಜತೆಗೆ ಅನ್ವರ್ ಮಾಣಿಪ್ಪಾಡಿ ವರದಿಯ ತನಿಖೆಯನ್ನೂ ಸಿಬಿಐಗೆ ಕೊಡಲಿ, ಮುಖ್ಯಮಂತ್ರಿಗಳಿಗೆ ಸಿಬಿಐ ಮೇಲೆ ವಿಶ್ವಾಸ ಬಂದಿರೋದು ಸಂತೋಷದ ವಿಷಯ. ಹಗರಣಗಳ ಸುಳಿಯಲ್ಲಿ ಸಿಲುಕಿರುವ ಸಿಎಂ ನಮ್ಮ ವಿರುದ್ಧ ಆರೋಪ ಮಾಡುತ್ತಿದ್ದಾರೆ. ಮುಡಾ ಪ್ರಕರಣದಲ್ಲಿ ಸಿಎಂ ಕುಟುಂಬ ಸಿಲುಕಿಕೊಂಡಿದ್ದು, ಇದರಿಂದ ಹೊರ ಬರಲು ಈ ರೀತಿಯ ಆರೋಪ ಮಾಡ್ತಿದ್ದಾರೆ. ನನ್ನ ಮಾತಿಗೆ ಸಚಿವ ಕೃಷ್ಣ ಭೈರೇಗೌಡ ಸೇರಿ ಕಾಂಗ್ರೆಸ್ ಸದಸ್ಯರ ಆಕ್ಷೇಪ ಮಾಡಿದ್ದಾರೆ. ಮುಡಾ ಹಗರಣ, ಹಾಗೂ ಅಬಕಾರಿ ಹಗರಣವನ್ನು ಸಿಬಿಐಗೆ ತನಿಖೆ ಕೊಡಲಿ ಎಂದರು.