Home ಅಪರಾಧ ಸಾಸಲು ಗ್ರಾಮದ ಬಳಿ ದಾವಣಗೆರೆ ಮಣಿಕಂಠ ಹತ್ಯೆ

ಸಾಸಲು ಗ್ರಾಮದ ಬಳಿ ದಾವಣಗೆರೆ ಮಣಿಕಂಠ ಹತ್ಯೆ

0

ದಾವಣಗೆರೆ: ಕಲ್ಲಿನಿಂದ ತಲೆಗೆ ಜಜ್ಜಿ ಬರ್ಬರವಾಗಿ ಹತ್ಯೆಗೈದಿರುವ ಘಟನೆ ಚಿತ್ರದುರ್ಗ ಜಿಲ್ಲೆಯ ಹೊಳಲ್ಕೆರೆ ತಾಲೂಕಿನ ಸಾಸಲು ಗ್ರಾಮದಲ್ಲಿ ಶುಕ್ರವಾರ ತಡರಾತ್ರಿ ನಡೆದಿದೆ.
ಮೂಲತಃ ಹೊನ್ನಾಳಿ ತಾಲೂಕಿನ ಮಾರಿಕೊಪ್ಪ ಗ್ರಾಮದ ದಾವಣಗೆರೆ ನಿವಾಸಿ ಮಣಿಕಂಠ (೩೪) ಹತ್ಯೆಗೀಡಾದ ವ್ಯಕ್ತಿ ಎಂದು ಗುರುತಿಸಲಾಗಿದೆ.
ಶುಕ್ರವಾರ ರಾತ್ರಿ ಸಾಸಲು ಗ್ರಾಮದ ಪೆಟ್ರೋಲ್ ಬಂಕ್ ಬಳಿ ಸ್ನೇಹಿತರೊಂದಿಗೆ ಜಗಳ ನಡೆದಿದೆ. ಈ ವೇಳೆ ಮಣಿಕಂಠ ಅವರ ತಲೆಗೆ ಕಲ್ಲಿನಿಂದ ಜಜ್ಜಿ ಹತ್ಯೆ ಮಾಡಲಾಗಿದೆ ಎನ್ನಲಾಗಿದ್ದು, ಸ್ನೇಹಿತರ ಜೊತೆಗೆ ರಾತ್ರಿ ಬುಲೆರೋ ವಾಹನದಲ್ಲಿ ಮಣಿಕಂಠ ಬಂದಿದ್ದರು ಎಂದು ಮಾಹಿತಿ ಸಿಕ್ಕಿದೆ.
ಘಟನಾ ಸ್ಥಳಕ್ಕೆ ಎಸ್ಪಿ ರಂಜಿತ್‌ಕುಮಾರ್ ಬಂಡಾರು, ಹೆಚ್ಚುವರಿ ಎಸ್ಪಿ ಕುಮಾರಸ್ವಾಮಿ, ಡಿವೈಎಸ್ಪಿ ವಿ.ಕೆ.ದಿನಕರ್, ಸಿಪಿಐ ಚಿಕ್ಕಣ್ಣನವರ, ಪಿಎಸ್‌ಐ ಕು.ನೇತ್ರಾವತಿ, ಶ್ವಾನದಳ, ಎಫ್‌ಎಸ್‌ಎಲ್ ತಂಡ ಭೇಟಿ ನೀಡಿ ಪರಿಶೀಲನೆ ನಡೆಸಿದೆ. ಅನೈತಿಕ ಸಂಬಂಧ ಹಿನ್ನೆಲೆಯಲ್ಲಿ ಕೊಲೆ ನಡೆದಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ. ಆದರೆ, ನಿಖರ ಮಾಹಿತಿ ಲಭ್ಯವಾಗಿಲ್ಲ. ಶಂಕಿತ ಕೊಲೆ ಆರೋಪಿಯೊಬ್ಬನನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.
ಸ್ಥಳದಲ್ಲಿ ಸಿಗರೇಟ್ ಹಚ್ಚುವ ಲೈಟರ್, ಗುಟ್ಕಾ ಪ್ಯಾಕೆಟ್‌ಗಳು, ತಲೆಗೆ ಜಜ್ಜಿದ್ದ ಕಲ್ಲು ಪತ್ತೆಯಾಗಿದೆ. ರಕ್ತಸಿಕ್ತವಾಗಿದ್ದ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ. ಈ ಕುರಿತು ಚಿಕ್ಕಜಾಜೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ಆರೋಪಿಗಳ ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದಾರೆ.
ದಾವಣಗೆರೆಯ ಪಿ.ಬಿ.ರಸ್ತೆಯಲ್ಲಿ ರಾತ್ರಿ ವೇಳೆ ತಿಂಡಿ ಮಾಡುವ ಹೊಟೇಲ್ ನಡೆಸುತ್ತಿದ್ದ ಮಣಿಕಂಠ, ಡಾ. ಪುನೀತ್‌ರಾಜಕುಮಾರ್ ಅವರ ಅಭಿಮಾನಿಯಾಗಿದ್ದರು. ಪುನೀತ್ ಜನ್ಮದಿನ ಬಂತೆಂದರೆ ಹಬ್ಬದಂತೆ ಆಚರಿಸುವ ತಂಡದಲ್ಲಿ ಪ್ರಮುಖರಾಗಿದ್ದರು. ಎಲ್ಲರೊಂದಿಗೆ ಅನ್ಯೂನ್ಯವಾಗಿದ್ದರು. ಸ್ನೇಹಿತರ ಬಳಗವನ್ನೇ ಸಂಪಾದಿಸಿದ್ದರು ಎಂದು ತಿಳಿದು ಬಂದಿದೆ.

Exit mobile version