ಗದಗ: ರಾಜ್ಯ ಸರಕಾರ ಮೈಕ್ರೋ ಫೈನಾನ್ಸ್ ಸುಗ್ರೀವಾಜ್ಞೆ ತಂದರೂ ಸಹ ಗದಗನಲ್ಲಿ ಮೀಟರ ಬಡ್ಡಿ ದಂಧೇಕೋರರ ಅಟ್ಟಹಾಸ ಮುಂದುವರೆದಿದೆ. ಶಿಕ್ಷಣ ಸಂಸ್ಥೆಯ ನಿರ್ದೇಶಕ ಹಾಗೂ ಉದ್ದಿಮೆದಾರನೋರ್ವನನ್ನು ಸತತ 36 ಗಂಟೆಗಳ ಕಾಲ ವಸತಿ ಗೃಹದಲ್ಲಿ ಕೂಡಿ ಹಾಕಿ ಚಿತ್ರಹಿಂಸೆ ನೀಡಿದ ಪ್ರಕರಣ ಬೆಳಕಿಗೆ ಬಂದಿದೆ.
ಉದ್ದಿಮೆದಾರನಿಗೆ ಚಿತ್ರಹಿಂಸೆ ನೀಡಿ ಬಲವಂತದಿಂದ ಸಾಲ ವಸೂಲಾತಿ ಮಾಡಿದ ಪ್ರಕರಣದಲ್ಲಿ ಪೊಲೀಸರು ಐದು ಜನರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.
ಇಲ್ಲಿಯ ಮುಳಗುಂದ ನಾಕಾ ಪ್ರದೇಶದಲ್ಲಿರುವ ಮಂಜುನಾಥ ರೆಸಿಡೆನ್ಸಿಯ ಕೊಠಡಿಯಲ್ಲಿ ಸಾಲ ಪಡೆದಿದ್ದ ಉದ್ದಿಮೆದಾರನನ್ನು ಕೂಡಿ ಹಾಕಿ ಬಿಯರ್ ಬಾಟಲಿಯಿಂದ ಹೊಡೆಯಲಾಗಿದೆ. ಸಾಲ ವಸೂಲಾತಿಗಾಗಿ ಸತತ 36 ಗಂಟೆಗಳ ಕಾಲ ಚಿತ್ರಹಿಂಸೆ ನೀಡಿದ್ದರಿಂದ ಯುವ ಉದ್ದಿಮೆದಾರ ನಲುಗಿ ಹೋಗಿದ್ದಾನೆ.
ಪ್ರಕರಣದ ವಿವರ: ವಿದ್ಯಾದಾನ ಸಮಿತಿಯ ನಿರ್ದೇಶಕ ಹಾಗೂ ಉದ್ದಿಮೆದಾರ ವಾದಿರಾಜ ಧೀರೇಂದ್ರ ಹುಯಿಲಗೋಳ ಮೀಟರ್ ಬಡ್ಡಿದಂಧೆಕೋರರಿದಂದ ಶೇ. ೧೦ರಂತೆ ಸಾಲ ಪಡೆದಿದ್ದರು. ಈಗಾಗಲೇ ಎಂಟು ತಿಂಗಳಿನಲ್ಲಿ ಸುಮಾರು ಎಂಟು ಲಕ್ಷ ರೂಪಾಯಿಗಳನ್ನು ಮರುಪಾವತಿ ಮಾಡಿದ್ದಾರೆ. ಕಳೆದ ಎರಡು ತಿಂಗಳುಗಳಿಂದ ಸಾಲದ ಅಸಲು, ಬಡ್ಡಿ ಪಾವತಿಸಿರಲಿಲ್ಲ.
ಮೀಟರ ಬಡ್ಡಿದಂಧೆಕೋರರು ವಾದಿರಾಜ ಧೀರೇಂದ್ರ ಹುಯಿಲಗೋಳನನ್ನು ಪುಸಲಾಯಿಸಿ ವೆಂಕಟೇಶ ಚಿತ್ರಮಂದಿರದ ಹತ್ತಿರ ಕರೆದುಕೊಂಡು ಬಂದಿದ್ದಾರೆ. ಅಲ್ಲಿ ಅತನೊಂದಿಗೆ ಮಾತನಾಡುವುದಿದೆಯೆಂದು ಹೇಳಿ ಮುಳಗುಂದ ನಾಕಾದಲ್ಲಿರುವ ವಸತಿ ಗೃಹಕ್ಕೆ ಕರೆದುಕೊಂಡು ಬಂದು ಸಾಲ ನೀಡುವವರೆಗೆ ಬಿಡುವುದಿಲ್ಲವೆಂದು ಹೇಳಿ ಚಿತ್ರಹಿಂಸೆ ನೀಡಿದ್ದಾರೆ. ಚಿತ್ರಹಿಂಸೆ ತಾಳದೇ ವಾದಿರಾಜ ಹುಯೀಲಗೋಳ ತನಗೆ ಒಂದು ಗಂಟೆ ಸಮಯ ನೀಡುವಂತೆ ಗೋಗರೆದಿದ್ದಾನೆ. ಮೀಟರ ಬಡ್ಡಿದಂಧೆಕೋರರು ವಾದಿರಾಜನನ್ನು ಆತನ ಮನೆಗೆ ಕರೆದೊಯ್ದಿದ್ದಾರೆ. ಮನೆಯಲ್ಲಿ ವಾದಿರಾಜ ತನ್ನ ತಾಯಿಯ ಬಳಿ ಹಣ ಕೇಳಿದ್ದಾನೆ. ಹಣ ಹೊಂದಾಣಿಕೆಯಾಗದ್ದರಿಂದ ಪುನಃ ಮೀಟರ್ ಬಡ್ಡಿಕೋರರೊಂದಿಗೆ ಆಗಮಿಸಿದ್ದಾನೆ. ಸತತ 36 ಗಂಟೆಗಳ ಕಾಲ ಚಿತ್ರಹಿಂಸೆ ನೀಡಿದ ದುರುಳರು ಆತನಿಂದ ಖಾಲಿ ಬಾಂಡ್ ಮತ್ತು ಹತ್ತಾರು ಚೆಕ್‌ಗಳ ಮೇಲೆ ಸಹಿ ಹಾಕಿಸಿಕೊಂಡು ಒಂದು ವಾರದಲ್ಲಿ ಪೂರ್ತಿ ಅಸಲು, ಬಡ್ಡಿಯೊಂದಿಗೆ ನೀಡುವಂತೆ ಸೂಚಿಸಿ ವಾಪಸ್ಸು ಕಳಿಸಿದ್ದಾರೆ.
36 ಗಂಟೆಗಳ ಕಾಲ ಸತತ ಚಿತ್ರ ಹಿಂಸೆ ನೀಡಿದ್ದರಿಂದ ವಾದಿರಾಜನ ಒಂದು ಕಿವಿಗೆ ತೀವ್ರ ಪೆಟ್ಟಾಗಿದೆ. ಕಿವಿ ಸರಿಯಾಗಿ ಕೇಳುತ್ತಿಲ್ಲ. ಇನ್ನೊಂದು ಕಿವಿಯಲ್ಲಿ ಗುಂಯಿಗುಡುತ್ತಿದೆಯೆಂದು ತಿಳಿಸಿದ್ದಾನೆ.
ಮೀಟರ್ ಬಡ್ಡಿಕೋರರಿಂದ ಬಿಡುಗಡೆ ಹೊಂದಿದ ಕೂಡಲೇ ವಾದಿರಾಜ ಬಡಾವಣೆ ಪೊಲೀಸ್ ಠಾಣೆಯಲ್ಲಿ ಒಂಭತ್ತು ಜನರ ಮೇಲೆ ದೂರು ದಾಖಲಿಸಿದ್ದಾನೆ. ದೂರಿನ ಆಧಾರದ ಮೇಲೆ ಪೊಲೀಸರು ಐದು ಜನರನ್ನು ವಶಕ್ಕೆ ಪಡೆದಿದ್ದಾರೆಂದು ಮೂಲಗಳು ತಿಳಿಸಿವೆ.
ಐವರು ವಶಕ್ಕೆ: ಉದ್ಯಮಿ ಮೇಲೆ ನಡೆದ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಮಂಜುನಾಥ ಫಲದೊಡ್ಡಿ, ರಾಜೂ ಯುನುಸ್, ವೆಂಕಟೇಶ, ಅಜಯ ಪವಾರ, ವಾಸೀಮ ಎಂಬುವವರನ್ನು ಬಂಧಿಸಿದ್ದಾರೆ.