ಚಿಕ್ಕಮಗಳೂರು: ಸಾಲಭಾದೆ ತಾಳಲಾರದೆ ರೈತ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ತರೀಕೆರೆ ತಾಲ್ಲೂಕಿನ ಹುಣಸಘಟ್ಟ ಗ್ರಾಮದಲ್ಲಿ ಮಂಗಳವಾರ ನಡೆದಿದೆ.
ಮಂಜಾನಾಯ್ಕ(೪೫) ಮೃತ ದುರ್ದೈವಿ. ಬ್ಯಾಂಕ್ ಸಿಬ್ಬಂದಿ ಕಿರುಕುಳಕ್ಕೆ ಬೇಸತ್ತು ರೈತ ಆತ್ಮಹತ್ಯೆ ಮಾಡಿಕೊಂಡಿದ್ದಾರೆಂದು ಹೇಳಲಾಗಿದೆ. ರೈತ ಮಂಜಾನಾಯ್ಕ ಖಾಸಗಿ ಬ್ಯಾಂಕಿನಿಂದ ೪.೭೦ ಲಕ್ಷ ರೂ. ಸಾಲ ಪಡೆದಿದ್ದು, ಸಾಲ ಕಟ್ಟುವಂತೆ ಬ್ಯಾಂಕಿನವರು ವಕೀಲರ ಮೂಲಕ ನೋಟಿಸ್ ಕಳುಹಿಸಿದ್ದರು ಎನ್ನಲಾಗಿದೆ.
ಹಣ ಕಟ್ಟುವಂತೆ ಬ್ಯಾಂಕ್ ಸಿಬ್ಬಂದಿ ಒತ್ತಾಯಿಸುತ್ತಿದ್ದರು ಎಂದು ಆರೋಪಿಸಲಾಗಿದೆ. ಇದರಿಂದ ಮನನೊಂದ ರೈತ ವಿಷ ಸೇವಿಸಿದ್ದು, ಶಿಮೊಗ್ಗದ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ಅಜ್ಜಂಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಪ್ರಕರಣ ನಡೆದಿದೆ.
ಪ್ರತಿಭಟನೆ: ಮೃತದೇಹವನ್ನು ಬ್ಯಾಂಕಿನ ಮುಂಭಾಗದಲ್ಲಿಟ್ಟು ಮೃತರ ಕುಟುಂಬದವರು ಬ್ಯಾಂಕಿನ ವಿರುದ್ಧ ಘೋಷಣೆ ಕೂಗುವ ಮೂಲಕ ಪ್ರತಿಭಟನೆ ನಡೆಸಿದ್ದಾರೆ. ಸ್ಥಳಕ್ಕೆ ಆಗಮಿಸಿದ ಅಜ್ಜಂಪುರ ಪೊಲೀಸರು ಮೃತರ ಕುಟುಂಬಸ್ಥರ ಮನವೊಲಿಸಲು ಪ್ರಯತ್ನಿಸಿದ್ದಾರೆ. ಅದರೂ ಪಟ್ಟು ಬಿಡದ ಕುಟುಂಬಸ್ಥರು ಬ್ಯಾಂಕ್ ಸಿಬ್ಬಂದಿ ವಿರುದ್ಧ ಕ್ರಮ ತೆಗೆದುಕೊಳ್ಳಬೇಕೆಂದು ಆಗ್ರಹಿಸಿದ್ದಾರೆ.
ಸ್ಥಳಕ್ಕೆ ಆಗಮಿಸಿದ ತಹಶೀಲ್ದಾರ್ ಬ್ಯಾಂಕ್ ಸಿಬ್ಬಂದಿ ವಿರುದ್ಧ ಕಾನೂನು ಕ್ರಮದ ಎಚ್ಚರಿಕೆ ನೀಡಿದ ಬಳಿಕ ಸ್ಥಳದಿಂದ ಮೃತದೇಹವನ್ನು ಕುಟುಂಬಸ್ಥರು ಅಲ್ಲಿಂದ ತೆಗೆದುಕೊಂಡು ಹೋಗುವ ಮೂಲಕ ಅಂತ್ಯಸಂಸ್ಕಾರಕ್ಕೆ ಮುಂದಾಗಿದ್ದಾರೆ.