ರಾಯಚೂರು: ಕಲ್ಯಾಣ ಕರ್ನಾಟಕ ಸಾರಿಗೆ ಸಂಸ್ಥೆಯ ಬಸ್ ಎರಡು ಬೈಕ್‌ಗಳಿಗೆ ಡಿಕ್ಕಿ ಹೊಡೆದ ಪರಿಣಾಮ ಸ್ಥಳದಲ್ಲಿ ನಾಲ್ವರು ಸಾವನ್ನಪ್ಪಿದ್ದಾರೆ. ಮತ್ತೋರ್ವ ಬೈಕ್ ಸವಾರ ಗಂಭೀರ ಗಾಯಗೊಂಡು ಆಸ್ಪತ್ರೆಯಲ್ಲಿ ಮೃತಪಟ್ಟ ಘಟನೆ ನೆರೆಯ ಆಂಧ್ರಪ್ರದೇಶದ ರಾಜ್ಯದ ಕರ್ನೂಲ್ ಜಿಲ್ಲೆಯ ಆದೋನಿ ತಾಲೂಕಿನ ಪಾಂಡವಗಲ್ ಗ್ರಾಮದ ಸಮೀಪ ಮಂಗಳವಾರ ನಡೆದಿದೆ.
ಘಟನೆಯಲ್ಲಿ ಮಾನ್ವಿ ಮೂಲದ ಒಂದೇ ಕುಟುಂಬದ ಸದಸ್ಯರಾದ ಹೇಮಾದ್ರಿ(೫೫) ಪತ್ನಿ ನಾಗರತ್ನಮ್ಮ(೪೮) ಮತ್ತು ಮಗ ದೇವರಾಜು(೨೫) ಎಂಬುವವವರು ಸಾವನ್ನಪ್ಪಿದ್ದಾರೆ. ಇನ್ನೊಂದು ಬೈಕ್‌ನಲ್ಲಿದ್ದ ಆದೋನಿ ತಾಲ್ಲೂಕು ಕುಪಗಲ್ ಗ್ರಾಮದ, ಆದಿಲಕ್ಷ್ಮೀ ಎಂಬುವವರು ಮೃತಪಟ್ಟಿದ್ದಾರೆ. ಗಂಭೀರವಾಗಿ ಗಾಯಗೊಂಡಿದ್ದ ಈರಣ್ಣ ಎಂಬುವವರಿಗೆ ಆದೋನಿ ಆಸ್ಪತ್ರೆಗೆ ರವಾನಿಸಿದ್ದು, ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ.
ಕೊಪ್ಪಳ ಜಿಲ್ಲೆಯ ಗಂಗಾವತಿಯಿಂದ ಕಲ್ಯಾಣ ಕರ್ನಾಟಕ ಸಾರಿಗೆ ಸಂಸ್ಥೆಯ ಬಸ್ ಮಂತ್ರಾಲಯಕ್ಕೆ ತೆರಳುತ್ತಿದ್ದಾಗ ಈ ಅಪಘಾತ ನಡೆದಿದೆ. ಸ್ಥಳಕ್ಕೆ ಆದೋನಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮೃತದೇಹಗಳು ಆದೋನಿ ಆಸ್ಪತ್ರೆಗೆ ರವಾನೆ ಮಾಡಿದ್ದಾರೆ ಎಂದು ತಿಳಿದುಬಂದಿದೆ.