ಬೆಂಗಳೂರು: ಸಾಧನಾ ಸಮಾವೇಶವೋ ಅಥವಾ ಸಿಎಂ ಸಿದ್ದರಾಮಯ್ಯನವರಿಗೆ ಬೀಳ್ಕೊಡುಗೆ ಸಮಾರಂಭವೋ? ಎಂದು ವಿಧಾನಸಭೆಯ ವಿರೋಧ ಪಕ್ಷದ ನಾಯಕ ಆರ್. ಅಶೋಕ ಪ್ರಶ್ನಿಸಿದ್ದಾರೆ.
ಈ ಕುರಿತಂತೆ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿ ಕಾಂಗ್ರೆಸ್ ಸರ್ಕಾರ ಎರಡು ವರ್ಷ ಪೂರೈಸಿದ ಹಿನ್ನಲೆಯಲ್ಲಿ ನಾಳೆ ಹೊಸಪೇಟೆಯಲ್ಲಿ ಸಾಧನಾ ಸಮಾವೇಶ ಹಮ್ಮಿಕೊಂಡಿದೆ ಎನ್ನುವ ಸುದ್ದಿ ಅಚ್ಚರಿಯೂ ಮೂಡಿಸಿದೆ, ಅನುಮಾನಕ್ಕೂ ಕಾರಣವಾಗಿದೆ. ನಯಾ ಪೈಸೆ ಸಾಧನೆ ಇಲ್ಲದೆ ಹೋದರೂ ಸಾಧನಾ ಸಮಾವೇಶ ಮಾಡುತ್ತಿರುವ ಕಾಂಗ್ರೆಸ್ ನಾಯಕರ ನಿರ್ಲಜ್ಜತೆ ಅಚ್ಚರಿ ಮೂಡಿಸುತ್ತಿದ್ದರೆ, ಕಾಂಗ್ರೆಸ್ ಬಣಗಳ ನಡವಳಿಕೆ ಅನುಮಾನ ಮೂಡಿಸುತ್ತಿದೆ.
ಕಳೆದ ಡಿಸೆಂಬರ್‌ನಲ್ಲಿ ಹಾಸನದಲ್ಲಿ ನಡೆಯಬೇಕಿದ್ದ ಸ್ವಾಭಿಮಾನಿ ಸಮಾವೇಶವನ್ನು ಹೈಕಮಾಂಡ್ ಪ್ರಭಾವ ಬಳಸಿ ಜನಕಲ್ಯಾಣ ಸಮಾವೇಶ ಎಂದು ಮರುನಾಮಕರಣ ಮಾಡಿಸಿದ್ದ ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ಈಗ ಸಾಧನ ಸಮಾವೇಶಕ್ಕೆ ಬಹಳ ಉತ್ಸಾಹ ತೋರುತ್ತಿದ್ದಾರೆ. ಮತ್ತೊಂದು ಕಡೆ ಸ್ವಾಭಿಮಾನಿ ಸಮಾವೇಶಕ್ಕೆ ಪ್ಯಾಂಪ್ಲೆಟ್ ಹಂಚಿ, ಬ್ಯಾನರ್ ಕಟ್ಟಿ, ಅಹಿಂದ ಸಮಾವೇಶ ಎನ್ನುವಂತೆ ಅತ್ಯಂತ ಉತ್ಸಾಹದಿಂದ ಓಡಾಡಿದ್ದ ಸಿದ್ದರಾಮಯ್ಯನವರ ಬಣ ಈಗ ನಿರುತ್ಸಾಹಿಯಾಗಿದೆ. ಇವೆಲ್ಲವನ್ನೂ ಗಮನಿಸುತ್ತಿದ್ದರೆ ಇದು outgoing ಸಿದ್ದರಾಮಯ್ಯನವರಿಗೆ ಬೀಳ್ಕೊಡುಗೆ ಸಮಾರಂಭ ಇದ್ದಹಾಗೆ ಕಾಣುತ್ತಿದೆ. ಸಾಧನಾ ಸಮಾವೇಶದ ವೇದಿಕೆಯಲ್ಲೇ ಸಿದ್ದರಾಮಯ್ಯನವರು ರಾಜೀನಾಮೆ ಘೋಷಣೆ ಮಾಡುತ್ತಾರಾ?