ಸರ್ಕಾರ ಉಳಿಯುವುದೇ ಗ್ಯಾರಂಟಿ ಇಲ್ಲ

ಸಂ.ಕ.ಸಮಾಚಾರ ಕಲಬುರಗಿ: ರಾಜ್ಯದಲ್ಲಿ ಗುಂಡಾಗಿರಿ, ದಬ್ಬಾಳಿಕೆ, ಕೊಲೆ, ಆತ್ಮಹತ್ಯೆ ಪ್ರಕರಣಗಳು ಮತ್ತು ಭ್ರಷ್ಟಾಚಾರದಿಂದ ಜನತೆ ರೋಸಿ ಹೋಗಿರುವುದರಿಂದ ಈ ಕಾಂಗ್ರೆಸ್ ಸರ್ಕಾರ ಉಳಿಯುವುದೇ ಗ್ಯಾರಂಟಿ ಇಲ್ಲ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್. ಅಶೋಕ ಹೇಳಿದರು.
ಚಿತ್ತಾಪುರದ ಪ್ರವಾಸಿ ಮಂದಿರದಲ್ಲಿ ರಾಜ್ಯ ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ ಅವರಿಗೆ 5 ಗಂಟೆಗಳ ಕಾಲ ದಿಗ್ಬಂಧನ ವಿಧಿಸಿದ ಘಟನೆ ಖಂಡಿಸಿ ಕಲಬುರಗಿಯಲ್ಲಿ ಶನಿವಾರ ಬಿಜೆಪಿ ವತಿಯಿಂದ ನಡೆದ ಪ್ರತಿಭಟನಾ ಸಮಾವೇಶದಲ್ಲಿ ಅವರು ಮಾತನಾಡಿದರು.
ಛಲವಾದಿ ನಾರಾಯನಸ್ವಾಮಿಯ ದಿಗ್ಬಂಧನ, ಹಿಂದುಗಳ ಹತ್ಯೆ ನಡೆಯುತ್ತಿದೆ. ಸಿಟಿ ರವಿ ಮೇಲೆ ದಬ್ಬಾಳಿಕೆ ಹೀಗೆ ಸಾಲು ಸಾಲು ಪ್ರಕರಣಗಳು ನಡೆಯುತ್ತಿವೆ. ನಿಮ್ಮ ದಬ್ಬಾಳಿಕೆ, ದೌರ್ಜನ್ಯ ಬಹಳ ದಿನ ನಡೆಯೋದಿಲ್ಲ. ನಿಮ್ಮ ಅಧಿಕಾರ ಕೇವಲ 3 ವರ್ಷ ಇದೆ. ಅದು ಸಹ ಗ್ಯಾರಂಟಿ ಇಲ್ಲ ಎಂದರು.
ದಿನ ಅಂಬೇಡ್ಕರ ಅವರ ಸಂವಿಧಾನ ಇಟ್ಟುಕೊಂಡು ಓಡಾಡ್ತಿದ್ದಿರಿ. ಯಾವ ಪುಟದಲ್ಲಿ ಗುಂಡಾಗಿರಿ ಮಾಡಿರೆಂದು ಬರೆದಿದ್ದಾರೆ ಎಂಬುದು ನಮಗೆ ಉತ್ತರ ನೀಡಿ. ನಿಮಗೆ ಅವಮಾನವಾಗಿದ್ದರೆ ಪೊಲೀಸ್ ಠಾಣೆಗೆ ಹೋಗಬೇಕಿತ್ತು. ಈಗ ನಾವೆಲ್ಲರೂ ಬಂದಿದ್ದೇವೆ. ತಾಕತ್ತಿದ್ರೆ ಈಗ ಬಂದು ಕೂಡಿ ಹಾಕಿ ನೋಡೋಣ ಎಂದು ಸವಾಲು ಹಾಕಿದರು.
ಅಂಬೇಡ್ಕರ್ ಅವರಿಗೆ ಆರಡಿ ಜಾಗ ಕೊಡುವ ಯೋಗ್ಯತೆ ನಿಮಗಿರಲಿಲ್ಲ. ಅಂಬೇಡ್ಕರ್ ಅವರಿಗೆ ದ್ರೋಹ ಬಗೆದ ನೀವು ಅಂಬೇಡ್ಕರ್ ಅವರ ಬಗ್ಗೆ ಮಾತನಾಡುವ ನೈತಿಕತೆ ಇಲ್ಲ. ಪ್ರಿಯಾಂಕ್ ಖರ್ಗೆ ರಾಜೀನಾಮೆ ಕೊಡುವವರೆಗೂ ಹೋರಾಟ ಮುಂದುವರಿಯಲಿದೆ ಎಂದರು.

ಮಾಜಿ ಸಚಿವ ಶ್ರೀರಾಮಲು ಮಾತನಾಡಿ, ದೇಶದಲ್ಲಿ ರಾಹುಲ್ ಗಾಂಧಿ ಪಪ್ಪು ಆದ್ರೆ ರಾಜ್ಯದಲ್ಲಿ ಪ್ರಿಯಾಂಕ್ ಖರ್ಗೆ ಪಪ್ಪು ಆಗಿದ್ದಾರೆ. ನಾರಾಯಣಸ್ವಾಮಿ ಅವರಿಗೆ ನೀವು ಅವಮಾನ ಮಾಡಿದ್ದಿರಿ. ನಾವು ಮನುಸ್ಸು ಮಾಡಿದ್ರೆ ನಿಮಗೆ ರಾಜ್ಯದಲ್ಲಿ ಎಲ್ಲಿಯೂ ಹೋಗಲು ಬಿಡುವುದಿಲ್ಲ ಎಂದು ಎಚ್ಚರಿಕೆ ನೀಡಿದರು.

ಮಾಜಿ ಸಚಿವ ಸಿ.ಟಿ ರವಿ ಮಾತನಾಡಿ, ನಿಜಾಮರ ಆಡಳಿತವೂ ನವಾಬ್ ಹಾಗೂ ಹಿಟ್ಲರ್‌ಗಳ ಅಧಿಕಾರ‌ ಇಲ್ಲಿ ನಡೆಯೋದಿಲ್ಲ. ಸಂವಿಧಾನದ ನಿಯತ್ತಿನ ನಾಯಿಗಳು ನಾವು. ಸಂವಿಧಾನ, ಸೈನ್ಯದ ವಿರುದ್ದ ಬೋಗೊಳೋದಿಲ್ಲ. ಆದರೆ ನಿಯತ್ತಿಲ್ಲದ ನಾಯಿಗಳು ದೇಶ ಹಾಗೂ ಸೈನಿಕರ ಬಗ್ಗೆ ಮಾತನಾಡೋದಿಲ್ಲ ಎಂದರು.

ವಿಧಾನ ಪರಿಷತ್‌ ವಿರೋದ ಪಕ್ಷದ ನಾಯಕ ಛಲವಾದಿ ನಾರಯಣಸ್ವಾಮಿ ಮಾತನಾಡಿ, ನಾನು ಬರಿ ದಲಿತ ಅಲ್ಲ 40 ವರ್ಷ ಕಾಂಗ್ರೆಸ್‌ನಲ್ಲಿ ದುಡಿದಿದ್ದೇನೆ. ಮಲ್ಲಿಕಾರ್ಜುನ ಯಾರನ್ನೂ ಕೂಡ ಬೆಳೆಸಿಲ್ಲ. ಖರ್ಗೆ ನಡೆದ ದಾರಿಯಲ್ಲಿ ಹುಲ್ಲು ಕಡ್ಡಿಯೂ ಹುಟ್ಟಲ್ಲ ಎಂದು ಮಲ್ಲಿಕಾರ್ಜುನ ಖರ್ಗೆ ವಿರುದ್ದ ಹರಿಹಾಯ್ದರು.
ನಿಮ್ಮ ಪಕ್ಷದ ಅಧ್ಯಕ್ಷ ಸ್ಥಾನ ಮಾಡೋಕೆ ಹೋರಾಟ ಮಾಡಿದವನು ನಾನು, ನಿಮ್ಮ ಸಿಎಂ ಮಾಡೋಕೆ ಹೋರಾಟ ಮಾಡಿದ್ವಿ ಆದ್ರೆ ದಲಿತ ಎನ್ನೋದ್ರಿಂದ ಸಿಎಂ ಆಗೋದಾದ್ರೆ ಬೇಡ ಅಂದ್ರಿ ಹಾಗಿದ್ರೆ ಎಸ್ಸಿ ಮೀಸಲು ಕ್ಷೇತ್ರದಿಂದ ಯಾಕೆ ಚುನಾವಣೆಗೆ ಸ್ಪರ್ಧಿಸುತ್ತಿರಾ ಎಂದು ಪ್ರಶ್ನಿಸಿದರು. ನನಗಾದ ಅವಮಾನಕ್ಕೆ ನಾನು ಪಕ್ಷ ಬಿಟ್ಟೆ ಇಲ್ಲಾಂದ್ರೆ ನಾನು ಗುಲಾಮನಾಗಿರುತ್ತಿದ್ದೆ. ನನ್ನನ್ನ ಚಪ್ರಾಸಿ ಅಂದುಕೊಂಡ್ರಾ.? ನೀವು ಹುಲಿಗಳಲ್ಲ, ನರಿಗಳು ನಾನು ಇಲ್ಲಿಯವರೆಗೂ ಕ್ಷಮೆ ಕೇಳಿಲ್ಲ, ಕೇಳೋದು ಇಲ್ಲ. ಮಲ್ಲಿಕಾರ್ಜುನ ಖರ್ಗೆಯವರ ಬಗ್ಗೆ ನಮಗೆ ಗೌರವವಿದೆ. ನಿಮ್ಮ ಹೆಸರಿನ ಪಕ್ಕದಲ್ಲಿ ಖರ್ಗೆ ಎನ್ನೋ ಹೆಸರಿದೆ ಆ ಕಾರಣಕ್ಕೆ ನೀವು ಗೆದ್ದಿದಿರಿ ಇಲ್ಲಾಂದ್ರೆ ಮಂಡಲ ಪಂಚಾಯಿತಿ ಕೂಡ ಗೆಲ್ಲುತ್ತಿರಲಿಲ್ಲ ಎಂದು ಪ್ರಿಯಾಂಕ್‌ ಖರ್ಗೆ ವಿರುದ್ಧ ಹರಿಹಾಯ್ದರು.
ಈ ಹೋರಾಟ ಇಲ್ಲಿಗೆ ನಿಲ್ಲೊಲ್ಲ, ನಮ್ಮ ಕಾರ್ಯಕರ್ತರು ಮನಸ್ಸು ಮಾಡಿದ್ರೆ ಮಂತ್ರಿಗಳ ಕಾರು ರಸ್ತೆಗೆ ಬರೋದಿಲ್ಲ. ನನಗೇನು ಹಗೆತನವಿಲ್ಲ, ನನಗೆ ಕೆಣಕೊಕೆ ಹೋಗಬೇಡಿ, ಕೆಣಕಿದ್ರೆ ನಾನು ಕೆಣಕೊದು ಬಿಡಲ್ಲ, ನಿಮ್ಮ ಬಗ್ಗೆ ನನ್ನ ಹತ್ತಿರ ಬಹಳಷ್ಟು ವಿಷಯವಿದೆ. ಅವೆಲ್ಲ ಹೊರಗಡೆ ಬರುತ್ತವೆ ಎಂದು ಎಚ್ಚರಿಸಿದರು.

ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಮಾತನಾಡಿ, ಅಧಿಕಾರ ಶಾಸ್ವತ ಅಲ್ಲ ಪ್ರಿಯಾಂಕ್ ಖರ್ಗೆ, ನಿಮ್ಮ ಅಧಿಕಾರದ ದರ್ಪ ಸೊಕ್ಕು ಅಡಗಿಸುವ ಶಕ್ತಿ ಬಿಜೆಪಿ ಕಾರ್ಯಕರ್ತರು, ಜನರಿಗೆ ಇದೆ. ಮುಂದಿನ ದಿನದಲ್ಲಿ ಇಲ್ಲಿನ ಜನ ಉತ್ತರ ಕೊಡ್ತಾರೆ ಎಂದರು.
ಪಾಳೆಗಾರಿಗೆ, ಗುಂಡಾಗಿರಿ ನಡೆಯೋದಿಲ್ಲ. ರಾಜ್ಯದಲ್ಲಿ ಇವಾಗ ಚುನಾವಣೆ ಆದ್ರೆ ಬಿಜೆಪಿ 135 ಸೀಟ್ ಗೆಲ್ಲುತ್ತೆವೆಂದು ಖಾಸಗಿ ವಾಹಿನಿ ಸರ್ವೆಯಲ್ಲಿ ಹೇಳಿದೆ. ಕಾಂಗ್ರೆಸ್ ಗ್ಯಾರಂಟಿ ಯೋಜನೆಯಿಂದ ಜನರು ಕಣ್ಣಿರು ಹಾಕ್ತಿದ್ದಾರೆ. ಕ್ಷೇತ್ರದ ಅಭಿವೃದ್ಧಿಗೆ ಹಣ ಸಿಗ್ತಿಲ್ಲ, ಜನ ವಿರೋಧಿ ದರಿದ್ರ ಸರ್ಕಾರ ಬದುಕಿದ್ದು ಇವತ್ತು ಸತ್ತಂತೆ. ಇಂತಹ ದುಷ್ಟ ಕಾಂಗ್ರೆಸ್ ಸರ್ಕಾರದ ವಿರುದ್ಧ ನಿರಂತರವಾಗಿ ಜನಾಂದೋಲನ ಮಾಡಬೇಕಾಗಿದೆ ಎಂದರು.