ಸರಣಿ ಅಪಘಾತ ಮತ್ತು ಹೊಸ ‘ದಿಗಂತ’!

ಚಿತ್ರ: ಎಡಗೈಯೇ ಅಪಘಾತಕ್ಕೆ ಕಾರಣ
ನಿರ್ದೇಶನ: ಸಮರ್ಥ್ ಕಡಕೋಳ
ನಿರ್ಮಾಣ: ರಾಜೇಶ್ ಕೀಳಂಬಿ, ರವಿಚಂದ್ರ ಹಾಗೂ ಗುರುದತ್ ಗಾಣಿಗ
ತಾರಾಗಣ: ದಿಗಂತ್, ನಿಧಿ ಸುಬ್ಬಯ್ಯ, ಧನು ಹರ್ಷ, ರಾಧಿಕಾ ನಾರಾಯಣ್, ನಿರೂಪ್ ಭಂಡಾರಿ ಮುಂತಾದವರು.
ರೇಟಿಂಗ್ಸ್: 3

ಗಣೇಶ್ ರಾಣೆಬೆನ್ನೂರು

ಎಲ್ಲಾ ಕೆಲಸಗಳಿಗೂ ಎಡಗೈ ಬಳಸಿದರೆ ತಪ್ಪೇನು..? ‘ನೋಡಿದವರು ಏನಂತಾರೋ…’ ಎಂದುಕೊಂಡರೆ ಯಾವ ಕಾರ್ಯವೂ ಸಾಗದು..! ಹೀಗಾಗಿ ನಾಯಕ ಚಿಕ್ಕಂದಿನಿಂದಲೇ ಎಡಚ! ಕೈ ಕಟ್ಟಿ ಹಾಕಿದರೂ… ಏನೇ ಶಿಕ್ಷೆಗೊಳಪಡಿಸಿದರೂ ಎಡಗೈ ಬಳಸುವುದನ್ನು ಮಾತ್ರ ನಿಲ್ಲಿಸುವುದಿಲ್ಲ. ಆದರೆ ಮುಂದಾಗುವ ಅಪಘಾತಗಳಿಗೆ ‘ಅದೇ’ ಕಾರಣ ಎಂಬುದು ಮಾತ್ರ ನಾಯಕನಿಗೆ ತಿಳಿದಿರುವುದಿಲ್ಲ. ಆದರೆ ಮತ್ತೊಂದು ‘ಕಾಣದ ಕೈ’ ಕೂಡ ‘ಕೆಲಸ’ ಮಾಡಿರುತ್ತದೆ ಎಂಬುದು ಮುಂದೆ ತಿಳಿಯುವ ಸತ್ಯ..!

ಅಂದಹಾಗೆ ಸಿನಿಮಾದುದ್ದಕ್ಕೂ ‘ಲೆಫ್ಟ್’ ಹ್ಯಾಂಡ್‌ನಿಂದ ಯಾವುದೇ ‘ರೈಟ್’ ಎನ್ನುವಂಥ ಕೆಲಸ ಆಗದು ಎಂಬುದಂತೂ ತಿಳಿಯುತ್ತದೆ. ಆದರೆ ಎಡಗೈ ಹೇಗೆಲ್ಲ ಉಪಯೋಗ ಬರಬಹುದು ಎಂಬುದನ್ನೂ ವಿವರಿಸಲಾಗಿದೆ. ಇದು ಸಸ್ಪೆನ್ಸ್-ಮಿಸ್ಟರಿ-ಥ್ರಿಲ್ಲರ್ ಆಗಿರುವುದರಿಂದ ಅಷ್ಟೇ ಕುತೂಹಲಕರವಾಗಿ ಸಿನಿಮಾವನ್ನು ಕಟ್ಟಿಕೊಟ್ಟಿದ್ದಾರೆ ನಿರ್ದೇಶಕ ಸಮರ್ಥ್ ಕಡಕೋಳ. ಡಾರ್ಕ್ ಕಾಮಿಡಿ ಸಹ ಚಿತ್ರದಲ್ಲಿ ಸಮರ್ಥವಾಗಿ ಬಳಕೆಯಗಿದೆ.

ಆರಂಭದಲ್ಲೇ ಒಂದಷ್ಟು ‘ವಿಷಯ’ವನ್ನು ತಿಳಿಸಿಬಿಡುವ ನಿರ್ದೇಶಕ ಮುಂದೆ ಅದರಿಂದಾಗುವ ಫಜೀತಿಯತ್ತ ಬೆಳಕು ಚೆಲ್ಲಿದ್ದಾರೆ. ಹೀಗಾಗಿ ಕಥೆಯ ಎಳೆ ಚಿಕ್ಕದಾಗಿದ್ದರೂ, ಬೆರಳೆಣಿಕೆಯ ಲೊಕೇಶನ್‌ನಲ್ಲೇ ಸಿನಿಮಾ ಗಿರಕಿ ಹೊಡೆದರೂ, ಲವಲವಿಕೆಯ ನಿರೂಪಣೆ ಮೂಲಕ ನೋಡಿಸಿಕೊಂಡು ಹೋಗುವಂತೆ ಮಾಡಿರುವುದು ಸಮರ್ಥ್ ಹೆಚ್ಚುಗಾರಿಕೆ.

ಇನ್ನು ಸಿನಿಮಾದಲ್ಲಿ ಹೆಚ್ಚಾಗಿ ಗಮನ ಸೆಳೆಯುವುದು ದಿಗಂತ್ ಮತ್ತು ದಿಗಂತ್ ಮಾತ್ರ..! ಕೆಲವೊಮ್ಮೆ ಮನಸಾರೆ, ಪಂಚರಂಗಿ ದಿಗಂತ್ ನೆನಪಾದರೂ ಈ ಸಿನಿಮಾದಲ್ಲೊಂದು ‘ಮೆಚ್ಯೂರಿಟಿ’ ಮೇಂಟೇನ್ ಮಾಡಿದ್ದಾರೆ. ನಗೆಯುಕ್ಕಿಸುತ್ತಾರೆ, ಕುತೂಹಲ ಕೆರಳಿಸುವಲ್ಲಿಯೂ ಯಶಸ್ವಿಯಾಗಿದ್ದಾರೆ.

ವಿಶೇಷ ಪಾತ್ರದಲ್ಲಿ ಅಭಿನಯಿಸಿರುವ ನಿರೂಪ್ ಭಂಡಾರಿ ವಿಶೇಷವಾಗಿಯೇ ಗಮನ ಸೆಳೆಯುತ್ತಾರೆ. ಕೆಲವೇ ದೃಶ್ಯಗಳಿಗೆ ಸೀಮಿತವಾಗಿದ್ದರೂ, ಕಥೆಯ ಭಾಗವಾಗಿ ತಮ್ಮ ಕರ್ತವ್ಯವನ್ನು ನೀಟಾಗಿ ನಿಭಾಯಿಸಿರುವ ನಿಧಿ ಸುಬ್ಬಯ್ಯ ಹಾಗೂ ರಾಧಿಕಾ ಚೇತನ್ ಇಷ್ಟವಾಗುತ್ತಾರೆ. ಯುವ ನಟಿ ಧನು ಹರ್ಷ ನಟನೆ ಗಮನಾರ್ಹ. ಕೃಷ್ಣ ಹೆಬ್ಬಾಳೆ, ಸೌರವ್ ಲೋಕೇಶ್ (ಭಜರಂಗಿ ಲೋಕಿ) ಪಾತ್ರಕ್ಕೆ ನ್ಯಾಯ ಸಲ್ಲಿಸಿದ್ದಾರೆ. ಪ್ರದ್ಯೋತ್ತನ್ ಸಂಗೀತ ‘ಎಡಗೈ’ಗೆ ಆಗಾಗ ಬಲ ತುಂಬುತ್ತಿರುತ್ತದೆ.