ಸರಣಿ ಅಪಘಾತ: ಬಿಎಸ್‌ಎಫ್ ಯೋಧ ಸೇರಿದಂತೆ ಇಬ್ಬರ ಸಾವು

ವಿಜಯಪುರ: ಲಾರಿ, ಬೈಕ್ ಹಾಗೂ ಅಂಬುಲೆನ್ಸ್ ನಡುವೆ ನಡೆದ ಸರಣಿ ಅಪಘಾತದಲ್ಲಿ ಬಿಎಸ್‌ಎಫ್ ಯೋಧ ಸಾವನ್ನಪ್ಪಿರುವ ಘಟನೆ ನಡೆದಿದೆ.
ಜಿಲ್ಲೆಯ ನಿಡಗುಂದಿ ಪಟ್ಟಣದ ಎನ್‌ಎಚ್ 50ರಲ್ಲಿ ಈ ಘಟನೆ ನಡೆದಿದ್ದು, ಬೈಕ್‌ಗೆ ಲಾರಿ ಗುದ್ದಿದ ಪರಿಣಾಮ ಬಿಎಸ್‌ಎಫ್ ಯೋಧ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಇದೇ ವೇಳೆ, ಆಂಬ್ಯುಲೆನ್ಸ್‌ಗೂ ಲಾರಿ ಡಿಕ್ಕಿ ಹೊಡೆದ ಕಾರಣ ಚಾಲಕ ಮೃತಪಟ್ಟಿದ್ದಾನೆ.
ಮೃತರನ್ನು ಮುದ್ದೇಬಿಹಾಳ ತಾಲೂಕಿನ ಕಾಳಗಿ ಗ್ರಾಮದ ಬಿಎಸ್‌ಎಫ್ ಯೋಧ ಮೌನೇಶ ರಾಠೋಡ್ (35) ಹಾಗೂ ಆಂಬ್ಯುಲೆನ್ಸ್ ಚಾಲಕ, ಕೇರಳ ಮೂಲದ ರಿತೇಶ (35) ಎಂದು ಗುರುತಿಸಲಾಗಿದೆ. ಅಪಘಾತದ ಕಾರಣ ಎನ್‌ಎಚ್ 50ರಲ್ಲಿ ಟ್ರಾಫಿಕ್ ಜಾಮ್ ಉಂಟಾಗಿತ್ತು. ಅಪಘಾತಕ್ಕೀಡಾದ ಲಾರಿ, ಅಂಬುಲೆನ್ಸ್ ಹಾಗೂ ಬೈಕ್ ತೆರವು ಮಾಡಿ ಪೊಲೀಸರು ಸಂಚಾರಕ್ಕೆ ಅನುವು ಮಾಡಿಕೊಟ್ಟರು. ಅಂಬುಲೆನ್ಸ್‌ನಲ್ಲಿದ್ದ ಸಹಾಯಕನಿಗೆ ಹಾಗೂ ಲಾರಿ ಚಾಲಕ, ಕ್ಲೀನರ್‌ಗೂ ಸಣ್ಣ ಪುಟ್ಟ ಗಾಯಗಳಾಗಿವೆ. ಘಟನಾ ಸ್ಥಳಕ್ಕೆ ನಿಡಗುಂದಿ ಪೊಲೀಸರು ಭೇಟಿ ನೀಡಿ, ಪರಿಶೀಲನೆ ನಡೆಸಿದರು. ನಿಡಗುಂದಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಗುಜರಾತ್‌ನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಯೋಧ ಮೌನೇಶ ರಜೆ ಮೇಲೆ ಊರಿಗೆ ಬಂದಿದ್ದರು ಎಂದು ತಿಳಿದು ಬಂದಿದೆ.