ಸರಕಾರದ ವಿರುದ್ಧ ಶೀಘ್ರವೇ ಹೋರಾಟ: ಗುಣಧರನಂದಿ ಸ್ವಾಮೀಜಿ ಎಚ್ಚರಿಕೆ

0
19

ಹುಬ್ಬಳ್ಳಿ: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಂಡಿಸಿದ ರಾಜ್ಯ ಬಜೆಟ್‌ನಲ್ಲಿ ಜೈನ ಸಮುದಾಯದ ಯಾವುದೇ ಬೇಡಿಕೆಗಳನ್ನು ಈಡೇರಿಸದೇ ಸಂಪೂರ್ಣ ನಿರ್ಲಕ್ಷಿಸಿದ್ದಾರೆ ಎಂದು ವರೂರು ನವಗ್ರಹ ತೀರ್ಥ ಕ್ಷೇತ್ರದ ಶ್ರೀ ಗುಣಧರನಂಧಿ ಮಹಾರಾಜರು ತೀವ್ರ ಬೇಸರ ವ್ಯಕ್ತಪಡಿಸಿದ್ದಾರೆ.
ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಶ್ರೀಗಳು, ನಾಲ್ಕು ಲಕ್ಷ ಕೋಟಿ ರೂ.ಗಳಿಗೆ ಬಜೆಟ್ ಗಾತ್ರ ಏರಿಕೆ ಮಾಡಿದರೂ ನಮ್ಮ ಜೈನ ಸಮಾಜಕ್ಕೆ ನೀಡುವ ಅನುದಾನ ಕಡಿಮೆ ಆಗುತ್ತಾ ಬರುತ್ತಿದೆ. ಇದೀಗ ಬಜೆಟ್‌ನಲ್ಲಿ ಅಲ್ಪಸಂಖ್ಯಾತರ ಸಮುದಾಯಗಳಿಗೆ ಕೇವಲ ೧೦೦ ಕೋಟಿ ರೂ. ನೀಡಲಾಗಿದೆ. ಇದರಲ್ಲಿ ಜೈನರು, ಕ್ರೈಸ್ತರು, ಸಿಖ್ಖರು ಹಾಗೂ ಬೌದ್ಧರು ಹಂಚಿಕೊಂಡರೇ ೩೩ ಕೋಟಿ ರೂ. ಬರುತ್ತದೆ. ಸರಕಾರ ನಡೆಸಲು ಹಣದ ಕೊರತೆಯಾದರೆ, ನಮಗೆ ಬರುವ ಪಾಲನ್ನು ವಾಪಸ್ಸು ಕೊಡಲು ಜೈನ ಸಮಾಜ ಸಿದ್ಧವಿದೆ ಎಂದು ಖಾರವಾಗಿ ಪ್ರತಿಕ್ರಿಯಿಸಿದ್ದಾರೆ.
ನಿಗಮ ಸ್ಥಾಪನೆಯೂ ಇಲ್ಲ
ಜೈನ ಸಮುದಾಯ ಅಲ್ಪ ಸಂಖ್ಯಾತರ ಸಮಾಜದಲ್ಲಿ ಒಂದಾಗಿದ್ದು, ಈ ಸಮಾಜ ಶೈಕ್ಷಣಿಕ, ಆರ್ಥಿಕ ಹಾಗೂ ಸಾಮಾಜಿಕವಾಗಿ ಬೆಳವಣಿಗೆ ಆಗಬೇಕಿದೆ. ಅದಕ್ಕಾಗಿ ಜೈನ ಅಭಿವೃದ್ದಿ ನಿಗಮ ಸ್ಥಾಪನೆ ಅತ್ಯಗತ್ಯವಾಗಿದೆ. ಕೂಡಲೇ ನಿಗಮ ಸ್ಥಾಪನೆ ಮಾಡಬೇಕು ಎಂದು ಜೈನ ಸಮಾಜದ ಮುಖಂಡರು, ಸ್ವಾಮೀಜಿಗಳು ಸರಕಾರಕ್ಕೆ ಒತ್ತಾಯ ಮಾಡಿದ್ದರು. ಸರಕಾರದಲ್ಲಿರುವ ಗೃಹಮಂತ್ರಿ ಪರಮೇಶ್ವರ, ಸಚಿವರು ಸೇರಿದಂತೆ ಕೆಲ ಶಾಸಕರು ನಿಗಮ ಸ್ಥಾಪನೆ ಮಾಡುವ ಭರವಸೆ ನೀಡಿದ್ದರು. ಆದರೂ ಬಜೆಟ್‌ನಲ್ಲಿ ಈ ಬಗ್ಗೆ ಪ್ರಸ್ತಾಪಿಸದೇ ಸಮಾಜಕ್ಕೆ ಅನ್ಯಾಯ ಮಾಡಲಾಗಿದೆ ಎಂದು ಹೇಳಿದ್ದಾರೆ.
ಈ ಹಿಂದೆ ಕೂಡಾ ರಾಜ್ಯದ ಪ್ರತಿ ಮಠಕ್ಕ ಎರಡೂವರೆ ಕೋಟಿ ರೂ. ನೀಡುವುದಾಗಿ ಘೋಷಿಸಲಾಗಿತ್ತು. ಆದರೆ, ಈವರೆಗೆ ಯಾವ ಮಠಗಳಿಗೂ ಪೂರ್ಣ ಹಣ ನೀಡಿಲ್ಲ ಎಂದಿದ್ದಾರೆ.
ರಾಜ್ಯದಲ್ಲಿ ಜೈನ ಸಮುದಾಯವು ೧೫ ಶಾಸಕರ ಆಯ್ಕೆಯಲ್ಲಿ ನಿರ್ಣಾಯಕ ಪಾತ್ರ ವಹಿಸುತ್ತಿದೆ. ಅಷ್ಟೇ ಅಲ್ಲದೇ ಸಮುದಾಯದ ಜನರು ಸರಕಾರವನ್ನು ಬೆಂಬಲಿಸುತ್ತಾ ಬಂದಿದ್ದಾರೆ. ಆದಾಗ್ಯೂ ಕೂಡಾ ಈ ಸಣ್ಣ ಸಮಾಜದ ಅಭಿವೃದ್ಧಿಗೆ ಯಾವುದೇ ನೆರವು, ಯೋಜನೆ ನೀಡದೇ ಕಡೆಗಣಿಸಲಾಗಿದೆ. ಸರಕಾರದ ಈ ನೀತಿಯನ್ನು ಸಮಾಜವು ತೀವ್ರವಾಗಿ ಖಂಡಿಸುತ್ತದೆ. ತಮ್ಮ ಬೇಡಿಕೆಗಳ ಈಡೇರಿಕೆಗೆ ಈವರೆಗೆ ಜೈನ ಸಮುದಾಯ ಶಾಂತಿಯುತ ಹೋರಾಟ ಮಾಡುತ್ತಾ ಬಂದಿದೆ. ಆದರೆ, ಸರಕಾರದ ನಿರ್ಲಕ್ಷ್ಯದ ಬಗ್ಗೆ ಸಮುದಾಯದ ಜನರಲ್ಲಿ ಬೇಸರ ಮೂಡಿಸಿದೆ. ಶೀಘ್ರವೇ ಜೈನ ಸಮುದಾಯದ ಮುಖಂಡರ ಸಭೆ ನಡೆಸಿ ಮುಂದಿನ ದಿನಗಳಲ್ಲಿ ಉಗ್ರ ಸ್ವರೂಪದ ಹೋರಾಟ ನಡೆಸಲು ರೂಪರೇಷೆಗಳನ್ನು ಸಿದ್ಧಪಡಿಸಲಾಗುವುದು ಎಂದು ಗುಣಧರನಂದಿ ಶ್ರೀಗಳು ಎಚ್ಚರಿಸಿದ್ದಾರೆ.
ಉತ್ತರ ಕರ್ನಾಟಕಕ್ಕೂ ಅನ್ಯಾಯ
ಮುಖ್ಯಮಂತ್ರಿಗಳು ಕೇವಲ ಒಂದು ಸಮಾಜದ, ಒಂದು ಪ್ರದೇಶದ ಮುಖ್ಯಮಂತ್ರಿಗಳಲ್ಲ. ಅವರು ಎಲ್ಲ ಸಮುದಾಯ ಹಾಗೂ ಪ್ರದೇಶದ ಮುಖ್ಯಮಂತ್ರಿ ಎಂಬುದನ್ನು ಅರ್ಥ ಮಾಡಿಕೊಳ್ಳಬೇಕು. ಪ್ರಸಕ್ತ ಬಜೆಟ್‌ನಲ್ಲಿ ದಕ್ಷಿಣ ಕರ್ನಾಟಕ ಭಾಗಕ್ಕೆ ನೀಡಲಾದ ಪ್ರಾದಾನ್ಯತೆಯನ್ನು ಉತ್ತರ ಕರ್ನಾಟಕಕ್ಕೆ ನೀಡಿಲ್ಲ. ಅದರಲ್ಲೂ ಹುಬ್ಬಳ್ಳಿ-ಧಾರವಾಡ ಅವಳಿ ನಗರವನ್ನು ಸಂಪೂರ್ಣ ನಿರ್ಲಕ್ಷ್ಯ ಮಾಡಿದ್ದಾರೆ. ಹೀಗಾಗಿ ಪ್ರಸಕ್ತ ಸಾಲಿನ ರಾಜ್ಯ ಬಜೆಟ್ ಕೇವಲ ದಕ್ಷಿಣ ಕರ್ನಾಟಕದ ಬಜೆಟ್ ಆಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

Previous articleನಿಗೂಢ ಕಾಯಿಲೆಗೆ ನೂರಾರು ಕುರಿ ಸಾವು
Next articleಭಾರತಕ್ಕೆ ಚಾಂಪಿಯನ್ಸ್‌ ಟ್ರೋಫಿ