ಉಡುಪಿ: ಎಳ್ಳಮಾವಾಸ್ಯೆಯಂದು ಸೋಮವಾರ ಸಮುದ್ರ ಸ್ನಾನಕ್ಕೆಂದು ತೆರಳಿದ್ದ ಈರ್ವರು ಬಾಲಕರು ಸಾವನ್ನಪ್ಪಿದ ಘಟನೆ ಹೆಜಮಾಡಿ ಸಮುದ್ರ ಕಿನಾರೆಯಲ್ಲಿ ಸಂಭವಿಸಿದೆ. ಆರು ಮಂದಿ ಸ್ನಾನಕ್ಕೆ ತೆರಳಿದ್ದು, ಆ ಪೈಕಿ ಮೂವರು ಸಮುದ್ರದ ಅಲೆಗೆ ಸಿಲುಕಿದ್ದು, ಓರ್ವನನ್ನು ರಕ್ಷಿಸಲಾಗಿದೆ.
ಮೃತ ಬಾಲಕರ ಪೈಕಿ ಓರ್ವ ಹೆಜಮಾಡಿ ಟೋಲ್ ಸಿಬ್ಬಂದಿಯೋರ್ವರ ಪುತ್ರ ಅಮಾನ್ (19) ಹಾಗೂ ಹೆಜಮಾಡಿ ಎಸ್.ಎಸ್ ರಸ್ತೆ ನಿವಾಸಿ ಅಕ್ಷಯ್ (19) ಎಂದು ಗುರುತಿಸಲಾಗಿದೆ. ಹೆಜಮಾಡಿ ನಿವಾಸಿ ಪವನ್ (19)ನನ್ನು ರಕ್ಷಿಸಲಾಗಿದೆ.
ಗೆಳೆಯರು ಆರು ಮಂದಿ ಸೇರಿ ಹೆಜಮಾಡಿಯಲ್ಲಿ ಸಮುದ್ರ ತೀರ್ಥಸ್ಥಾನಕ್ಕೆ ತೆರಳಿದ್ದು, ಮಧ್ಯಾಹ್ನದ ವರೆಗೂ ನೀರಾಟವಾಡುತ್ತಿದ್ದರು. ಸುಮಾರು ಒಂದು ಕಿ.ಮೀ. ದೂರದ ವರೆಗೆ ಕಡಲಲ್ಲಿ ಈಜಾಡಿಕೊಂಡು ಹೋಗಿದ್ದು, ಮೂವರು ಕಡಲಿನಿಂದ ಮೇಲೆ ಬಂದರೆ, ಉಳಿದ ಮೂವರು ಸ್ವಲ್ಪ ಈಜಾಡಿ ಬರುವುದಾಗಿ ಮತ್ತೆ ನೀರಾಟವಾಡಲು ತೆರಳಿದರು. ಓರ್ವನನ್ನು ಕಡಲು ತನ್ನೊಡಲಿಗೆ ಸೆಳೆದುಕೊಳ್ಳುತ್ತಿದಂತೆಯೇ ಮತ್ತಿಬ್ಬರು ಆತನನ್ನು ರಕ್ಷಿಸಲು ಮುಂದಾದರು. ಆ ಸಂದರ್ಭ ಅವಘಡ ಸಂಭವಿಸಿದೆ.
ಮೇಲಿದ್ದವರು ರಕ್ಷಣೆಗಾಗಿ ಕೂಗಾಡಿದರೂ ಅವರು ಬಹಳ ದೂರವಿದ್ದುದರಿಂದ ರಕ್ಷಣೆ ಮಾಡಲು ಕೊಂಚ ವಿಳಂಬವಾಗಿದ್ದು, ಮೂವರನ್ನೂ ಮೇಲಕ್ಕೆ ಎತ್ತಲಾಯಿತಾದರೂ, ಅಷ್ಟರಲ್ಲೇ ಇಬ್ಬರು ಇಹಲೋಹ ತ್ಯಜಿಸಿದ್ದರು.
ಪವನ್ ಆಸ್ಪತ್ರೆಯಲ್ಲಿ ಚೇತರಿಸಿಕೊಂಡಿದ್ದಾನೆ ಎಂದು ಪಡುಬಿದ್ರಿ ಪೊಲೀಸರು ತಿಳಿಸಿದ್ದಾರೆ.