ಮಾನವ ಹಕ್ಕುಗಳನ್ನು ಅರ್ಥ ಮಾಡಿಕೊಂಡು ಮಾನವೀಯ ಗುಣಗಳೊಂದಿಗೆ ಎಲ್ಲರ ಹಿತಕ್ಕಾಗಿ ಜೀವಿಸಬೇಕು
ತುಮಕೂರು: ಮನುಷ್ಯರಿಂದಲೇ ಮಾನವ ಹಕ್ಕುಗಳ ಉಲ್ಲಂಘನೆಯಾಗುತ್ತಿದೆ, ಸಮಾಜದ ನೆಮ್ಮದಿಗೆ ಅಗತ್ಯವಾದ ನಡವಳಿಕೆಗಳನ್ನು ಮನುಷ್ಯ ರೂಪಿಸಿಕೊಳ್ಳುವ ಮೂಲಕ ಮಾನವ ಹಕ್ಕುಗಳನ್ನು ರಕ್ಷಿಸಿಕೊಳ್ಳಬೇಕೆಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷರಾದ ಬಿ.ಜಯಂತ್ ಕುಮಾರ್ ಕರೆ ನೀಡಿದರು.
ಕರ್ನಾಟಕ ರಾಜ್ಯ ಮಾನವ ಹಕ್ಕುಗಳ ಆಯೋಗ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಜಿಲ್ಲಾಡಳಿತ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಂಯುಕ್ತಾಶ್ರಯದಲ್ಲಿ ಜಿಲ್ಲಾ ನಗರ ಕೇಂದ್ರ ಗ್ರಂಥಾಲಯ ಸಭಾಂಗಣದಲ್ಲಿAದು ನಡೆದ ವಿಶ್ವ ಮಾನವ ಹಕ್ಕುಗಳ ದಿನಾಚರಣೆ-೨೦೨೪ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಪ್ರತಿಯೊಬ್ಬ ನಾಗರಿಕರು ಮಾನವ ಹಕ್ಕುಗಳ ವ್ಯಾಪ್ತಿಯನ್ನು ತಿಳಿಯುವುದು ಅವಶ್ಯಕವಾಗಿದೆ. ಕವಿ ರವೀಂದ್ರನಾಥ ಠಾಗೋರ್ ಹೇಳುತ್ತಾರೆ “ಚಿಟ್ಟಿಗಳು ವರ್ಷಗಳ ಕಾಲ ಜೀವಿಸುವುದಿಲ್ಲ, ಕೆಲವು ದಿನವಷ್ಟೇ ಅವುಗಳ ಜೀವನ. ಅವು ಇರುವಷ್ಟು ಕಾಲ ಪರಸ್ಪರ ನೆಮ್ಮದಿ, ಸುಖದಿಂದ ಬಾಳುತ್ತವೆ” ಇದೇ ರೀತಿ ಮನುಷ್ಯರು ಕೂಡ ಸುಖವಾಗಿ ಜೀವಿಸಬೇಕು. ಇತರರಿಗೆ ತೊಂದರೆ ಕೊಟ್ಟು ಜೀವಿಸುವಂತಹ ಕ್ರಿಯೆ, ಭಾವನೆಗಳನ್ನು ತ್ಯಜಿಸಬೇಕೆಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಜಿ.ಪ್ರಭು, ಇಂದು ಕಾರ್ಯಕ್ರಮಕ್ಕೆ ಆಗಮಿಸಿರುವ ಎಲ್ಲರೂ ಕೂಡ ಸ್ವತಂತ್ರವಾಗಿ ಭಾಗವಹಿಸಿದ್ದೀರಿ. ಆದರೆ ೧೯೪೭ಕ್ಕೂ ಮುಂಚೆ ಭಾರತೀಯರ ಮಾನವ ಹಕ್ಕು-ಸ್ವಾತಂತ್ರö್ಯಗಳನ್ನು ನಿರ್ಬಂಧಿಸಲಾಗಿತ್ತು. ಅಂದು ರೈತರು ತಮ್ಮ ಕೃಷಿ ಜಮೀನಿನಿಂದ ಆದಾಯ ಗಳಿಸದಿದ್ದರೂ ಕೂಡ ನಿಗಧಿತ ತೆರಿಗೆಯನ್ನು ಪಾವತಿಸಬೇಕಿತ್ತು. ಸಾರ್ವಜನಿಕರ ಪ್ರತಿಭಟನೆಗೆ ಅವಕಾಶವಿರಲಿಲ್ಲ. ಸಹಸ್ರಾರು ಭಾರತೀಯರ ಬಲಿದಾನ, ಕೋಟ್ಯಾಂತರ ಭಾರತೀಯ ಹೋರಾಟದ ಫಲವಾಗಿ ನಾವು ಸ್ವಾತಂತ್ರö್ಯವನ್ನು ಪಡೆದಿದ್ದೇವೆ. ಇಂದು ಪ್ರತಿಯೊಬ್ಬರೂ ಕೂಡ ಮುಕ್ತವಾಗಿ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಬಹುದಾಗಿದೆ ಎಂದರು.
ಸಂವಿಧಾನದಲ್ಲಿ ಮೂಲಭೂತ ಹಕ್ಕುಗಳನ್ನು ಅಳವಡಿಸಲಾಗಿದೆ. ಇಂದು ಅನೇಕ ಮಾನವ ಹಕ್ಕುಗಳ ಅಧಿನಿಯಮಗಳು ಜಾರಿಯಲ್ಲಿವೆ. ನಾವೆಲ್ಲರೂ ಮಾನವ ಹಕ್ಕುಗಳನ್ನು ಅರ್ಥ ಮಾಡಿಕೊಂಡು ಮಾನವೀಯ ಗುಣಗಳೊಂದಿಗೆ ಎಲ್ಲರ ಹಿತಕ್ಕಾಗಿ ಜೀವಿಸಬೇಕು. ಇದೇ ಮಾನವ ಹಕ್ಕುಗಳ ನಿಜವಾದ ಉದ್ದೇಶವಾಗಿದೆ ಎಂದರು.
ಅಪರ ಜಿಲ್ಲಾಧಿಕಾರಿ ಡಾ: ಎನ್. ತಿಪ್ಪೇಸ್ವಾಮಿ ಮಾತನಾಡಿ, ಮಾನವರು ಪರಸ್ಪರ ವಿಶ್ವಾಸ ಹಾಗೂ ಸೌಹಾರ್ಧಯುತವಾಗಿ ಜೀವಿಸುವಂತೆ ಕರೆ ನೀಡಿದರು.
ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಅಬ್ದುಲ್ ಖಾದರ್ ಮಾತನಾಡಿ, ಮಾನವ ಹಕ್ಕುಗಳ ಸಂರಕ್ಷಣೆಗಾಗಿ ಇಲಾಖೆಯು ಹಗಲಿರುಳು ಶ್ರಮಿಸುತ್ತಿದೆ ಎಂದರು.
ಕಾರ್ಯಕ್ರಮದಲ್ಲಿ ಮಾನವ ಹಕ್ಕುಗಳ ಸಂರಕ್ಷಣೆ ಕುರಿತ ಪ್ರತಿಜ್ಞಾವಿಧಿ ಬೋಧಿಸಲಾಯಿತು. ಸಸಿ ಮತ್ತು ಪುಸ್ತಕಗಳನ್ನು ನೀಡುವ ಮೂಲಕ ವಿಶಿಷ್ಟವಾಗಿ ಆಚರಿಸಲಾಯಿತು.
ಕಾರ್ಯಕ್ರಮದಲ್ಲಿ ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ನೂರುನ್ನೀಸ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಮೇಲ್ವಿಚಾರಕ ಡಿ.ವಿ. ಸುರೇಶ್ ಕುಮಾರ್, ಕಾನೂನು ಕಾಲೇಜುಗಳ ವಿದ್ಯಾರ್ಥಿಗಳು, ಆಶಾ-ಅಂಗನವಾಡಿ ಕಾರ್ಯಕರ್ತೆಯರು, ಮತ್ತಿತರರು ಭಾಗವಹಿಸಿದ್ದರು.