ತಮಿಳುನಾಡಿನ ಸಚಿವರೊಬ್ಬರು ಸನಾತನ ಧರ್ಮದ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿದ್ದು ಇದಕ್ಕೆ ಎಲ್ಲ ಕಡೆ ಪ್ರತಿರೋಧ ವ್ಯಕ್ತವಾಗುತ್ತಿದೆ. ನ್ಯಾಯಾಲಯ ಮೊದಲು ಇಂಥ ಹೇಳಿಕೆಗೆ ಬೀಗ ಹಾಕಿಸಬೇಕು.
ತಮಿಳುನಾಡಿನ ಸಚಿವ ಉದಯ ರವಿ ಸ್ಟಾಲಿನ್ ಸನಾತನ ಧರ್ಮವನ್ನು ವೈರಸ್‌ಗೆ ಹೋಲಿಸುವ ಮೂಲಕ ದೇಶಾದ್ಯಂತ ಕೋಲಾಹಲ ಎಬ್ಬಿಸಿದ್ದಾರೆ. ಇದು ಬಾಲಿಶ ವರ್ತನೆಯಲ್ಲದೆ ಮತ್ತೇನೂ ಅಲ್ಲ. ಇಂಥ ಹೇಳಿಕೆಗಳಿಗೆ ಹಿರಿಯರು ಕಿವಿಗೊಡದೆ ಇರಬೇಕು. ಆದರೆ ಹಿರಿಯರೂ ಇದಕ್ಕೆ ಧ್ವನಿಗೂಡಿಸುತ್ತಿರುವುದು ದುರ್ದೈವದ ಸಂಗತಿ. ನಮ್ಮದು ಪ್ರಜಾಪ್ರಭುತ್ವ, ಯಾರು ಯಾವ ಧರ್ಮವನ್ನು ಬೇಕಾದರೂ ಅನುಸರಿಸಬಹುದು. ಯಾವ ಧರ್ಮವೂ ಕಡ್ಡಾಯವಲ್ಲ. ಹೀಗಿರುವಾಗ ತಮಗೆ ಒಪ್ಪಿಗೆಯಾಗದ ಧರ್ಮವನ್ನು ಬಹಿರಂಗವಾಗಿ ಟೀಕಿಸುವುದು ಸಂವಿಧಾನಬದ್ಧವಾಗಿ ಸರಿಯಲ್ಲ. ಇದು ಗೊತ್ತಿಲ್ಲದ ವಿಚಾರವೇನಲ್ಲ. ಕಾನೂನು ಗೊತ್ತಿದ್ದೂ ತಪ್ಪು ಮಾಡಲು ಸಿದ್ಧವಿರುವವರನ್ನು ನ್ಯಾಯಾಲಯ ಮೊದಲು ಅವರ ಬಾಯಿಗೆ ಬೀಗಬೇಕು. ಅವರ ಮೂಲ ಉದ್ದೇಶ ಧರ್ಮದ ಅವಹೇಳನ ಅಲ್ಲ. ಜನರ ಗಮನ ಸೆಳೆದು ಮತ ಬ್ಯಾಂಕ್ ಅಭಿವೃದ್ಧಿಪಡಿಸಿಕೊಳ್ಳುವುದು. ಚುನಾವಣೆಗೆ ಧರ್ಮವನ್ನು ಬಳಸಿಕೊಳ್ಳಬಾರದು ಎಂದು ನಿಯಮ ಹೇಳುತ್ತದೆ. ಜನ ಕೂಡ ಮತಾದೇಶ ನೀಡುವಾಗ ಧರ್ಮವನ್ನು ಪರಿಗಣಿಸುವುದಿಲ್ಲ ಎಂಬುದು ಸ್ಪಷ್ಟ.
ಇದೆಲ್ಲ ಸ್ಪಷ್ಟ ಸಂಗತಿ ಜನರ ಮುಂದಿರುವಾಗ ಮತ್ತೆ ಧರ್ಮದ ಹೆಸರಿನಲ್ಲಿ ಗೊಂದಲ ಮೂಡಿಸುವ ಕೆಲಸ ನಡೆಯುತ್ತಿದೆ. ಇದಕ್ಕೆ ನ್ಯಾಯಾಲಯ ಕಡಿವಾಣ ಹಾಕಬೇಕು. ಜನರಲ್ಲಿ ಧಾರ್ಮಿಕ ನಂಬಿಕೆಯನ್ನು ಹಾಳುಮಾಡುವುದು ಸರಿಯಲ್ಲ. ಕಡು ಬಡವರು ಧರ್ಮ ಮತ್ತು ದೇವರ ಹೆಸರಿನಲ್ಲಿ ಇನ್ನೂ ನಂಬಿಕೆ ಇಟ್ಟುಕೊಂಡಿರುವುದರಿಂದಲೇ ಪ್ರಜಾಪ್ರಭುತ್ವ ವ್ಯವಸ್ಥೆ ಮುಂದುವರಿದಿದೆ. ನಮ್ಮ ದೇಶದಲ್ಲಿ ಜನಸಂಖ್ಯೆ ಅಧಿಕವಾಗಿದ್ದರೂ ಬಂದೂಕು ಮತ್ತು ಇತರ ಶಸ್ತ್ರಗಳ ಬಳಕೆ ಕಡಿಮೆ. ಬೇರೆ ದೇಶಗಳ ಪರಿಸ್ಥಿತಿಯನ್ನು ಅವಲೋಕಿಸಿದರೆ ತಿಳಿಯುತ್ತದೆ.
ಎಲ್ಲ ಧರ್ಮದಲ್ಲೂ ಒಳಿತು- ಕೆಡುಕು ಇದ್ದೇ ಇರುತ್ತದೆ. ಜನರು ಕಾಲಕಾಲಕ್ಕೆ ತಕ್ಕಂತೆ ಅವುಗಳನ್ನು ಬದಲಿಸಿಕೊಳ್ಳುತ್ತಾರೆ. ಹಿಂದೆ ಸತಿ ಸಹಗಮನ ಪದ್ಧತಿ ಇತ್ತು. ಅದನ್ನು ಕಾನೂನು ಮೂಲಕ ನಿಷೇಧಿಸಲಾಯಿತು. ಅದೇರೀತಿ ಅಸ್ಪೃಶ್ಯತೆಯನ್ನೂ ಕಾನೂನು ಬಾಹಿರ ಎಂದು ಘೋಷಿಸಿದ್ದೇವೆ. ಧರ್ಮ ಮತ್ತು ದೇವರ ನಂಬಿಕೆ ಪ್ರತಿಯೊಬ್ಬರ ವೈಯಕ್ತಿಕ ವಿಚಾರ. ಅದನ್ನು ಯಾರೂ ಪ್ರಶ್ನಿಸಬಾರದು. ಎಲ್ಲಕ್ಕಿಂತ ಮಾನವಧರ್ಮ ದೊಡ್ಡದು ಎಂದು ಈಗಾಗಲೇ ಒಪ್ಪಿಕೊಂಡಿದ್ದೇವೆ. ಅದರಂತೆ ನಡೆಯುವುದು ಅಗತ್ಯ. ಉಳಿದ ಎಲ್ಲ ಧರ್ಮಗಳು ಆಯಾ ವ್ಯಕ್ತಿಗಳಿಗೆ ಬಿಟ್ಟ ವಿಚಾರ. ಇಂಥ ಪರಿಸ್ಥಿತಿಯಲ್ಲಿ ಗೊಂದಲ ಮೂಡಿಸಲು ಅವಕಾಶವೇ ಇಲ್ಲ. ನಮ್ಮ ಸ್ವಾತಂತ್ರ್ಯ ಹೋರಾಟಗಾರರು ಮತ್ತು ಸಂವಿಧಾನ ರಚನಾಕಾರರು ಎಲ್ಲವನ್ನೂ ಆಲೋಚಿಸಿ ಹಿಂದಿನ ಎಲ್ಲ ಅನಿಷ್ಟಗಳನ್ನು ಕೈಬಿಡಲು ಅನುಕೂಲವಾಗುವಂತೆ ಸಂವಿಧಾನ ರಚಿಸಿದ್ದಾರೆ. ಜನಪ್ರತಿನಿಧಿಗಳು ಯಾರು ಬೇಕಾದರೂ ಆಗಬಹುದು. ಅದಕ್ಕೆ ಯಾವ ಜಾತಿ- ಧರ್ಮವೂ ಅಡ್ಡಬರುವುದಿಲ್ಲ. ದೇಶದ ಉದ್ದಗಲಕ್ಕೂ ಯಾರು ಬೇಕಾದರೂ ಎಲ್ಲಿಂದ ಬೇಕಾದರೂ ಸ್ಪರ್ಧಿಸಬಹುದು. ನಮಗೆ ಧರ್ಮದ ಬಗ್ಗೆ ಇದ್ದ ಎಲ್ಲ ಸಂದೇಹಗಳನ್ನು ನಮ್ಮ ಪೂರ್ವಜರು ನಿವಾರಿಸಿ ಹೋಗಿದ್ದಾರೆ. ಡಾ. ಸರ್ವಪಲ್ಲಿ ರಾಧಾಕೃಷ್ಣನ್ ಅವರ ಹುಟ್ಟುಹಬ್ಬವನ್ನು ಆಚರಿಸಿದ್ದೇವೆ. ಅವರು ವಿಜ್ಞಾನ ಮತ್ತು ಧರ್ಮವನ್ನು ಎಳೆಎಳೆಯಾಗಿ ಬಿಡಿಸಿ ಹೇಳಿದ್ದಾರೆ. ತಮಿಳುನಾಡು ಸಚಿವರು ರಾಧಾಕೃಷ್ಣನ್ ಅವರ ಗ್ರಂಥಗಳನ್ನು ಓದುವುದು ಒಳಿತು. ಜನರನ್ನು ಒಡೆಯುವುದು ಸುಲಭ. ಒಂದುಗೂಡಿಸುವುದು ಕಷ್ಟ. ತಮಿಳುನಾಡಿನ ಜ್ಯೂನಿಯರ್ ಸ್ಟಾಲಿನ್ ತಮ್ಮ ತಪ್ಪು ತಿಳಿದುಕೊಂಡು ಆದಷ್ಟು ತ್ವರಿತವಾಗಿ ತಮ್ಮ ಹೇಳಿಕೆಯನ್ನು ಹಿಂದಕ್ಕೆ ಪಡೆದು ತಮಿಳುನಾಡಿನ ಗೌರವ ಉಳಿಸುವುದು ಒಳಿತು. ಎಲ್ಲವನ್ನೂ ವಿರೋಧಿಸುವುದು ಒಂದು ಫ್ಯಾಷನ್ ಆಗಬಹುದೇ ಹೊರತು ಅದೇ ಜೀವನಪಥ ಆಗುವುದಿಲ್ಲ.