ಸತ್ಯಕ್ಕೂ ಮುನ್ನ ಸುಳ್ಳು ಊರೆಲ್ಲ ಸುತ್ತಾಡಿ

0
10

ಮುಖ್ಯಮಂತ್ರಿಗಳೇ ಸುಲಭವಲ್ಲವಿದು

ಸಾಮಾಜಿಕ ಜಾಲತಾಣಗಳಲ್ಲಿನ ನಕಲಿ ಸುದ್ದಿಗಳ ಹಾವಳಿಗೆ ಕಡಿವಾಣ ಹಾಕಿ. ಇಂತಹ ಚಟುವಟಿಕೆಗಳ ಮೂಲ ಗುರುತಿಸಿ ಕಠಿಣ ಕಾನೂನು ಕ್ರಮ ಜರುಗಿಸಿ..'. ಮುಖ್ಯಮಂತ್ರಿ ಸಿದ್ದರಾಮಯ್ಯ ಈ ಖಡಕ್ ಸೂಚನೆಯನ್ನು ಪೊಲೀಸ್ ಅಧಿಕಾರಿಗಳಿಗೆ ನೀಡುತ್ತಿದ್ದಂತೆಯೇ, ಸಾಮಾಜಿಕ ಜಾಲತಾಣದ ಮಂದಿ ಹುಸಿನಗೆ, ವ್ಯಂಗ್ಯ ಭಾವ ಬೀರಿದ್ದರೆ, ಪೊಲೀಸ್ ಅಧಿಕಾರಿಗಳು ಮಂಡೆ ಬಿಸಿಮಾಡಿಕೊಂಡರು. ಇದು ಸುಲಭದ ಮಾತಲ್ಲ ವಿಶೇಷವಾಗಿ ಸುಳ್ಳು ಸುದ್ದಿ ಸೃಷ್ಟಿಕರ್ತರು ಹಾಗೂ ಇದನ್ನು ನಿಯಂತ್ರಿಸಬೇಕಾದ ಸರ್ಕಾರಕ್ಕೂ ಗೊತ್ತು. ಏಕೆಂದರೆ ಈಗಫೇಕ್ ನ್ಯೂಸ್’ ಮಾಹಿತಿ ತಾಣವಾಗಿ ಉಳಿದಿಲ್ಲ. ಅದು ಒಂದು ಫ್ಯಾಕ್ಟರಿಯಾಗಿದೆ. ಈ ಫ್ಯಾಕ್ಟರಿಯಲ್ಲಿ ಲಕ್ಷಾಂತರ ಮಂದಿ ಫೇಕ್ ನ್ಯೂಸ್ ಉತ್ಪಾದಕರಿದ್ದರೆ, ಕೋಟ್ಯಂತರ ಮಂದಿ ಅದರ ಫಾಲೋವರ್ಸ್ಗಳು, ಅಭಿಮಾನಿ ದೇವರುಗಳು, ಹಾಗೇ ತಮಗೆ ಬೇಕಾದಂತೆ ತಿರುಚಿಕೊಳ್ಳುವವರು ಇದ್ದಾರೆ.
ಸಿದ್ದರಾಮಯ್ಯ ೨೦೧೩ರಲ್ಲಿ ಈ ವದಂತಿಗಳನ್ನು ಹಬ್ಬಿಸುವವರ, ಸುಳ್ಳು ನಕಲಿ ಸುದ್ದಿಗಳನ್ನು ಹರಡುವವರ ಮೂಲ ಕೆದಕುತ್ತಿದ್ದರು. ಅದು ಹಿಂದಿನ ಸರ್ಕಾರದಲ್ಲಿ ಸ್ಥಗಿತಗೊಂಡಿದೆ. ಪುನಃ ಆರಂಭಿಸಿ ಎನ್ನುವುದು ಅವರ ನಿರ್ದೇಶನ. ಆದರೆ ೨೦೧೩ರ ಸ್ಥಿತಿ ಈಗಿಲ್ಲ ಎನ್ನುವುದು ವಾಸ್ತವ. ಸಾಮಾಜಿಕ ಜಾಲತಾಣ ಬಳಕೆದಾರರ ಸಂಖ್ಯೆ ಹತ್ತಾರು ಪಟ್ಟು ಹೆಚ್ಚಿದೆ. ಹಾಗೇ ಅವರೂ, ಅವರ ಪಕ್ಷದವರೂ ಸೇರಿದಂತೆ ಅಭಿಮಾನಿ ದೇವರುಗಳು ಸೋಷಿಯಲ್ ಮೀಡಿಯಾ ಫ್ಯಾಕ್ಟರಿ ಬೃಹದಾಕಾರವಾಗಿ ಬೆಳೆದಿದೆ. ನಕಲಿ ಸುದ್ದಿಗಳು ಅಥವಾ ವದಂತಿಗಳನ್ನು ಮುಂದೆ ಮುಂದೆ ಕ್ಷಣಾರ್ಧದಲ್ಲಿ ಕೋಟ್ಯಂತರ ಮಂದಿಗೆ ರವಾನಿಸುವವರ ನೆಟ್‌ವರ್ಕ್ ಮನೋವೇಗಕ್ಕಿಂತಲೂ ಹೆಚ್ಚಾಗಿರುವಾಗ ಈ ಸುಳ್ಳು ಸುದ್ದಿ ಕಾರುಬಾರು ನಿಯಂತ್ರಿಸುವುದು ಹೇಗೆ? ಎನ್ನುವುದೇ ಸಮಸ್ಯೆ. ಹಾಗೇ ಇದು ಬರೇ ಸುಳ್ಳು ಸುದ್ದಿ, ವದಂತಿ ಎಂದು ಸ್ಪಷ್ಟಪಡಿಸುವುದರ ಒಳಗೆ ಒಂದೊಂದು ನಗರ ಹೊತ್ತಿ ಉರಿಯುತ್ತದೆ. ಸಾವಿರಾರು ಕಟ್ಟಡಗಳು ಜಖಂಗೊಳ್ಳುತ್ತವೆ. ಊರಿಗೆ ಊರೇ ಕ್ಷೋಭೆಗೆ ಒಳಗಾಗುತ್ತದೆ. ಎರಡು ರಾಜಕೀಯ ಪಕ್ಷಗಳ ಸಂಘರ್ಷ- ಪೈಪೋಟಿ ಮುಗಿಲು ಮುಟ್ಟುತ್ತದೆ. ಸತ್ಯ ನಾಚಿ ಮಲಗಿರುತ್ತದೆ!
ಹಾಗಾಗಿ ಇದರ ನಿರ್ಬಂಧ ಸಿಎಂ ಸಿದ್ದರಾಮಯ್ಯ ಹೇಳಿರುವಷ್ಟು ಸುಲಭವಿಲ್ಲ. ನಿಜ ಸೋಷಿಯಲ್ ಮೀಡಿಯಾ, ಸಾಮಾಜಿಕ ಜಾಲತಾಣ ಹಾಗೂ ಇಂಟರ್‌ನೆಟ್ ಈಗ ಜನರ ಜೀವನದ ಅನಿವಾರ್ಯ ಅಂಗವಾಗಿದೆ. ಬಹುಶಃ ಒಂದು ಕ್ಷಣ ಈ ಜಾಲ ಸ್ಥಗಿತಗೊಂಡರೂ ಹಾಹಾಕಾರ ಏಳುತ್ತದೆ. ಭೂಮಿಯೇ ತಿರುಗುವುದನ್ನು ನಿಲ್ಲಿಸಿಬಿಟ್ಟಿದೆಯೋ ಎನ್ನುವಷ್ಟು ಜನ ಆತಂಕಿತರಾಗುತ್ತಾರೆ. ಕುಡಿಯಲು ನೀರು, ಉಸಿರಾಡಲು ಗಾಳಿ ಇಲ್ಲದಿದ್ದರೂ ಸರಿ, ಕ್ಷಣ ಮಾತ್ರವೂ ಈ ಜಾಲತಾಣ ಸ್ಥಗಿತಗೊಳ್ಳಬಾರದು ಎನ್ನುವ ವ್ಯವಸ್ಥೆ ಮತ್ತು ಅನಿವಾರ್ಯತೆಗೆ ವಿಶ್ವ ಬಂದು ನಿಂತಿದೆ. ಹಾಗಾಗಿ ಇದರ ನಿರ್ಬಂಧ ಸಿಎಂ ಸಿದ್ದರಾಮಯ್ಯ ಹೇಳಿರುವಷ್ಟು ಸುಲಭವಿಲ್ಲ.
ಸಾಮಾಜಿಕ ಜಾಲತಾಣ ಆರಂಭವಾದಾಗ ಪ್ರತಿಯೊಬ್ಬರಿಗೂ ವಾಕ್ ಸ್ವಾತಂತ್ರ್ಯ ದೊರೆತು, ಪ್ರತಿಯೊಬ್ಬರೂ ಮಾಹಿತಿ ಹಂಚಿಕೆದಾರರು, ಪತ್ರಕರ್ತರು, ವಿಶ್ಲೇಷಕರೂ ಎಲ್ಲರೂ ಆಗಿದ್ದಾರೆಂಬ ಮಾತಿತ್ತು. ಈಗ ಸಾಮಾಜಿಕ ಜಾಲತಾಣದಲ್ಲಿ ನಂಬಲಸಾಧ್ಯ ಮತ್ತು ಅವಾಂತರಕಾರಿ ವಿಷಯಗಳನ್ನು ಕೇಳುವ- ನೋಡುವ ಸ್ಥಿತಿಗೆ ನಾವು ಬಂದಿದ್ದೇವೆ.
ಕಳೆದ ೨೦೨೦ರಲ್ಲಿ ಭಾರತದ ಈ ಸಾಮಾಜಿಕ ಜಾಲತಾಣಗಳ ಮತ್ತು ನಕಲಿ ಸುದ್ದಿ ಹಂಚುವವರ ಕುರಿತು ಒಂದು ಅಧ್ಯಯನವನ್ನು ವಿಶ್ವ ಮಾನ್ಯ ಸಂಸ್ಥೆ ನಡೆಸಿತು. ನಾಲ್ಕು ಲಕ್ಷ ಜಾಲದಲ್ಲಿ ಹರಡಿರುವ ಸುದ್ದಿಯನ್ನು ಜಾಲಾಡಿದಾಗ, ೨.೭೬ ಲಕ್ಷ ಮಾಹಿತಿಗಳು ಈ ಫೇಕ್ ನ್ಯೂಸ್ ಫ್ಯಾಕ್ಟರಿಗಳಿಂದ ಉದ್ದೇಶಪೂರ್ವಕವಾಗಿಯೇ ಸೃಷ್ಟಿಯಾದವು ಮತ್ತು ನಿರಂತರವಾಗಿ ಅವು ಜನರಿಂದ ಜನರಿಗೆ ವ್ಯಾಪಿಸಿದವು ಎಂಬುದು ಗೊತ್ತಾಯಿತು. ವಾಟ್ಸ್ಅಪ್ ಯೂನಿವರ್ಸಿಟಿಗಳೆಂಬ ಕುಬಿದಾಮ ಪ್ರಖ್ಯಾತವಾಗಿದೆ.
ಮಣಿಪುರದ ಪ್ರಸ್ತುತ ಗಲಭೆ ಗೊತ್ತಲ್ಲ. ಇದಕ್ಕೆ ವಿಶೇಷವಾಗಿ ಹಾಗೂ ವ್ಯವಸ್ಥಿತವಾಗಿ ನೀರೆರೆದು ಬೆಳೆಸಿದ್ದೇ ಫೇಕ್ ನ್ಯೂಸ್ ಫ್ಯಾಕ್ಟರಿಗಳು. ರಾಜಕೀಯ ಲಾಭಕ್ಕಾಗಿ ಬಿತ್ತರಿಸಿದ ನಕಲಿ ಸುದ್ದಿಯೊಂದು ನೂರಾರು ಜನರ ಸಾವು ಮತ್ತು ಸಾವಿರಾರು ಕೋಟಿ ಆಸ್ತಿ ಹಾನಿಗೆ ಕಾರಣವಾಗುತ್ತಿದೆ. ಇದನ್ನು ಹಬ್ಬಿಸಿದವರಿಗೆ ಈಗ ನಿಯಂತ್ರಿಸಲು ಅಸಾಧ್ಯ. ಬೆಳೆಸಿದವರಿಗೆ ಹಿಡಿದಿಡಲಸಾಧ್ಯ.
ಈ ಫೇಕ್ ನ್ಯೂಸ್ ಫ್ಯಾಕ್ಟರಿಗಳನ್ನು ಆರಂಭಿಸಿದವರೇ ಭಾರತದ ಮಟ್ಟಿಗೆ, ಅಷ್ಟೇ ಅಲ್ಲ ಜಗತ್ತಿನಲ್ಲೇ ಈ ರಾಜಕೀಯ ಪಕ್ಷಗಳು. ಮತ್ತು ನಾಯಕರ ಅಭಿಮಾನಿ ದೇವ ದೇವತೆಗಳ ಗುಂಪು. ತಮಗೆ ಹೇಗೆ ಬೇಕೋ ಹಾಗೆ ಪ್ರತಿಸ್ಪರ್ಧಿಗಳನ್ನು ಹಣಿಯುವುದಕ್ಕೆ ಬಳಸಿಕೊಳ್ಳಲು ಈ ಫ್ಯಾಕ್ಟರಿಗಳ ಸೃಷ್ಟಿ. ಚುನಾವಣೆ ಸಂದರ್ಭದಲ್ಲಂತೂ ಇದು ಸಮರ ಕಲೆ, ಶಸ್ತ್ರಾಸ್ತ್ರ !
ಹೇಗಿರುತ್ತೆ ನೋಡಿ. ಇತ್ತೀಚೆಗೆ ಭಾರತಕ್ಕೆ ನೋಬಲ್ ಸಮಿತಿಯ ಉಪನಾಯಕ ಅಸ್ಲೆ ಟೋಝೆ ಭೇಟಿ ನೀಡಿದ್ದರು. ಅದೇ ವೇಳೆ ಟ್ವೀಟರ್ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಪ್ರಧಾನಿ ನರೇಂದ್ರ ಮೋದಿ ನೋಬಲ್ ಶಾಂತಿ ಪ್ರಶಸ್ತಿಗೆ ಪ್ರಮುಖ ಸ್ಪರ್ಧಿ. ಅದನ್ನು ಪರಿಶೀಲಿಸಲೆಂದೇ ಟೋಝೆ ಭಾರತಕ್ಕೆ ಬಂದಿದ್ದಾರೆ'ಎಂಬ ಟ್ವೀಟರ್ ಮತ್ತು ವಾಟ್ಸಪ್ ಮೆಸೆಜ್‌ಗಳು ಹರಿದಾಡಿದವು. ಕ್ಷಣಾರ್ಧದಲ್ಲಿ ಕೋಟ್ಯಂತರ ಮಂದಿ ವೀಕ್ಷಿಸಿ ಲೈಕು ಒತ್ತಿದರು. ಭೇಷ್ ಎಂದರು. ಅದ್ಭುತ, ಅರ್ಹ ಎಂದೆಲ್ಲ ಪ್ರತಿಕ್ರಿಯಿಸಿದರು. ಮಾಧ್ಯಮ ಸಂಸ್ಥೆಗಳೂ ಕೂಡ ಇದನ್ನೇ ನಂಬಿ ಪ್ರಕಟಿಸಿಬಿಟ್ಟವು. ಇದು ನಕಲಿ ಸುದ್ದಿ ಎಂದು ಟೋಝೆ ಎಎನ್‌ಐ ಸುದ್ದಿ ಸಂಸ್ಥೆಯೊಂದಿಗೆ ಮಾತನಾಡುವಷ್ಟರಲ್ಲಿ ಭಾರತದ ಮೂಲೆ ಮೂಲೆಗಳಿಗೆ ಮೋದಿಗೆ ನೋಬಲ್ ಶಾಂತಿ ಪ್ರಶಸ್ತಿ ದೊರಕಿತೆಂಬ ಅಭಿಮಾನ ಪೂರ್ವಕ ಮಾತುಗಳೇ ಕೇಳಿ ಬಂದವು!. ಯುನೆಸ್ಕೋ ಜನಮನಗಣ ರಾಷ್ಟ್ರಗೀತೆಯನ್ನು ``ವಿಶ್ವದ ಬೆಸ್ಟ್ ರಾಷ್ಟ್ತಗೀತೆ'' ಎಂದು ಘೋಷಿಸಿದೆ ಎಂಬ ಮಾಹಿತಿ ವಾಟ್ಸಪ್‌ಗಳಲ್ಲಿ ಹರಿದಾಡಿತು. ಆದರೆ ಇದು ಫೇಕ್ ನ್ಯೂಸ್. ಹಾಗೆಯೇ ದಾವುದ್ ಇಬ್ರಾಹಿಂನ ಹದಿನೈದು ಸಾವಿರ ಕೋಟಿ ರೂಪಾಯಿ ದುಬೈ ಆಸ್ತಿಯನ್ನು ಸೀಜ್ ಮಾಡಲಾಗಿದೆ ಎಂಬ ವದಂತಿ ಹಾಗೂ ವಿಶೇಷ ಎಪಿಸೋಡ್‌ಗಳನ್ನು ಟಿವಿಗಳು ತೋರಿಸಿದವು. ಆದರೆ ಇದು ಫೇಕ್. ೨೦೦೦ ರೂ ನೋಟಿನಲ್ಲಿ ಜಿಪಿಎಸ್ ಚಿಪ್ ಇದೆ ಎನ್ನುವುದಾಗಲೀ, ದೇಶಾದ್ಯಂತ ಉಪ್ಪಿನ ಕೊರತೆ ಉಂಟಾಗಿದೆ ಎನ್ನುವುದಾಗಲೀ, ಮಕ್ಕಳ ಕಳ್ಳತನವಾಗುತ್ತಿದೆ ಎಂದು ಜಾರ್ಖಂಡ್‌ನಲ್ಲಿ ಹಬ್ಬಿರುವ ವದಂತಿ ಹಾಗೂ ಪರಿಣಾವಾಗಿ ಎದ್ದಿರುವ ದಾಂಧಲೆ ಇತ್ಯಾದಿಗಳೆಲ್ಲ ಇಂಥವೇ. ಇವೆಲ್ಲ ಸೃಷ್ಟಿಯಾಗಿರುವುದು, ಸಿದ್ಧವಾಗಿರುವುದು ಅವರವರ ಅಭಿಮಾನಿ ಬ್ರಿಗೇಡ್! ಕೋವಿಡ್‌ನಲ್ಲಿ ಇಡೀ ಜಗತ್ತೇ ಈ ವದಂತಿ ಕಾರುಬಾರದಿಂದ ಕಂಗೆಟ್ಟಿತ್ತು. ಲಸಿಕೆಗಳೇ ಅಪಾಯಕಾರಿ. ಪುರುಷತ್ವವನ್ನು ಕಸಿದುಕೊಳ್ಳುತ್ತವೆ ಎಂದು ಲಾಬಿ ಪರ ವದಂತಿ ಹಬ್ಬಿಸಿದ್ದರಿಂದ ಇಡೀ ಜಗತ್ತಿನಲ್ಲಿ ಲಸಿಕೆ ವಿರುದ್ಧ ಪ್ರತಿ ಆಂದೋಲನವೇ ಶುರುವಾಗುವ ಹಂತಕ್ಕೆ ಬಂದಿತ್ತಲ್ಲವೇ!?. ಈ ನಕಲಿ ಸುದ್ದಿ ಅಥವಾ ಖೊಟ್ಟಿ ಸಾಮಾಜಿಕ ಜಾಲತಾಣಗಳು ಈಗ ಸಾವಿರಾರು ಕೋಟಿ ರೂಪಾಯಿಗಳ ದಂಧೆ!. ಜನ ಸತ್ಯವನ್ನು ನಂಬುವುದಕ್ಕಿಂತಲೂ ವದಂತಿ- ಸುಳ್ಳುಗಳನ್ನು ಬಹುಬೇಗ ನಂಬುವುದು ಸತ್ಯ. ಅಂತೆ ಕಂತೆಗಳಿರುವ ಪ್ರಾಧಾನ್ಯತೆ ನೈಜ ಸಂಗತಿಗೆ ದೊರೆಯದು. ಈ ಫೇಕ್ ನ್ಯೂಸ್ ಹಾಗೂ ಫೇಕ್ ಮಾಹಿತಿಯನ್ನು ಬಿತ್ತರಿಸುವ ಮೂಲಕ ಅದು ವೈರಲ್ ಆದಷ್ಟೂ ಮಾರುಕಟ್ಟೆ ದರ ಹೆಚ್ಚು. ಈ ಮಾರುಕಟ್ಟೆ ಪ್ರಭೃತಿಗಳು ಸಮಾಜದಲ್ಲಾಗುವ ದುರವಸ್ಥೆಯನ್ನು ಪರಿಗಣಿಸುವುದಿಲ್ಲ. ತಮ್ಮ ಪ್ರಚಾರ, ಬ್ರ್ಯಾಂಡ್ ಅಷ್ಟೇ ಮುಖ್ಯ. ಜನರಿಗೆ ಸಮಾಜಕ್ಕೆ ಆಗುವ ಹಾನಿ ಅವರಿಗೆ ಪ್ರಮುಖವೇ ಅಲ್ಲ. ಇಷ್ಟಕ್ಕೂ ಇವುಗಳ ಫ್ಯಾಕ್ಟ್ಚೆಕ್ ಕಷ್ಟಸಾಧ್ಯ. ಹಾಗಾಗಿಯೇ ಜೀವನವನ್ನೇ, ಸುಳ್ಳು ಮಾಹಿತಿ ಹಂಚುವ, ಪುಂಖಾನುಪುಂಖವಾಗಿ ಸುಳ್ಳಿನ ಭಾಷಣ ಮಾಡುವ ಅದನ್ನೇ ಜಾಲತಾಣಗಳಲ್ಲಿ ಹಾಕುತ್ತಬೇಲಿ’ ದಾಟುವವರಿಗೆ ಡಿಮ್ಯಾಂಡ್!
ಫೇಕ್ ನ್ಯೂಸ್ ನಿಯಂತ್ರಣಕ್ಕೆ ಮತ್ತು ಸುದ್ದಿಗಳ ನಿಜ ಸ್ವರೂಪ ತಿಳಿಯಲು ಪ್ರೆಸ್ ಇನ್‌ಫರ‍್ಮೇಷನ್ ಬ್ಯೂರೋ (ಪಿಐಬಿ) ಒಂದು ಪರಿಶೀಲನಾ ಘಟಕವನ್ನೇನೋ ಆರಂಭಿಸಿದೆ ನಿಜ. ಆದರೆ ಇದು ಸರ್ಕಾರಕ್ಕೆ ಸಂಬಂಧಿಸಿದ ವಿಷಯಗಳಿಗಷ್ಟೇ. ಎಲ್ಲಿ ಈ ಸುಳ್ಳು ಸೃಷ್ಟಿಯಾಗಿದೆ, ಮೂಲ ಯಾವುದು, ಯಾರು ಎಂದು ತಿಳಿಯುವುದಕ್ಕಷ್ಟೇ. ೨೦೧೯ ನವೆಂಬರ್‌ನಿಂದ ಅಸ್ತಿತ್ವದಲ್ಲಿರುವ ಪಿಐಬಿ ಫ್ಯಾಕ್ಟ್ಚೆಕ್ ಕೇಂದ್ರ ಸರ್ಕಾರಿ ನೋಂದಾಯಿತ ಸಂಸ್ಥೆಗಳ ಮಾಹಿತಿಗಳ ಕೆಲಸಕ್ಕೆ ಮಾತ್ರ.
ಹಾಗಾಗಿ ಸಿದ್ದರಾಮಯ್ಯ ಈಗ ಕರ್ನಾಟಕ ಫ್ಯಾಕ್ಟ್ ಚೆಕ್ ಕೇಂದ್ರ ಆರಂಭಿಸಬೇಕಾಗುತ್ತದೆ. ಆಗ ಸರ್ಕಾರಿ ಸುಳ್ಳು ಮಾಹಿತಿ ಬಿತ್ತರಿಸುವವರ ಮೇಲೆ ಕ್ರಮ ಜರುಗಿಸಬಹುದು. ಹಿಂದೆ ಐಟಿ ಬಿಟಿ ಸಚಿವರಾಗಿದ್ದ ಪ್ರಿಯಾಂಕ ಖರ್ಗೆ ಒಂದು ಕಾನೂನು ತರಲು ಹೋಗಿದ್ದರು. ಅದಕ್ಕೆ ವಿರೋಧವೂ ಬಂತು ಎನ್ನಿ. ಈಗ ಅವರದ್ದೇ ಸರ್ಕಾರ. ಅವರೇ ಮಂತ್ರಿ. ಕಠಿಣಕ್ಕಿಂತ, ಕ್ರಿಯಾಶೀಲ ಪರಿಹಾರ ಕಂಡುಕೊಳ್ಳಬೇಕು.
ನಕಲಿ ಮತ್ತು ಸುಳ್ಳು ಸುದ್ದಿ ಹರಡಿಸುವವರಿಂದ ಪತ್ರಿಕೆಗಳ ಮತ್ತು ಮಾಧ್ಯಮ ಲೋಕದ ವಸ್ತುನಿಷ್ಠತೆ ಮತ್ತು ಪಾರದರ್ಶಕತೆಗೆ ಸಮಸ್ಯೆಯಾಗಿರುವುದಂತೂ ನಿಜ. ವಿಶ್ವ ಪತ್ರಿಕಾ ಸ್ವಾತಂತ್ರ್ಯದಲ್ಲಿ ಭಾರತದ ಶ್ರೇಯಾಂಕವು ೧೮೦ ದೇಶಗಳ ಪೈಕಿ ೧೫೦ನೇ ಸ್ಥಾನದಲ್ಲಿದೆ.
ಇದು ಕರ್ನಾಟಕದ ಸಿದ್ದರಾಮಯ್ಯನವರೊಬ್ಬರ ಅಥವಾ ಭಾರತದ ಸಮಸ್ಯೆಯಷ್ಟೇ ಆಗಿ ಉಳಿದಿಲ್ಲ. ಅಮೇರಿಕ, ಸ್ಪೇನ್, ಸ್ವಿಟ್ಸರ್‌ಲ್ಯಾಂಡ್, ರಷ್ಯಾ, ಚೀನಾ, ದಕ್ಷಿಣ ಆಫ್ರಿಕಾ, ಇಂಗ್ಲೆAಡ್ ಇತ್ಯಾದಿ ಕಡೆ ಇನ್ನೂ ದೊಡ್ಡ ಜಟಿಲವಾಗಿದೆ. ಬಿಗಿ ಕಾನೂನು ತಂದರೂ, ನಕಲಿ ತಡೆಗೆಂದೇ ಹೊಸ ತಂತ್ರಜ್ಞಾನಗಳಿಗೆ ಮೊರೆ ಹೋದರೂ ನಿಯಂತ್ರಣ ಮಾತ್ರವಿಲ್ಲ. ಕ್ಷಣಾರ್ಧದಲ್ಲಿ ಸುಳ್ಳು ಊರೆಲ್ಲ ಸುತ್ತಾಡಿಕೊಂಡು ಬಂದಾಗ ಸತ್ಯ ಸಾವಧಾನಿಯಂತೆ ಹೇಳಲು ಹೊರಡುವುದು! ಇಷ್ಟಕ್ಕೂ ಸಾಮಾಜಿಕ ಜಾಲತಾಣದ ಸುಳ್ಳಿನ ಅಂತೆಕಂತೆ ಮನೆಯ ಕುರಿತು ಹೇಳುವ ಕಾರಣ ಜುಲೈ ೧ಕ್ಕೆ ಪತ್ರಿಕಾ ದಿನ. ಸುಳ್ಳು ಸುದ್ದಿ ಎದುರು ನೈಜ ಪತ್ರಿಕೋದ್ಯಮ, ಸತ್ಯ ಸೊರಗುತ್ತಿವೆ. ಅಲ್ಲವೇ…?

Previous articleದುರ್ಗುಣಗಳನ್ನು ಸಂಪೂರ್ಣ ತೊಲಗಿಸಿ
Next articleಕರ್ನಾಟಕ್ ಬಂದ್‌ಗೆ ಮಿಶ್ರ ಪ್ರತಿಕ್ರಿಯೆ