Home ವೈವಿಧ್ಯ ಸಂಪದ ಸಜ್ಜನರ ದಾರಿಯಲ್ಲಿ ಸಾಗಿದರೆ ಸತ್ಯದ ಸಾಕ್ಷಾತ್ಕಾರ

ಸಜ್ಜನರ ದಾರಿಯಲ್ಲಿ ಸಾಗಿದರೆ ಸತ್ಯದ ಸಾಕ್ಷಾತ್ಕಾರ

0

ಒಬ್ಬ ವ್ಯಕ್ತಿ ಎಷ್ಟೇ ಧನ, ವಿದ್ಯೆ, ಪ್ರತಿಷ್ಠೆ ಹೊಂದಿದ್ದರೂ, ಒಳ್ಳೆಯವರ ಸಹವಾಸವಿಲ್ಲದೆ ಆತ್ಮ ಸಂತೋಷವನ್ನು ಪಡೆಯಲು ಸಾಧ್ಯವಿಲ್ಲ. ಹಣ ನಮಗೆ ಎಲ್ಲವನ್ನೂ ಕೊಡುವುದಿಲ್ಲ, ಮನಸ್ಸು, ದೇವರಕಡೆಗೆ ವಾಲಬೇಕಾದರೆ ಸತ್ಸಂಗ ನಡೆಯುವ ಸ್ಥಳಕ್ಕೆ ಕಾಲುಗಳು ಹೋಗಬೇಕು. ಜ್ಞಾನದ ದಾಹವಿದ್ದವನು ಮನೆಯಲ್ಲಿ ಕೂಡಲಾರ. ಅದರಲ್ಲೂ ದೇವರ ಬಗ್ಗೆ ವಿಶೇಷ ಜ್ಞಾನ ಪಡೆಯಬೇಕೆಂದರೆ ಜ್ಞಾನಿಗಳ, ಸಜ್ಜನರ ಸಮ್ಮುಖದಲ್ಲಿ ನಡೆಯುವ ಸಭೆಗಳಿಗೆ ಹೋಗಿ ದೇವರ ವಿಷಯಗಳನ್ನು ಅರಿಯಬೇಕು. ಅರಿತ ವಿಷಯಗಳನ್ನು ಗುರುಗಳಲ್ಲಿ ವಿಮರ್ಶೆ ಮಾಡಿ ಸತ್ಯವಾದ ದಾರಿಯಲ್ಲಿ ನಡೆಯಬೇಕು. ಆ ಸತ್ಯವಾದ ದಾರಿಯಲ್ಲಿ ನಡೆಯಲು ಸಜ್ಜನರ ಸಹವಾಸ ಬೇಕು. ಪ್ರಹ್ಲಾದರಾಜರು ಬಾಲ್ಲದಲ್ಲಿ ದೈತ್ಯ ಗುರುಕುಲದಲ್ಲಿ ಶ್ರೀಹರಿಯ ಉಪಾಸನೆ ಮಾಡಿದರು. ಅಲ್ಲಿರುವ ದೈತ್ಯ ಬಾಲಕರ ಮನಃಪರಿವರ್ತನೆ ಮಾಡಿದ್ದು, ಸಜ್ಜನರ ಸಂಗದಿಂದ ಸಿಗಬಹುದಾದ ಫಲಕ್ಕೆ ನಮ್ಮ ಮುಂದೆ ಇರುವ ಉತ್ತಮ ಉದಾಹರಣೆ. ಅಲ್ಲಿನ ದೈತ್ಯಬಾಲಕರೆಲ್ಲ ವಿಷ್ಣುಭಕ್ತರಾಗಿ ಹರಿ ಭಜನೆ ಮಾಡಿದ್ದು ಸತ್ಸಂಗದ ಫಲವೇ ಸರಿ. ಎಲ್ಲ ತರಹದ ಜನರು ಗುಂಪಿನಲ್ಲಿ ಇದ್ದರೂ, ಒಬ್ಬ ಉತ್ತಮ ವ್ಯಕ್ತಿ ತಮ್ಮ ಉತ್ತಮ ನಡುವಳಿಕೆ, ಕ್ರಿಯೆ, ಭಕ್ತಿ, ದೇವರ ಮೇಲಿನ ಅಚಲ ನಂಬಿಕೆಯಿಂದ ದೇವರ ಆರಾಧನೆ ಮಾಡಿದರೆ ಗುಂಪಿನ ಎಲ್ಲರ ಮೇಲೂ ಅದರ ಪ್ರಭಾವ ಬೀರುತ್ತದೆ.
ಪ್ರಹ್ಲಾದರಾಜರೇ ತಮ್ಮ ಮುಂದಿನ ಅವತಾರದಲ್ಲಿ ವ್ಯಾಸರಾಜರಾಗಿ ಜನಿಸುತ್ತಾರೆ. ಕನಕ ಪುರಂದರರಿಗೆ ದಾಸ ದೀಕ್ಷೆ ನೀಡಿ ದೇವರ ಮಹಿಮೆ ಸಾರುವ ಪದ್ಯಗಳನ್ನು ಕನ್ನಡದಲ್ಲಿ ಬರೆದು, ಬರೆಯಲು ಪ್ರೇರೇಪಿಸಿ, ಹಾಡಿ, ನೃತ್ಯಮಾಡಿ ಶ್ರೀಹರಿಯನ್ನು ಒಲಿಸಿಕೊಳ್ಳುವ ಮಾರ್ಗವನ್ನು ತೋರಿಸಿಕೊಟ್ಟರು. ಅಂದಿ ನಿಂದ ಪುರಂದರ ಕನಕರು ಮುಂದೆ ಮುಂತಾದ ಹರಿದಾಸರು ಆ ಪರಂಪರೆಯನ್ನು ಮುಂದುವರಿಸಿ ಕೀರ್ತನೆಗಳನ್ನು ರಚಿಸಿ ಸಂಕೀರ್ತನೆಯ ಮಾರ್ಗವನ್ನು ತೋರಿಸಿಕೊಟ್ಟರು. ಪ್ರಹ್ಲಾದರಾಜರು ಮುಂದೆ ರಾಘವೇಂದ್ರ ಸ್ವಾಮಿಗಳಾಗಿ ಅವತರಿಸಿ ಜಾತಿ, ಕುಲ, ಗೋತ್ರ, ಮುಖ್ಯವಲ್ಲ, ಸರ್ವರೂ ಸಜ್ಜನರ ಸಹವಾಸದಲ್ಲಿ ದೇವರನ್ನು ಆರಾಧಿಸುವುದು ಮುಖ್ಯ ಎಂದು ಸಾರಿದರು. ಭಕ್ತಿಯೊಂದೇ ಮುಕ್ತಿಗೆ ಮಾರ್ಗ ಎಂದು ತೋರಿಸಿಕೊಟ್ಟು ಇಂದಿಗೂ ಸಜ್ಜನರ ಜೊತೆ ಮಂತ್ರಾಲಯಕ್ಕೆ ಬರುವ ಸರ್ವರನ್ನು ಅವರ ಅಭೀಷ್ಟೆಗಳನ್ನು ಈಡೇರಿಸುತ್ತ, ಅನುಗ್ರಹಿಸುತ್ತ ಸಲುಹುತ್ತಿದ್ದಾರೆ.

Exit mobile version