ಹುಬ್ಬಳ್ಳಿ: ಅಲ್ಪಸಂಖ್ಯಾತರ ಕಲ್ಯಾಣ, ವಕ್ಫ್ ಮತ್ತು ವಸತಿ ಸಚಿವ ಜಮೀರ್ ಅಹ್ಮದ್ ಖಾನ್ ಅವರು `ವಕ್ಫ್ ಅದಾಲತ್’ ಮಾಡಿ ದೇಶ ದ್ರೋಹ ಕೆಲಸ ಮಾಡಿದ್ದಾರೆ. ಹೀಗಾಗಿ, ಅವರನ್ನು ತಕ್ಷಣ ಗಲ್ಲಿಗೇರಿಸಬೇಕು ಎಂದು ಶ್ರೀರಾಮ ಸೇನೆ ಸಂಸ್ಥಾಪಕ ಅಧ್ಯಕ್ಷ ಪ್ರಮೋದ ಮುತಾಲಿಕ್ ಒತ್ತಾಯಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರೈತರ ಜಮೀನು, ದೇವಸ್ಥಾನ, ಮನೆ, ಮಠ ಹಾಗೂ ಗರಡಿ ಮನೆ ಆಸ್ತಿಗಳನ್ನು ವಕ್ಫ್ ಬೋರ್ಡ್ ಪಡೆಯುತ್ತಿರುವುದು ಖಂಡನೀಯ. ಇದು ಗಂಭೀರವಾದ ವಿಷಯವಾಗಿದ್ದು, ದೇಶದಲ್ಲಿ ವೈರಸ್‌ನಂತೆ ಹರಡುತ್ತಿದೆ ಎಂದು ಆತಂಕ ವ್ಯಕ್ತಪಡಿಸಿದರು.
ಸಚಿವ ಜಮೀರ್ ಅಹ್ಮದ್ ಖಾನ್ ಹೇಳಿದಂತೆ ಕೆಲವು ಅಧಿಕಾರಿಗಳು ರೈತರ ಪಹಣಿಯಲ್ಲಿ, ಮಠ, ಸಾರ್ವಜನಿಕರ ಆಸ್ತಿಗಳ ಖಾತೆಗಳಲ್ಲಿ ವಕ್ಫ್ ಹೆಸರು ಸೇರ್ಪಡೆ ಮಾಡುತ್ತಿದ್ದಾರೆ. ವಿಶೇಷವಾಗಿ ಮುಸ್ಲಿಂ ಸಮುದಾಯಕ್ಕೆ ಸೇರಿದ ಅಧಿಕಾರಿ ವರ್ಗ ಇಂತಹ ಕೃತ್ಯ ಹೆಚ್ಚು ನಡೆದಿರುವ ಅನುಮಾನ ಇದೆ. ಹೀಗಾಗಿ, ಸಂಪೂರ್ಣ ತನಿಖೆ ನಡೆಸಬೇಕು. ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.