ಸಚಿವ ಖರ್ಗೆ ತವರು ಕ್ಷೇತ್ರದಲ್ಲಿ ಅಕ್ರಮ ಮರಳುಗಾರಿಕೆ ಆರೋಪ

0
28

ವಿಜಯೇಂದ್ರ ಸ್ಥಳ ವೀಕ್ಷಣೆಗೆ ಕಾಂಗ್ರೆಸ್ ಕಾರ್ಯಕರ್ತರ ಅಡ್ಡಿ

ಕಲಬುರಗಿ : ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಅವರ ತವರು, ವಿಧಾನಸಭಾ ಕ್ಷೇತ್ರ ಚಿತ್ತಾಪುರ ತಾಲೂಕಿನ ಭಾಗೋಡಿಯಲ್ಲಿ ಅಕ್ರಮ ಮರಳುಗಾರಿಕೆ ದಂಧೆ ನಡೆಯುತ್ತಿರುವ ಆರೋಪದ ಹಿನ್ನಲೆ ಶುಕ್ರವಾರ ಬೆಳಗ್ಗೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಮತ್ತು ಅವರ ತಂಡ ಸ್ಥಳ ವೀಕ್ಷಣೆಗೆ ಹೋದ ವೇಳೆ ಕಾಂಗ್ರೆಸ್ ಕಾರ್ಯಕರ್ತರು ಅಡ್ಡಿ ಪಡಿಸಿ ಧಿಕ್ಕಾರ ಕೂಗಿದ ತಕ್ಷಣ ತಂಡ ಅಲ್ಲಿಂದ ಕಾಲ್ಕಿತ್ತಿರುವ ಪ್ರಸಂಗ ನಡೆಯಿತು.
ವಿಧಾನ ಪರಿಷತ್ ಪ್ರತಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ, ಮುಖ್ಯ ಸಚೇತಕ ಎನ್.ರವಿಕುಮಾರ್, ಶಾಸಕ ಬಸವರಾಜ ಮತ್ತಿಮುಡ್, ಮಾಜಿ ಶಾಸಕ ರಾಜಕುಮಾರ್ ಪಾಟೀಲ ತೇಲ್ಕೂರ್, ಬಿಜೆಪಿ ಜಿಲ್ಲಾಧ್ಯಕ್ಷ ಅಶೋಕ ಬಗಲಿ, ತಾಲೂಕು ಅಧ್ಯಕ್ಷ ರವೀಂದ್ರ ಸಜ್ಜನಶೆಟ್ಟಿ, ಅವ್ವಣ್ಣ ಮ್ಯಾಕೇರಿ ಇತರರೊಂದಿಗೆ ಬೆಳಗ್ಗೆ ೯ ಗಂಟೆಗೆ ಚಿತ್ತಾಪುರ ತಾಲೂಕಿನ ಗುಂಡಗುರ್ತಿ ಮೂಲಕ ಬೆಳಗುಂಪಾ, ಭಾಗೋಡಿ ರಸ್ತೆಯಲ್ಲಿ ನಡೆಯುತ್ತಿದ್ದ ಮರಳುಗಾರಿಕೆ ವಿಕ್ಷೀಸಿದ ಬಿ.ವೈ.ವಿಜಯೇಂದ್ರ ಭಾಗೋಡಿ ಗ್ರಾಮದ ಹತ್ತಿರದ ಕಾಗಿಣಾ ನದಿಯ ಸೇತುವೆಯ ಮೇಲೆ ಮುಖಂಡರಿಂದ ಮಾಹಿತಿ ಪಡೆಯುತ್ತಿರುವ ಸಂದರ್ಭದಲ್ಲಿ ಕಾಂಗ್ರೆಸ್ ಮುಖಂಡರು, ಕಾರ್ಯಕರ್ತರು ಬಿಜೆಪಿ ಮತ್ತು ವಿಜಯೇಂದ್ರ ವಿರುದ್ಧ ಧಿಕ್ಕಾರ ಕೂಗಿ ಸಚಿವ ಪ್ರಿಯಾಂಕ್ ಖರ್ಗೆ ಪರ ಜಯಘೋಷ ಹಾಕಿದಾಗ ಮುಜುಗರಕ್ಕೆ ಒಳಗಾದರು. ಆಗ ವಿಜಯೇಂದ್ರ ಅವರ ತಂಡ ಅಲ್ಲಿಂದ ಕಾಲ್ಕಿತ್ತರು.ಈ ಸಂದರ್ಭದಲ್ಲಿ ಬಸವರಾಜ ಬೆಣ್ಣೂರಕರ್, ವಿಜಯಕುಮಾರ್ ಕಂಠಿ, ಸುರೇಶ್ ರಾಠೋಡ, ತಮ್ಮಣ್ಣ ಡಿಗ್ಗಿ, ಸಾಬಣ್ಣ ನಾಲವಾರ, ದೇವರಾಜ್ ಬೆಣ್ಣೂರ, ಗುಂಡು ಮತ್ತಿಮುಡ್, ದಶರಥ ದೊಡ್ಡಮನಿ, ನಾಗರಾಜ ಹೂಗಾರ ಸೇರಿದಂತೆ ಅನೇಕರು ಇದ್ದರು.

ಮೃತ ಕುಟುಂಬಕ್ಕೆ ಭೇಟಿ ಇಲ್ಲ: ವಿಜಯೇಂದ್ರ ಹಾಗೂ ಅವರ ತಂಡ ಬೆಳಗ್ಗೆ ಅಕ್ರಮ ಮರಳುಗಾರಿಕೆ ಸ್ಥಳ ವೀಕ್ಷಿಸಿ ಬಳಿಕ ಮರಳುಗಾರಿಕೆ ಹೊಂಡದಲ್ಲಿ ಬಿದ್ದು ಮೃತಪಟ್ಟ ಕುರಿಗಾಹಿ ಶ್ರೀಧರ ಮನೆಗೆ ಭೇಟಿ ನೀಡಿ ಸಾಂತ್ವನ ಹೇಳಲಾಗುತ್ತಿದೆ ಎಂದು ಹೇಳಲಾಗಿತ್ತು. ತಂಡ ಕೇವಲ ಭಾಗೋಡಿ ಗ್ರಾಮದ ಹತ್ತಿರದ ಕಾಗಿಣಾ ನದಿಯ ಸೇತುವೆ ಮೇಲೆ ಹೋಗಿ ಅಲ್ಲಿನ ಮುಖಂಡರಿಂದ ಮಾಹಿತಿ ಪಡೆದರು ಹೊರತು ಅಕ್ರಮ ಮರಳುಗಾರಿಕೆ ಸ್ಥಳ ವೀಕ್ಷಣೆಯೂ ಮಾಡಿಲ್ಲ ಮತ್ತು ಮೃತಪಟ್ಟ ಯುವಕನ ಮನೆಗೂ ಭೇಟಿ ನೀಡದೆ ಕಾಂಗ್ರೆಸ್ ಸರ್ಕಾರದ ವಿರುದ್ಧ ಜನಾಕ್ರೋಶ ಯಾತ್ರೆ ನೆಪಮಾಡಿಕೊಂಡು ತರಾತುರಿಯಲ್ಲಿ ಕಲಬುರಗಿಗೆ ಮರಳಿ ಬಂತು. ಕಾಂಗ್ರೆಸ್ ಕಾರ್ಯಕರ್ತರ ಧಿಕ್ಕಾರ ಘೋಷಣೆಯಿಂದ ಮುಜುಗರಕ್ಕೊಳಗಾದ ತಂಡ ವಾಪಸ್ ಹೋಗಿದೆ ಎಂದು ಆರೋಪ ಕೇಳಿ ಬಂತು.

Previous articleಭಗವದ್ಗೀತೆ, ನಾಟ್ಯಶಾಸ್ತ್ರ ಯುನೆಸ್ಕೋದ ವಿಶ್ವ ಸ್ಮರಣೆ ದಾಖಲೆಯಲ್ಲಿ ಸೇರ್ಪಡೆ
Next articleಹಳ್ಳದ ತಡೆಗೋಡೆ ಪಿಕಪ್ ವಾಹನ ಡಿಕ್ಕಿ ನಾಲ್ವರ ಸಾವು