ಬೆಂಗಳೂರು: ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸಿದ್ದ ಕಾಂಗ್ರೆಸ್ ಅಭ್ಯರ್ಥಿಗಳಿಗೆ ಸ್ವಕ್ಷೇತ್ರದಲ್ಲಿ ಮುನ್ನಡೆ ಕೊಡಿಸಲು ವಿಫಲವಾದ ಹಾಗೂ ಅಭ್ಯರ್ಥಿಗಳು ಸೋತಿರುವ ಹೊಣೆಹೊತ್ತು ಸಚಿವರು ರಾಜೀನಾಮೆ ಕೊಡಬೇಕು ಎಂಬ ಶಾಸಕರ ಆಗ್ರಹ ಕೈ ಪಾಳೆಯದಲ್ಲಿ ಕೋಲಾಹಲ ಎಬ್ಬಿಸಿದೆ. ಇದರ ಗಂಭೀರತೆ ಅರಿತ ಪಕ್ಷಾಧ್ಯಕ್ಷರೂ ಆಗಿರುವ ಡಿಸಿಎಂ ಡಿ.ಕೆ.ಶಿವಕುಮಾರ್, ಶಾಸಕರು ಬಾಯಿ ಮುಚ್ಚಿಕೊಂಡು ಇದ್ದರೆ ಒಳ್ಳೆಯದು ಎಂಬ ಕಠಿಣ ಎಚ್ಚರಿಕೆ ರವಾನಿಸಿದ್ದಾರೆ.
ರಾಜ್ಯದಲ್ಲಿ ೧೪ ರಿಂದ ೧೫ ಸ್ಥಾನ ಗೆಲ್ಲುವ ಭಾರಿ ವಿಶ್ವಾಸದಲ್ಲಿದ್ದ ಆಡಳಿತಪಕ್ಷ ಎರಡಂಕಿ ತಲಪುಲು ವಿಫವಾಗಿರುವುದು ಖುದ್ದು ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ.ಶಿವಕುಮಾರ್ ಅವರನ್ನೇ ವಿಚಲಿತರನ್ನಾಗಿಸಿದೆ. ಗ್ಯಾರಂಟಿ ನಡುವೆಯೂ ಪಕ್ಷಕ್ಕೆ ಫಲಿತಾಂಶ ಕೈಕೊಟ್ಟಿರುವ ಬಗ್ಗೆ ಹೈಕಮಾಂಡ್ ಕೂಡಾ ಗರಂ ಆಗಿದೆ. ಏಕೆ ನಿರೀಕ್ಷಿತ ರಿಸಲ್ಟ್ ಬರಲಿಲ್ಲ. ಜವಾಬ್ದಾರಿ ಹೊತ್ತಿದ್ದ ಸಚಿವರ ಕ್ಷೇತ್ರಗಳಲ್ಲೇ ಪಕ್ಷಕ್ಕೆ ಸೋಲಾಗಿದೆ. ಇದೆಲ್ಲದರ ಬಗ್ಗೆ ಪರಾಮರ್ಶೆ ನಡೆಸಿ ವರದಿ ನೀಡುವಂತೆ ವರಿಷ್ಠರು ಸೂಚನೆ ನೀಡಿದ ಬೆನ್ನಲ್ಲೇ ಇದೀಗ ಅಭಿಪ್ರಾಯ ಸಂಗ್ರಹ ಪ್ರಕ್ರಿಯೆಗೆ ಚಾಲನೆ ಸಿಕ್ಕಿದೆ.
ಗೃಹಕಚೇರಿ ಕೃಷ್ಣಾದಲ್ಲಿ ಸೋಮವಾರ ಸಿಎಂ,ಡಿಸಿಎಂ ಬೆಂಗಳೂರು ವ್ಯಾಪ್ತಿಯ ಕ್ಷೇತ್ರಗಳ ಸೋಲಿನ ಆತ್ಮಾವಲೋಕನ ನಡೆಸಿದ್ದಾರೆ. ಕನಿಷ್ಠ ಎರಡು ಕ್ಷೇತ್ರ ಗೆಲ್ಲುವ ನಿರೀಕ್ಷೆ ಇತ್ತಾದರೂ ಏಕೆ ಸಾಧ್ಯವಾಗಲಿಲ್ಲ ಎಂಬ ಬಗ್ಗೆ ಸಚಿವರಾದ ರಾಮಲಿಂಗಾರೆಡ್ಡಿ, ಕೆ.ಜೆ.ಜಾರ್ಜ್, ಜಮೀರ್ ಅಹ್ಮದ್‌ಖಾನ್, ಶಾಸಕರಾದ ಯು.ಬಿ.ವೆಂಕಟೇಶ್, ಎನ್.ಎ.ಹ್ಯಾರಿಸ್ ಮತ್ತಿತರೊಂದಿಗೆ ಚರ್ಚಿಸಿ ಅಭಿಪ್ರಾಯ ಪಡೆಯಲಾಗಿದೆ. ಗ್ಯಾರಂಟಿ ಯೋಜನೆಗಳು ಅಂದುಕೊಂಡಂತೆ ಕೈ ಹಿಡಿಯದಿರುವ ಬಗ್ಗೆಯೂ ಪ್ರಸ್ತಾಪವಾಗಿದೆ. ಇದೇ ರೀತಿಯಲ್ಲಿ ಎಲ್ಲ ಕ್ಷೇತ್ರಗಳ ನಾಯಕರೊಂದಿಗೆ ಸಮಾಲೋಚನೆ ನಡೆಯಲಿದೆ.
ಪಕ್ಷದ ಸೋಲಿಗೆ ಕಾರಣ ತಿಳಿಯುವ ಮತ್ತು ಆಯಾ ಕ್ಷೇತ್ರಗಳಲ್ಲಿನ ವಸ್ತುಸ್ಥಿತಿ ಅಧ್ಯಯನ ಮಾಡಿ ಪರಾಮರ್ಶೆ ಸಮಿತಿ ವರದಿ ಸಿದ್ದಪಡಿಸಲಿದೆ. ಸಮಗ್ರವರದಿ ಕೈಸೇರಿದ ಬಳಿಕ ಸಿಎಂ, ಡಿಸಿಎಂ ಪೂರಕ ಟಿಪ್ಪಣಿಯೊಂದಿಗೆ ಹೈಕಮಾಂಡ್‌ಗೆ ರವಾನೆಯಾಗಲಿದೆ. ಪ್ರಮುಖವಾಗಿ ಅವರೇ ಸೂಚಿಸಿದ್ದ ಅಭ್ಯರ್ಥಿಗಳಿಗೆ ಟಿಕೆಟ್ ಕೊಟ್ಟಿದ್ದರೂ ಗೆಲ್ಲಿಸಿಕೊಳ್ಳಲಾಗದ ಸಚಿವರಿಗೆ ಸಂಪುಟದಿಂದ ಗೇಟ್‌ಪಾಸ್ ನೀಡುವ ಬಗ್ಗೆಯೂ ವರದಿ ತಯಾರಾಗಲಿದೆ. ಇವೆಲ್ಲವೂ ಖುದ್ದು ರಾಹುಲ್‌ಗಾಂಧಿ ಅವರ ನಿರ್ದೇಶನದಂತೆಯೇ ನಡೆಯುತ್ತಿರುವುದು ವಿಶೇಷವಾಗಿದೆ.
ತಲೆದಂಡವಾಗಲಿ ಅಂದಿದ್ಯಾರು
ಲೋಕಸಭಾ ಚುನಾವಣೆಯಲ್ಲಿ ಯಾವ ಸಚಿವರು ತಮ್ಮ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿಗೆ ಲೀಡ್ ಕಡಿಮೆ ಕೊಡಿಸಿದ್ದಾರೋ ಇಲ್ಲವೇ ಅಭ್ಯರ್ಥಿ ಸೋತಿದ್ದಾರೋ ಅಂತವರನ್ನು ಸಚಿವ ಸ್ಥಾನದಿಂದ ವಜಾಗೊಳಿಸಿ ಹೊಸಬರಿಗೆ ಅವಕಾಶ ಮಾಡಿಕೊಡಿ ಎಂದು ಚನ್ನಗಿರಿ ಶಾಸಕ ಶಿವಗಂಗಾ ಆಗ್ರಹಿಸಿದ್ದರು. ಇದು ಕೇವಲ ಒಬ್ಬ ಶಾಸಕರ ಅಭಿಪ್ರಾಯವಲ್ಲ. ಬದಲಿಗೆ ಬಹುಮಂದಿ ಶಾಸಕರ ಪರವಾದ ಧ್ವನಿ ಎನ್ನುವುದು ಕುತೂಹಲ ಮೂಡಿಸಿದೆ. ಈ ಹೇಳಿಕೆ ಹಿಂದೆ ಪಕ್ಷದ ಕೆಲವು ಪ್ರಭಾವಿಗಳ ಒತ್ತಾಸೆಯೂ ಇದೆ ಎನ್ನಲಾಗುತ್ತಿದೆ.