ಧಾರವಾಡ: ನಾಡಿನ ಸಾಕ್ಷಿಪ್ರಜ್ಞೆಯಾಗಿರುವ ಸಂಯುಕ್ತ ಕರ್ನಾಟಕ ಪತ್ರಿಕೆ ಧರ್ಮ, ಕಲೆ, ಸಾಹಿತ್ಯ, ಸಂಸ್ಕೃತಿಯ ಚೇತನ ಶಕ್ತಿಯಾಗಿ ಕಾರ್ಯನಿರ್ವಹಿಸುತ್ತಿದೆ ಎಂದು ಮಾಜಿ ಸಂಸದ ಹಾಗೂ ಚಿಂತಕ ಐ.ಜಿ. ಸನದಿ ಹೇಳಿದರು.
ಕರ್ನಾಟಕ ವಿದ್ಯಾವರ್ಧಕ ಸಂಘದ ರಾ.ಹ. ದೇಶಪಾಂಡೆ ಸಭಾಭವನದಲ್ಲಿ ಸೋಮವಾರ ನಡೆದ ಸಂಯುಕ್ತ ಕರ್ನಾಟಕ ಪತ್ರಿಕೆ ದತ್ತಿ ಉದ್ಘಾಟನೆ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದರು. ಸಂಯುಕ್ತ ಕರ್ನಾಟಕ ನಾಡಿಗೆ ನೀಡಿದ ಕೊಡುಗೆ ವಿಶಿಷ್ಟವಾದುದು. ಸ್ವಾತಂತ್ರ್ಯ ಹೋರಾಟವೇ ಇರಲಿ, ಕರ್ನಾಟಕದ ಏಕೀಕರಣ ಚಳವಳಿಯೇ ಇರಲಿ ಸಂಯುಕ್ತ ಕರ್ನಾಟಕ ಪತ್ರಿಕಾ ಧರ್ಮವನ್ನು ಸಮರ್ಥವಾಗಿ ನಿಭಾಯಿಸಿದೆ. ೯ ದಶಕಗಳ ಪಯಣದಲ್ಲಿ ಎಷ್ಟೇ ಸವಾಲುಗಳು ಎದುರಾದರೂ ಅವುಗಳನ್ನೆಲ್ಲ ದಾಟಿಕೊಂಡು ಮುನ್ನಡೆಯುತ್ತಿರುವುದು ಖುಷಿಯ ಸಂಗತಿ ಎಂದರು.
ನಮ್ಮ ಶಾಲೆಯಲ್ಲಿ ಶಿಕ್ಷಕರು ಸಂಯುಕ್ತ ಕರ್ನಾಟಕ ಪತ್ರಿಕೆಯ ಅಗ್ರ ಲೇಖನ ಓದಿಸುತ್ತಿದ್ದರು. ಇದು ಪ್ರತಿದಿನ ಪತ್ರಿಕೆ ಓದಲು ಪ್ರೇರೇಪಿಸಿತು. ಪತ್ರಿಕೆ ಬದುಕು ರೂಪಿಸಿಕೊಳ್ಳುವಲ್ಲಿ ಪ್ರಮುಖ ಪಾತ್ರ ವಹಿಸಿದೆ ಎಂದು ತಿಳಿಸಿದರು.
ಕರ್ನಾಟಕ ವಿದ್ಯಾವರ್ಧಕ ಸಂಘದಲ್ಲಿ ಸಂಯುಕ್ತ ಕರ್ನಾಟಕ ಪತ್ರಿಕೆ ದತ್ತಿ ಆರಂಭಿಸುವ ಮೂಲಕ ಹೊಸ ಪರಂಪರೆಗೆ ಚಾಲನೆ ನೀಡಿರುವುದು ಶ್ಲಾಘನೀಯ. ಪತ್ರಿಕಾ ದಿನಾಚರಣೆಯಂದು ಧರ್ಮಯೋಧರಂತೆ ಕೆಲಸ ಮಾಡುವ ಪತ್ರಕರ್ತರು ಹಾಗೂ ಪತ್ರಿಕೆಗಳ ಕೊಡುಗೆ ಸ್ಮರಿಸಿಕೊಳ್ಳಲು ಇದು ಸೂಕ್ತ ಅವಕಾಶವಾಗಿದೆ ಎಂದು ಹೇಳಿದ ಐ.ಜಿ. ಸನದಿ ಅವರು ಸಂಯುಕ್ತ ಕರ್ನಾಟಕ ದತ್ತಿಗೆ ೫೦೦೦ ರೂ. ದೇಣಿಗೆ ನೀಡಿದರು.
ದತ್ತಿ ಉದ್ಘಾಟಿಸಿದ ಲೋಕ ಶಿಕ್ಷಣ ಟ್ರಸ್ಟ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಮೋಹನ ಹೆಗಡೆ ಮಾತನಾಡಿ, ಪತ್ರಿಕೆಗಳನ್ನು ಓದುವವರ ಸಂಖ್ಯೆ ಕಡಿಮೆಯಾಗುತ್ತಿರುವ ಸಂದರ್ಭದಲ್ಲಿ ಪತ್ರಿಕೆಗಳನ್ನು ಜನರಿಗೆ ತಲುಪಿಸುವುದು ಹಾಗೂ ಡಿಜಿಟಲ್ ಮಾಧ್ಯಮದ ಸವಾಲು ಎದುರಿಸುವುದು ದುಸ್ತರವಾಗಿದ್ದರೂ ಜನರ ವಿಶ್ವಾಸ ಉಳಿಸಿಕೊಂಡು ಮುಂದೆ ಸಾಗುವ ಬದ್ಧತೆ ನಮ್ಮದಾಗಿದೆ. ಸವಾಲುಗಳ ಮಧ್ಯೆಯೇ ೯೩ ವರ್ಷಗಳಿಂದ ಸಾಹಿತ್ಯ, ಭಾಷೆ, ಕಲೆ ಕಟ್ಟಿ ಬೆಳೆಸುತ್ತಿರುವ ಪತ್ರಿಕೆ ಕೋವಿಡ್ ಸಂದರ್ಭದಲ್ಲಿಯೂ ನಿರಂತರವಾಗಿ ಪ್ರಕಟಗೊಂಡು ತನ್ನ ಧ್ಯೇಯ, ನಿಲುವು, ವಿಶ್ವಾಸಾರ್ಹತೆ ಪ್ರತಿಪಾದಿಸಿರುವುದು ಹೆಗ್ಗಳಿಕೆ ಎಂದರು.
ಕಳೆದ ೨ ದಶಕಗಳ ಹಿಂದೆ ಪತ್ರಿಕಾರಂಗ ಉದ್ಯಮವಾದ ನಂತರ ಟ್ರಿಬ್ಯೂನ್ ಹೊರತುಪಡಿಸಿದರೆ ಸಾರ್ವಜನಿಕ ಸಂಸ್ಥೆಯ ದೇಶದ ಏಕೈಕ ಪತ್ರಿಕೆಯೆಂದರೆ ಅದು ನಮ್ಮ ಸಂಯುಕ್ತ ಕರ್ನಾಟಕ. ಜನರ ಸಹಕಾರದಿಂದಾಗಿ ಲೋಕ ಶಿಕ್ಷಣ ಟ್ರಸ್ಟ್ ಸಂಯುಕ್ತ ಕರ್ನಾಟಕ ಪತ್ರಿಕೆ ಕರ್ಮವೀರ ಹಾಗೂ ಕಸ್ತೂರಿ ನಿಯತಕಾಲಿಕೆಗಳನ್ನು ನಿರಂತರ ಪ್ರಕಟಿಸುತ್ತ ಬಂದಿದೆ. ಇದಕ್ಕೆ ಧರ್ಮದರ್ಶಿಗಳು, ಆಡಳಿತ ಮಂಡಳಿ ಹಾಗೂ ಸಿಬ್ಬಂದಿಯ ಅನ್ಯೋನ್ಯ ಸೇವೆ ಕಾರಣವಾಗಿದೆ ಎಂದು ಅಭಿಪ್ರಾಯಪಟ್ಟರು.
ಕರ್ನಾಟಕ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಚಂದ್ರಕಾಂತ ಬೆಲ್ಲದ ಅಧ್ಯಕ್ಷತೆ ವಹಿಸಿದ್ದರು. ಶಂಕರ ಕುಂಬಿ ಸ್ವಾಗತಿಸಿದರು. ಡಾ. ಧನವಂತ ಹಾಜವಗೋಳ ನಿರೂಪಿಸಿದರು. ಸತೀಶ ತುರಮರಿ ವಂದಿಸಿದರು. ಕಾರ್ಯಕ್ರಮದಲ್ಲಿ ಸಂಯುಕ್ತ ಕರ್ನಾಟಕ ಪತ್ರಿಕೆ ಸ್ಥಾನಿಕ ಸಂಪಾದಕರಾದ ಷಣ್ಮುಖ ಕೋಳಿವಾಡ, ಶಂಕರ ಹಲಗತ್ತಿ, ಡಾ. ಸಂಜೀವ ಕುಲಕರ್ಣಿ, ಬಸವಪ್ರಭು ಹೊಸಕೇರಿ, ಶಿವಾನಂದ ಬಾವಿಕಟ್ಟಿ, ವೀರಣ್ಣ ವಡ್ಡೀನ, ಮಹಾದೇವ ಹೊರಟ್ಟಿ ಮೊದಲಾದವರಿದ್ದರು.