ತುಮಕೂರು: ಶಾಸ್ತ್ರೀಯ ಸಂಗೀತ ಕಲಿಕೆಯಿಂದ ವಿವಿಧ ರಂಗದ ಸಾಧನೆ ಸುಲಭವಾಗುತ್ತದೆ ಎಂದು ರಾಮಕೃಷ್ಣ ವಿವೇಕಾನಂದ ಆಶ್ರಮದ ಶ್ರೀ ವೀರೇಶಾನಂದ ಸರಸ್ವತಿ ಸ್ವಾಮೀಜಿ ಹೇಳಿದರು.
ನಗರದ ಶ್ರೀ ಅನುಗ್ರಹ ಸಂಗೀತ ಮಹಾವಿದ್ಯಾಲಯದ ಬೆಳ್ಳಿ ಮಹೋತ್ಸವದ ಅಂಗವಾಗಿ ಮಾಕಂ ಕಲ್ಯಾಣ ಮಂಟಪದಲ್ಲಿ ಹಮ್ಮಿಕೊಂಡಿದ್ದ ಶ್ರೀ ಪುರಂದರ ದಾಸರ-ಸದ್ಗುರು ಶ್ರೀ ತ್ಯಾಗರಾಜರ ಸ್ವಾಮಿಗಳ 25ನೇ ವರ್ಷದ ಆರಾಧನಾ ಮಹೋತ್ಸವದಲ್ಲಿ ವಿವಿಧ ಕ್ಷೇತ್ರದ ಗಣ್ಯರಿಗೆ ಸನ್ಮಾನಿಸಿ ಆಶೀರ್ವಚನ ನೀಡಿದರು.
ಸಂಗೀತದಿಂದ ಸಸ್ಯಗಳು ಹುಲುಸಾಗಿ ಬೆಳೆಯುತ್ತದೆ. ಮನೆ-ಮನದಲ್ಲಿ ಶಾಂತಿ ನೆಲೆಸುತ್ತದೆ. ಪುರುಷಾರ್ಥ ಸಾಧನೆ ಸರಳವಾಗುತ್ತದೆ. ದೇಶ ದೇಶಗಳ ನಡುವಿನ ಸೌಹಾರ್ದ ಸ್ಥಾಪನೆಗೂ ಸಂಗೀತ ಪೂರಕವಾಗಲಿದೆ ಎಂದರು.
ವಿವಿಧ ರಂಗದಲ್ಲಿ ಸಾಧನೆ ಮಾಡಿದವರನ್ನೂ ಶ್ರೀ ತ್ಯಾಗರಾಜರ ಆರಾಧನಾ ಸಂದರ್ಭದಲ್ಲಿ ಗೌರವಿಸುತ್ತಿರುವುದು ಈ ವಿದ್ಯಾಲಯದ ವಿಶೇಷತೆಯಾಗಿರುವುದು ಶ್ಲಾಘನೀಯ ಎಂದು ಸ್ವಾಮೀಜಿ ನುಡಿದರು.
ಬೆಳ್ಳಿಹಬ್ಬದ ಅಂಗವಾಗಿ ವಿವಿಧ ರಂಗದ ಸಾಧಕರಾದ ಕನ್ನಡ ಪ್ರಾಧ್ಯಾಪಕಿ ಡಾ. ಕೆ.ಎಸ್. ಚೈತಾಲಿ (ಸಾಹಿತ್ಯನುಗ್ರಹಶ್ರೀ), ಲೇಖಕ ಎ.ಆರ್. ರಘುರಾಮ (ಅಧ್ಯಾತ್ಮಾನುಗ್ರಹ ಶ್ರೀ), ಖ್ಯಾತ ಬಾಣಸಿಗ ಹಿರಿಯಣ್ಣ(ಪೋಷಕಾನುಗ್ರಹಶ್ರೀ) ಮತ್ತು ಪಿಟೀಲು ವಿದ್ವಾಂಸ ಪಿ.ಎಸ್. ಪ್ರಸನ್ನ ಕುಮಾರ್ ಅವರಿಗೆ (ಸಂಗೀತ ನಾದಾನುಗ್ರಹಶ್ರೀ) ವಿಶೇಷ
ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು.
ಮಾರುತಿ ಇಂಟರ್ನ್ಯಾಷನಲ್ ಶಾಲೆ ಕಾರ್ಯದರ್ಶಿ ಬಿ.ವಿ. ಶ್ರೀನಿವಾಸ್, ಗಣಿತಶಾಸ್ತ್ರ ತಜ್ಞ ಬಿ.ವಿ. ವಿದ್ಯಾಶಂಕರ, ವಿದ್ಯಾಲಯದ ಪ್ರಾಚಾರ್ಯ ವಿದ್ವಾನ್ ಶ್ರೀಕಂಠ ಭಟ್ ಹಾಜರಿದ್ದರು. ಇದೇ ಸಂದರ್ಭ ಅತಿಥಿಗಳು ‘ಗುರು ಪೂರ್ಣಿಮಾರ್ಚನಂ’ ಕೃತಿ ಬಿಡುಗಡೆ ಗೊಳಿಸಿದರು.
ಇದಕ್ಕೂ ಮುನ್ನ ಬೆಳಗ್ಗೆ 10ಕ್ಕೆ ಶ್ರೀ ತ್ಯಾಗರಾಜರ ‘ಘನರಾಗ ಪಂಚ ರತ್ನ’ ಕೃತಿಗಳ ಗೋಷ್ಠಿ ಗಾಯನ, ಶ್ರೀ ಪುರಂದರದಾಸರ ನವರತ್ನ ಮಾಲಿಕೆ ಕೃತಿಗಳ ಗಾಯನ
ವಿದ್ಯಾಲಯದ ಹಿರಿಯ, ಕಿರಿಯ ವಿದ್ಯಾರ್ಥಿಗಳಿಂದ ಸಂಗೀತ ಕಛೇರಿ ಸಂಪನ್ನಗೊಂಡಿತು.