ಶುದ್ಧ ಕುಡಿವ ನೀರಿನ ಮಾತು ಬರಿ ಲೊಳಲೊಟ್ಟೆ

0
9

ನಾವೇ ನಾಚಿಕೆ ಪಟ್ಟುಕೊಳ್ಳಬೇಕೋ? ಅಥವಾ ಈ ವ್ಯವಸ್ಥೆಯ ವಿರುದ್ಧ ಆಕ್ರೋಶಗೊಳ್ಳಬೇಕೋ ಇಲ್ಲ, ಬಂದದ್ದು ಬರಲಿ, ಹೇಗೆ ಹೋಗುತ್ತದೋ ಹಾಗೆ ಹೋಗಲಿ ಎಂಬ ನಿರ್ಲಿಪ್ತಿಯಲ್ಲಿ, ಹತಾಶೆಯಲ್ಲಿ ಬದುಕಬೇಕೋ..?
ಕಳೆದ ಆರು ದಿನಗಳಲ್ಲಿ ಕಲುಷಿತ ನೀರು ಕುಡಿದು ಹನ್ನೊಂದು ಮಕ್ಕಳು- ಮರಿ, ಮಹಿಳೆಯರು ಮೃತಪಟ್ಟಿದ್ದಾರೆ. ನೂರ ನಲವತ್ತಕ್ಕೂ ಅಧಿಕ ಜನ ಆಸ್ಪತ್ರೆಗೆ ದಾಖಲಾಗಿ, ನರಳಾಡಿ ಅಂತೂ ಬದುಕಿ ಬಂದಿದ್ದಾರೆ.
ಇವು ಕೊಪ್ಪಳ, ರಾಯಚೂರು, ಯಾದಗಿರಿ, ಬೀದರ್, ಕೋಲಾರ ಜಿಲ್ಲೆಗಳಲ್ಲಿ ಸಂಭವಿಸಿದ ಘಟನೆಗಳು. ಒಂದೊಂದೆಡೆ ಒಂದೊಂದು ಕಾರಣ. ಚರಂಡಿ ನೀರು ಕುಡಿಯುವ ನೀರಿನ ಪೈಪ್‌ನಲ್ಲಿ ಸೇರಿಕೊಂಡು, ನೀರು ಕಲುಷಿತವಾಗಿ, ಆ ನೀರನ್ನು ಜನ ಕುಡಿದು ಮೃತಪಟ್ಟರು ಎನ್ನುವುದು ಅಧಿಕಾರಗಳ ವರದಿಯಾದರೆ, ಮತ್ತೊಂದೆಡೆ ಕುಡಿಯುವ ನೀರೇ ರಾಡಿ, ಅನಿವಾರ್ಯವಾಗಿ ಬಳಸುತ್ತಿದ್ದೇವೆ, ಬಳಸಲೇಬೇಕಿದೆ ಎನ್ನುವುದು ಜನಸಾಮಾನ್ಯರ ಹತಾಶೆಯ ನುಡಿ.
ಕೋಲಾರ, ರಾಯಚೂರಿನಂತಹ ಪ್ರದೇಶದಲ್ಲಿ ಫ್ಲೋರೈಡ್ ನೀರು ಕುಡಿದು ಕರುಳು ಹುಣ್ಣಿನಿಂದ ನರಳಿ ಜನ ಮೃತಪಡುತ್ತಿದ್ದಾರೆ. ಸಾವು ಕಂಡವರ ಬಗ್ಗೆ ಲೆಕ್ಕವಿಲ್ಲ. ಮುಖ್ಯಮಂತ್ರಿಗಳು ಸಭೆ ನಡೆಸಿ, ಇನ್ನು ಇಂತಹ ಪ್ರಕರಣಗಳು ವರದಿಯಾದರೆ ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿಯನ್ನೇ ಹೊಣೆಯಾಗಿಸಿ ಅಮಾನತುಗೊಳಿಸಲಾಗುವುದು ಎಂದು ವಾರ್ನಿಂಗ್ ನೀಡಿದರು. ಪ್ರತಿ ತಾಲ್ಲೂಕಿನಲ್ಲಿ ಒಂದು ನೀರು ವ್ಯವಸ್ಥೆಯ ತಂಡವನ್ನು ಮಾಡುವಂತೆ ಗ್ರಾಮೀಣಾಭಿವೃದ್ಧಿ ಸಚಿವರು ಆದೇಶಿಸಿದರು.
ಗಡ್ಡಕ್ಕೆ ಬೆಂಕಿ ಬಿದ್ದಾಗ ಬಾವಿ ತೋಡುವ ಕ್ರಮ ಇದಾಯಿತು. ಇನ್ನೊಂದು ವಿಷಯ. ಜಿಲ್ಲಾ ಪಂಚಾಯ್ತಿ ಕಾರ್ಯನಿರ್ವಹಣಾಧಿಕಾರಿಗಳಿಗೆ ಮಾಡಿರುವ ತಾಕೀತನ ಪರಿಣಾಮವೆಂದರೆ, ಇಂತಹ ಘಟನೆ ಮರುಕಳಿಸಿದರೆ ವರದಿಯನ್ನೇ ಮಾಡದಿದ್ದರಾಯಿತಪ್ಪ… ಆಗೆಂತಹ ಕ್ರಮ…!? ಎನ್ನುವ ಪ್ರಶ್ನೆ.
ಹೌದು. ಎಪ್ಪತೈದು ವರ್ಷಗಳ ಸ್ವಾತಂತ್ರ್ಯದ ದೇಶದಲ್ಲಿ, ಜಗತ್ತಿನ ಅತಿ ದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರದಲ್ಲಿ, ಅದೂ ಕರಾವಳಿ, ಡೆಕ್ಕನ್ ಪ್ರಸ್ಥಭೂಮಿ, ಮಲೆನಾಡು, ಪಶ್ಚಿಮ ಘಟ್ಟದಂತಹ ವಿಭಿನ್ನ ಪ್ರಾಕೃತಿಕ ವೈವಿಧ್ಯ ಹೊಂದಿರುವ ಕರ್ನಾಟಕದಲ್ಲಿ ಈ ದುಸ್ಥಿತಿ. ಜನ ಶುದ್ಧ ಕುಡಿಯುವ ನೀರಿಗಾಗಿ ಹಾಹಾಕಾರ ಪಡುತ್ತಿದ್ದರೆ, ಕುಡಿಯುವ ನೀರಿನ ಮೂಲಗಳನ್ನೇ ಸ್ಪಷ್ಟಪಡಿಸಿಕೊಳ್ಳಲಾಗದ ವ್ಯವಸ್ಥೆ.
ಏನೆಲ್ಲ ಯೋಜನೆಗಳು ಬಂದವು ಕುಡಿಯುವ ನೀರಿನ ಪೂರೈಕೆಗಾಗಿ? ಎಷ್ಟೆಲ್ಲ ಇಲಾಖೆಗಳು ತೆರೆದುಕೊಂಡವು? ಹಾಗಿದ್ದೂ ಪ್ರತಿವರ್ಷ ಐವತ್ತಕ್ಕೂ ಹೆಚ್ಚು ಜನ ಕಲುಷಿತ ನೀರು ಕುಡಿದು ಮೃತಪಡುತ್ತಿದ್ದಾರೆ. ನೂರಾರು ಜನ ಫ್ಲೋರೈಡ್‌ಯುಕ್ತ ನೀರು ಬಳಸಿ ಸಾವು ಬದುಕಿನ ನಡುವೆ ಯಾತ್ರೆ ಸಾಗಿಸುತ್ತಿದ್ದಾರೆ.
ಜಲಜೀವನ ಮಿಷನ್, ಶುದ್ಧ ಕುಡಿಯುವ ನೀರಿನ ಘಟಕ, ಪ್ರತಿ ಮನೆಗೆ ನಲ್ಲಿ ನೀರು, ಇದಕ್ಕೊಂದು ಪ್ರತ್ಯೇಕ ಇಲಾಖೆ, ಗ್ರಾಮ ಪಂಚಾಯ್ತಿಯಿಂದ ಪ್ರಧಾನ ಮಂತ್ರಿ ಕಾರ್ಯಾಲಯದವರೆಗೆ ಇದಕ್ಕಾಗಿ ನೆಟ್‌ವರ್ಕ್. ಇಷ್ಟಾದರೂ ಕೇಳುವ ಪ್ರಶ್ನೆ ಏನೆಂದರೆ, ನಿಮಗೆ ಶುದ್ಧ ಕುಡಿಯುವ ನೀರು ಬಂತೇ?
ರಾಯಚೂರಿನಲ್ಲಿ ಕಳೆದ ವರ್ಷಎರಡು ದಿನದಲ್ಲಿ ಆರು ಮಂದಿ ಕಲುಷಿತ ನೀರು ಕುಡಿದು ಮೃತಪಟ್ಟಿದ್ದರು. ಜಿಲ್ಲಾ ಉಸ್ತುವಾರಿ ಮಂತ್ರಿ ತೆರಳಿ ನೀರು ಪೂರೈಕೆ ನೆಟ್‌ವರ್ಕ್ ಆರಂಭಿಸುವಂತೆ ತಾಕೀತು ಮಾಡಿ ಖಾಸಗಿ ಬೋರ್‌ವೆಲ್‌ಗಳನ್ನು ಬಾಡಿಗೆ ಪಡೆದು ಅಂತೂ ನೀರು ಪೂರೈಸಿದರು. ಅಷ್ಟೇ. ವಾರದ ನಂತರ ಜನ ಮರೆತೇ ಬಿಟ್ಟರು. ಮತ್ತೆ ಹದಿನೈದು ಇಪ್ಪತ್ತು ದಿನಕ್ಕೊಮ್ಮೆ ನೀರು ಕುಡಿಯುವ ಸ್ಥಿತಿ ಇಡೀ ತಾಲ್ಲೂಕಿನದ್ದಾಯಿತು. ಅದೇ ಜಿಲ್ಲೆಯಲ್ಲಿ ೬೮೧ ಶುದ್ಧ ಕುಡಿಯುವ ನೀರಿನ ಘಟಕಗಳು ಕೆಟ್ಟು ಕುಳಿತಿದ್ದವು. ಆ ಘಟಕಗಳಿಗೆ ನೀರಿಲ್ಲ. ನೀರಿದ್ದರೆ ಮೆಮರಿನ್ ಘಟಕ ಇಲ್ಲ. ಅದೂ ಇದ್ದರೆ, ಅದು ಕೆಲಸ ನಿರ್ವಹಿಸುತ್ತಿಲ್ಲ. ವಿದ್ಯುತ್ ಇಲ್ಲ. ಶುದ್ಧೀಕರಣ ಕೆಲಸವಾಗದೇ ವರ್ಷಗಟ್ಟಲೇ ಕಳೆದಿವೆ. ಇದರ ಪೈಪ್‌ಗಳು ಕೆಟ್ಟು ಕಲುಷಿತ ನೀರಿಗೆ ಸೇರ್ಪಡೆಗೊಳ್ಳುತ್ತಿವೆ.
ಇದ್ಯಾವುದೂ ಉತ್ಪ್ರೆಕ್ಷೆಯಲ್ಲ. ಇಂದಿಗೂ ೬೮೧ ಶುದ್ಧ ಕುಡಿಯುವ ನೀರಿನ ಘಟಕಗಳು ಹಾಗೇ ಕೆಟ್ಟು ನಿಂತಿವೆ. ಮತ್ತೆ ಈ ಸಲವೂ, ಮೊನ್ನೆ ಮೊನ್ನೆ ಇಬ್ಬರು ಮೃತಪಟ್ಟಿದ್ದಾರೆ. ಕೋಲಾರದಂತಹ ಜಿಲ್ಲೆಯಲ್ಲಿ ಫ್ಲೋರೈಡ್ ನೀರಿನ ಬದಲು, ಶುದ್ಧ ನೀರು ಕೊಡಲು ಖರ್ಚು ಮಾಡಿರುವ ಹಣ ಬಹುಶಃ ನೀರಿನಷ್ಟೇ ವ್ಯರ್ಥವಾಗಿರಬಹುದು.
ಯಾಕೆ ಹೀಗೆ? ಕಲ್ಯಾಣ ಕರ್ನಾಟಕದ ಜಿಲ್ಲೆಗಳು ನೀರು, ರಸ್ತೆ, ಧೂಳು, ಶೈಕ್ಷಣಿಕ ಸಮಸ್ಯೆ ಎಲ್ಲವುಗಳಿಂದ ತೀವ್ರವಾಗಿ ಬಾಧೆಗೆ ಒಳಗಾಗಿರುವುದು ಏಕೆ? ಮೂಲಭೂತ ಸೌಲಭ್ಯ ಇಲ್ಲದ, ಅತಿ ಹಿಂದುಳಿದ ಪ್ರದೇಶವಾದ ಕಲ್ಯಾಣ ಕರ್ನಾಟಕಕ್ಕೆ ಪ್ರತ್ಯೇಕ ಮಾನ್ಯತೆ (೩೭೧- ಜೆ) ದೊರೆತರೂ, ತನ್ಮೂಲಕ ಸಾವಿರಾರು ಕೋಟಿ ಹಣ ಈ ಪ್ರಾಂತ್ಯದ ಜಿಲ್ಲೆಗಳಿಗೆ ಬಂದರೂ ಹೊಸ ಪರಿವರ್ತನೆಯನ್ನೇನೂ ಕಾಣೆ.
ಕಲ್ಯಾಣ ಕರ್ನಾಟಕ ಅಭಿವೃದ್ಧಿ ಮಂಡಳಿಗೆ ೩೬೬೮ ಕೋಟಿ ಅನುದಾನ ವಾರ್ಷಿಕ ಬಂದಿದೆ. ಸಂಪನ್ಮೂಲ ಕ್ರೋಡೀಕರಣವೂ ಆಗುತ್ತಿದೆ. ಆದರೆ ಆ ಹಣವೆಲ್ಲ ಜನರ ಕಲ್ಯಾಣಕ್ಕಾಗಿ ವ್ಯಯವಾಗುತ್ತಿದ್ದರೆ ಬಹುಶಃ ಕರಾವಳಿ, ಮಲೆನಾಡನ್ನೂ ಕೂಡ ಈ ಜಿಲ್ಲೆಗಳು ಅಭಿವೃದ್ಧಿಯಲ್ಲಿ ಮೀರಿಸುತ್ತಿದ್ದವೇನೋ? ದುರಂತವೆಂದರೆ ಅಲ್ಲಿರುವ ಭ್ರಷ್ಟಾಚಾರ, ಅವ್ಯವಹಾರ ಬಗೆಯಲು ನಾಲ್ಕು ದಿನಗಳಿಂದ ಅಧಿಕಾರಿಗಳು ತೊಡಗಿಕೊಂಡಿದ್ದಾರೆ. ಮುಗಿಯದ ಹಗರಣ…!
ಕಲ್ಯಾಣ ಕರ್ನಾಟಕ ಅಷ್ಟೇ ಅಲ್ಲ, ಉತ್ತರ ಕರ್ನಾಟಕದ ಜನಪ್ರತಿನಿಧಿಗಳ ಬಗ್ಗೆ ಎಲ್ಲ ಜನಸಾಮಾನ್ಯರ ಹಾಗೂ ರಾಜಧಾನಿ ಜನರ ಮಾತೊಂದಿದೆ. ಅದೆಂದರೆ, ಈ ಭಾಗದ ಶಾಸಕರು, ಮಂತ್ರಿಗಳು ರಾಜಧಾನಿಯಲ್ಲಿ ಬೃಹತ್ ಬಂಗಲೆ ನಿರ್ಮಿಸಿಕೊಂಡು ಆರಾಮ ಆಗಿ ಇರುತ್ತಾರೆ. ಜನ ಮಾತ್ರ ಇವರನ್ನು ಪೂಜನೀಯ ಭಾವನೆಯಿಂದ ಆರಾಧಿಸುತ್ತಿರುತ್ತಾರೆ. ಎಷ್ಟು ಸತ್ಯವಲ್ಲವೇ? ಒಮ್ಮೆ ಶಾಸಕರಾದ ಮಹಾಪ್ರಭುಗಳಿಗೆ' ಬೆಂಗಳೂರಿನಲ್ಲಿ ಒಂದು ನಿವೇಶನ ಅಥವಾ ಮನೆ ಇಲ್ಲ ಎನ್ನುವುದನ್ನು ತೋರಿಸಿ ಎನ್ನುವ ಸವಾಲು, ಟೀಕೆ ಎಲ್ಲವೂ ಬರುತ್ತಲೇ ಇರುತ್ತವೆ. ಪ್ರಸ್ತುತವಂತೂ ಮುಂಗಾರು ದುರ್ಬಲ. ನೆಲ ಕಾದ ಕಾವಲಿ. ಈ ಸ್ಥಿತಿಯಲ್ಲಿ ಜನ ಕುಡಿಯುವ ನೀರಿಗಾಗಿ ಹಾಹಾಕಾರ ಪಡುತ್ತಿದ್ದಾರೆ. ಸಿಕ್ಕ ನೀರು ಕುಡಿದು ಆಸ್ಪತ್ರೆಗೆ ದಾಖಲಾಗುವ ದಯನೀಯ ದಾರುಣ ಸ್ಥಿತಿ ಜನರದ್ದು. ಈಗ ಎರಡು ಮಾತುಗಳು ಕೇಳಿಬರುತ್ತಿವೆ. ಕಳೆದ ವರ್ಷ ರಾಯಚೂರಿನಲ್ಲಿ ಇದೇ ರೀತಿ ಕಲುಷಿತ ನೀರು ಕುಡಿದು ಸತ್ತವರ ಕುಟುಂಬಗಳಿಗೆ ಬೊಮ್ಮಾಯಿ ಸರ್ಕಾರ ನೀಡಿದ್ದು ತಲಾ ಐದು ಲಕ್ಷ ರೂಪಾಯಿ. ಈಗ ಸಿದ್ದರಾಮಯ್ಯ ಸರ್ಕಾರ ನೀಡಿರುವುದು ಎರಡು ಲಕ್ಷ ರೂಪಾಯಿ. ಸತ್ತವರ ಜೀವ ಒಂದು ವರ್ಷದಲ್ಲಿ ಮೂರು ಲಕ್ಷದಷ್ಟು ಅಗ್ಗವಾಯಿತೇ? ಎನ್ನುವುದು. ಕಲುಷಿತ ನೀರಿನ ಸಮಸ್ಯೆ ಉಲ್ಬಣದ ಹಿನ್ನೆಲೆಯಲ್ಲಿ ಸಚಿವ ಎಚ್.ಸಿ.ಮಹದೇವಪ್ಪ ಮೈಸೂರಿನಲ್ಲಿ ಅಧಿಕಾರಿಗಳ ಸಭೆ ನಡೆಸಿ,ಕಲುಷಿತ ನೀರು ಕುಡಿದರೆ ಸುಂದರಿಯ ಮುಖವೂ ಕುರೂಪಿಯಾಗುತ್ತದೆ, ವಿಕಾರವಾಗುತ್ತದೆ’ ಎಂದು ರಾಜಾರೋಷವಾಗಿ ಘೋಷಿಸಿದ್ದರು. ತೀರ್ಪು ನೀಡಿದ್ದರು! ಕಾಳಜಿ ಎಷ್ಟು ನೋಡಿ. ಸೌಂದರ್ಯ ಮತ್ತು ನೀರಿಗೆ? ಈ ಕಾಳಜಿ ಶುದ್ಧ ಕುಡಿಯುವ ನೀರಿಗೋ, ಮಹಿಳೆಯ ಸೌಂದರ್ಯಕ್ಕೋ?
ರಾಜ್ಯದಲ್ಲಿ ಎಪ್ಪತೈದು ಸಾವಿರಕ್ಕೂ ಅಧಿಕ ಶುದ್ಧ ಕುಡಿಯುವ ನೀರಿನ ಘಟಕಗಳ ಸ್ಥಿತಿಗತಿ ಹೇಗಿದೆ ಎಂದು ಒಮ್ಮೆ ಪರಿಶೀಲಿಸಿದರೆ ತುಂಬ ಕಹಿ ಸತ್ಯಕ್ಕೆ ನಾವು ಮುಖಾಮುಖಿಯಾಗುತ್ತೇವೆ. ಶುದ್ಧ ಕುಡಿಯುವ ನೀರಿನ ಘಟಕಗಳಲ್ಲಿ ದೊಡ್ಡ ಹಗರಣಗಳೇ ಈ ಹಿಂದೆ ನಡೆದಿದ್ದವು. ತನಿಖೆಗಳು ಆದವು. ತಪ್ಪಿತಸ್ಥರು ಮಾತ್ರ ಸಿಕ್ಕಿಲ್ಲ. ಶಿಕ್ಷೆಯೂ ಆಗಿಲ್ಲ. ಬದಲಾಗಿ ಮತ್ತಷ್ಟು ಘಟಕಗಳು ತಲೆ ಎತ್ತಿ ಅವೂ ಸ್ಥಗಿತಗೊಂಡಿವೆ. ಇಲ್ಲಿ ನೀರು ಕೂಡ ಭ್ರಷ್ಟರ ಜೇಬು ತುಂಬಿಸುವ ಸಂಪನ್ಮೂಲ ಅಲ್ಲವೇ !?

Previous articleಆದಿತ್ಯನಾಮಕ ಹರಿಯೇ ಪ್ರಕೃತಿ ನಿಯಾಮಕ
Next articleಗಂಟಲಲ್ಲಿ ಅನ್ನ ಸಿಲುಕಿ 14 ವರ್ಷದ ಬಾಲಕ ಸಾವು