ಡಾ. ಮನಮೋಹನ್ ಸಿಂಗ್ ಅಪ್ರತಿಮ ಆರ್ಥಿಕ ಚಿಂತಕ. ಮಾತು ಕಡಿಮೆ ಕೆಲಸ ಹೆಚ್ಚು. ಅವರ ಉದಾರೀಕರಣದ ಕಲ್ಪನೆ ಪಿವಿ ನರಸಿಂಹರಾವ್ ಮತ್ತು ಅಹ್ಲುವಾಲಿಯಾ ಅವರಿಗೆ ಮಾತ್ರ ಅರ್ಥವಾಗುತ್ತಿತ್ತು. ಹೀಗಾಗಿ ಉಳಿದವರೆಲ್ಲ ಅವರ ವಿಚಾರಧಾರೆಯನ್ನು ಒಪ್ಪಿರಲಿಲ್ಲ. ಆದರೂ ಅವರಿಗೆ ಜಗತ್ತು ಯಾವ ಕಡೆ ಹೋಗುತ್ತಿದೆ ಎಂಬುದು ತಿಳಿದಿತ್ತು. ಹಲವು ವಿರೋಧಗಳ ನಡುವೆ ಉದಾರೀಕರಣ-ಖಾಸಗೀಕರಣ-ಜಾಗತೀಕರಣಕ್ಕೆ ಕೈ ಹಾಕಿದರು. ಅದರ ಫಲವನ್ನು ಈಗ ಕಾಣುತ್ತಿದ್ದೇವೆ. ಅಂದು ಅವರು ನೆಟ್ಟ ಆರ್ಥಿಕ ಬೀಜ ಇಂದು ಫಲಕೊಡುತ್ತಿದೆ. ಮನಮೋಹನ್‌ಸಿಂಗ್ ಹುಟ್ಟಿನಿಂದ ರಾಜಕಾರಣಿಯಲ್ಲ. ಅವರು ಮೂಲತಃ ಆರ್ಥಿಕ ತಜ್ಞರು. ಆಕ್ಸ್‌ಫರ್ಡ್ ವಿವಿಯಲ್ಲಿ ಡಾಕ್ಟರೇಟ್ ಪಡೆದವರು. ಅರ್ಥಶಾಸ್ತ್ರದಲ್ಲಿ ಗ್ರಂಥಗಳನ್ನು ಬರೆದವರು. ದೆಹಲಿ, ಪಂಜಾಬ್ ವಿವಿಯಲ್ಲಿ ಅಧ್ಯಾಪಕರಾಗಿ ಕೆಲಸ ಮಾಡಿದವರು. ಜಿನೀವಾದಲ್ಲಿ ದಕ್ಷಿಣ ಆಯೋಗದ ಮಹಾ ಕಾರ್ಯದರ್ಶಿಯಾಗಿ ದುಡಿದವರು. ರಿಸರ್ವ್ ಬ್ಯಾಂಕ್ ಗೌರ‍್ನರ್ ಆಗಿದ್ದವರು, ಬ್ಯಾಂಕ್‌ಆಫ್ ಇಂಡಿಯಾ ನಿರ್ದೇಶಕರು. ರಾಜಕೀಯಕ್ಕೆ ಬರುವ ಮೊದಲೇ ದೇಶದ ಆರ್ಥಿಕ ಪರಿಸ್ಥಿತಿಯ ಬಗ್ಗೆ ಅಧ್ಯಯನ ನಡೆಸಿದವರು. ಹೀಗಾಗಿ ಅವರಿಗೆ ಪಿ.ವಿ. ನರಸಿಂಹರಾವ್ ಸರ್ಕಾರದಲ್ಲಿ ಹಣಕಾಸು ಸಚಿವರಾಗಿ ಕೆಲಸ ಮಾಡುವುದು ಕಷ್ಟವಾಗಲಿಲ್ಲ. ಆ ವೇಳೆಗೆ ವಿದೇಶಗಳಲ್ಲಿ ಹೊಸ ಆರ್ಥಿಕ ನೀತಿ ರೂಪುಗೊಳ್ಳುತ್ತಿತ್ತು. ಅದನ್ನು ಅರ್ಥಮಾಡಿಕೊಳ್ಳುವ ಶಕ್ತಿ ಮನಮೋಹನ್ ಸಿಂಗ್ ಮತ್ತು ಸ್ನೇಹಿತ ಅಹ್ಲುವಾಲಿಯಾ ಅವರಿಗಿತ್ತು. ಪಿ.ವಿ. ನರಸಿಂಹರಾವ್ ಅವರಿಗೆ ಮನಮೋಹನ್‌ಸಿಂಗ್ ಸಾಮರ್ಥ್ಯ ಗೊತ್ತಿತ್ತು. ಅದರಿಂದಲೇ ಅವರು ಪೂರ್ಣ ಸ್ವಾತಂತ್ರ್ಯ ನೀಡಿದ್ದರು. ಆ ಕಾಲದಲ್ಲಿ ಮನಮೋಹನ್‌ಸಿಂಗ್ ಮತ್ತು ಅಹ್ಲುವಾಲಿಯಾ ಬಳಸುತ್ತಿದ್ದ ಪರಿಭಾಷೆ ಎಲ್ಲರಿಗೂ ಹೊಸತು. ವಾಣಿಜ್ಯ ಪತ್ರಿಕೆಯ ಪತ್ರಕರ್ತರಿಗೇ ಅರ್ಥವಾಗುತ್ತಿರಲಿಲ್ಲ. ಗ್ಯಾಟ್ ಒಪ್ಪಂದದ ವಿರುದ್ಧ ಮಾತ್ರ ಪ್ರತಿಭಟನೆಗಳು ಕೇಳಿ ಬರುತ್ತಿದ್ದವು. ಅಂಥ ಸಂದರ್ಭದಲ್ಲಿ ಸದ್ದಿಲ್ಲದೆ ಆರ್ಥಿಕ ಕ್ರಾಂತಿ ತಂದವರು ಮನಮೋಹನ್‌ಸಿಂಗ್. ಅವರಿಗೆ ಜನರ ಮನಸ್ಸು ಗೆಲ್ಲುವ ಶಕ್ತಿ ಇರಲಿಲ್ಲ. ಅದರ ಕಡೆ ಅವರ ಗಮನವೂ ಇರಲಿಲ್ಲ. ಏಕೆಂದರೆ ಜನಪ್ರಿಯತೆಯ ಬಗ್ಗೆ ಚಿಂತಿಸಿದವರಲ್ಲ. ನಾನು ಮಾತನಾಡಬಾರದು, ನನ್ನ ಕೆಲಸ ಮಾತನಾಡಬೇಕು ಎಂಬುದು ಅವರ ಧೋರಣೆ. ಹೀಗಾಗಿ ಅವರು ಕೆಲವು ಅಪವಾದಗಳಿಗೆ ಗುರಿಯಾಗಬೇಕಾಯಿತು. ಆದರೂ ತಮ್ಮ ಆರ್ಥಿಕ ಚಿಂತನೆಯನ್ನು ಬಿಟ್ಟುಕೊಟ್ಟವರಲ್ಲ. ಅವರ ಕಾರ್ಯಕ್ರಮಗಳೆಲ್ಲ ಮೂಲತಃ ಆರ್ಥಿಕ ಚಿಂತನೆಗಳಿಗೆ ಸೇರಿದ್ದವು. ನರೇಗಾ ಯೋಜನೆ, ಶಿಕ್ಷಣದ ಹಕ್ಕು, ಜಿಎಸ್‌ಟಿಗೆ ಬೀಜಾಂಕುರ, ಆಧಾರ್ ಕಾರ್ಡ್ ಬಗ್ಗೆ ಕಲ್ಪನೆ ಸೇರಿದಂತೆ ಎಲ್ಲವೂ ಪರೋಕ್ಷವಾಗಿ ಆರ್ಥಿಕ ರಂಗಕ್ಕೆ ಸೇರಿದವು. ಅವರು ಲೋಕಸಭೆಗೆ ಆಯ್ಕೆಯಾಗಿ ಬರುವುದು ಕಷ್ಟವಿತ್ತು. ಅದಕ್ಕೆ ಅವರು ರಾಜ್ಯಸಭೆಯಲ್ಲೇ ಬಹುತೇಕ ವರ್ಷ ಸದಸ್ಯರಾಗಿದ್ದರು. ಅಣುಶಕ್ತಿಯನ್ನು ನಾಗರಿಕ ಉದ್ದೇಶಗಳಿಗೆ ಬಳಸಿಕೊಳ್ಳಲು ಅಮೆರಿಕ ಜತೆ ಅವರು ಮಾಡಿಕೊಂಡ ಒಪ್ಪಂದ ಜಾರಿತ್ರಿಕವಾಗಿ ಪ್ರಮುಖ. ಹಿಂದೆ ಲೈಸನ್ಸ್ ರಾಜ್ ತಾಂಡವವಾಡುತ್ತಿತ್ತು. ಒಂದು ಕೈಗಾರಿಕೆ ತೆರೆಯಬೇಕು ಎಂದರೆ ಲೈಸನ್ಸ್ ಪಡೆಯುವುದೇ ಕಷ್ಟವಾಗಿತ್ತು. ಅದೆಲ್ಲವನ್ನೂ ಒಂದೇ ಸಾರಿಸಿ ಗುಡಿಸಿ ಹಾಕಿಬಿಟ್ಟರು. ಖಾಸಗಿಯವರು ಸುಲಭವಾಗಿ ಕೈಗಾರಿಕೆ, ಉದ್ಯಮ ಕೈಗೊಳ್ಳಲು ಅವಕಾಶ ಮಾಡಿಕೊಟ್ಟರು. ಇದಕ್ಕೆ ಟೀಕೆಟಿಪ್ಪಣಿಗಳು ಕೇಳಿ ಬಂದರೂ ಅವರು ಕಿವಿಗೊಡಲಿಲ್ಲ. ದೇಶದ ಜಿಡಿಪಿ ಶೇ. ೮.೫ ಇರುವಂತೆ ನೋಡಿಕೊಂಡರು. ಎಲ್ಲೂ ಪ್ರಚಾರಕ್ಕೆ ಹೋಗಲಿಲ್ಲ. ಆರ್ಥಿಕ ಚಿಂತನೆ ಅವರಿಗೆ ಉಸಿರಾಡುವಷ್ಟು ಸಲೀಸಾಗಿತ್ತು. ಇದರಿಂದ ಪಿವಿ ನರಸಿಂಹರಾವ್ ಸರ್ಕಾರಕ್ಕೆ ಮೆಚ್ಚುಗೆ ಬರಲು ಕಾರಣವಾಯಿತು. ಮನಮೋಹನ್ ಸಿಂಗ್ ಎಲೆಮರೆಕಾಯಾಗೇ ಇರಲು ಬಯಸಿದರು. ಪ್ರಧಾನಿ ಹುದ್ದೆ ಲಭಿಸಿದಾಗಲೂ ಅವರು ಆರ್ಥಿಕ ಕಾರ್ಯಕ್ರಮಗಳನ್ನು ಕಡೆಗಣಿಸಲಿಲ್ಲ. ಇದರಿಂದ ಅಂತಾರಾಷ್ಟ್ರೀಯ ಮಟ್ಟದಲ್ಲಿ ಅವರ ವರ್ಚಸ್ಸು ಬೆಳೆಯಿತು. ಡಾ. ವೆಂಕಟಗಿರಿಗೌಡ ಅವರ ಆಪ್ತರು. ಅವರು ಬಿಜೆಪಿ ಸಂಸದರಾಗಿದ್ದರೂ ಹೊಸ ಆರ್ಥಿಕ ನೀತಿ ಜಾರಿಗೆ ಬರಲು ಬೇಕಾದ ತಾತ್ವಿಕ ತಳಹದಿ ರೂಪಿಸಿಕೊಟ್ಟವರು. ರಾಜಕಾರಣದಲ್ಲಿ ಅಜಾತಶತ್ರುವಾಗುವುದು ಕಷ್ಟ. ಆದರೆ ಮನಮೋಹನ್ ಸಿಂಗ್ ಎಂದೂ ಪ್ರತಿಪಕ್ಷದವರನ್ನು ವೈಯಕ್ತಿಕವಾಗಿ ಟೀಕಿಸಿದವರಲ್ಲ. ಅವರ ಮಾತುಗಳೆಲ್ಲ ಸಮಸ್ಯೆಗಳಿಗೆ ಮಾತ್ರ ಸೀಮಿತವಾಗಿತ್ತು. ಹೀಗಾಗಿ ಸಂಸತ್ತಿನಲ್ಲಿ ಪ್ರತಿಪಕ್ಷದವರೂ ಮನಮೋಹನ್ ಸಿಂಗ್ ಅವರನ್ನು ಟೀಕಿಸಲು ಹೋಗುತ್ತಿರಲಿಲ್ಲ.
ನಮ್ಮ ದೇಶ ಆರ್ಥಿಕ ಪ್ರಗತಿ ಕಾಣಬೇಕು ಎಂದರೆ ಮನಮೋಹನ್‌ಸಿಂಗ್ ರೀತಿ ಪರಿಣತರು ಬರಬೇಕು. ಅವರಿಗೆ ಮುಕ್ತ ಸ್ವಾತಂತ್ರ್ಯ ನೀಡಿ ಆಧಿಕಾರ ನೀಡಿದರೆ ಮುಂದಿನ ೧೦ ವರ್ಷಗಳಲ್ಲಿ ದೇಶ ಹೇಗಿರಬೇಕು, ಯಾವ ದಿಕ್ಕಿನಲ್ಲಿ ಸಾಗಬೇಕು ಎಂಬುದನ್ನು ಸ್ಪಷ್ಟವಾಗಿ ರೂಪಿಸಬಹುದು. ಈ ದೃಷ್ಟಿಯಿಂದ ಮನಮೋಹನ್‌ಸಿಂಗ್ ವಿಚಾರಧಾರೆ ಈಗಲೂ ಪ್ರಸ್ತುತ. ಸಂಸತ್ತಿನಲ್ಲಿ ವಿಜ್ಞಾನಿಗಳು, ಅರ್ಥಶಾಸ್ತಜ್ಞರು, ಎಂಜಿನಿಯರ್‌ಗಳು, ವೈದ್ಯರು ಇರುವುದು ಅಗತ್ಯ. ಆಗ ಜಾಗತಿಕ ಮಟ್ಟದಲ್ಲಿ ನಡೆಯುವ ವಿದ್ಯಮಾನಗಳಗೆ ತಕ್ಕಂತೆ ಕಾಯ್ದೆ, ನೀತಿಗಳನ್ನು ರೂಪಿಸಬಹುದು. ಇಂದಿನ ಇಂಟರ್‌ನೆಟ್ ಯುಗದಲ್ಲಿ ಇದು ಅಗತ್ಯ. ಚುನಾವಣೆಯಲ್ಲಿ ಬಹುಮತ ಪಡೆಯವುದಷ್ಟೇ ರಾಜಕೀಯ ಪಕ್ಷಗಳ ಗುರಿಯಾಗಬಾರದು.