ಶೀಘ್ರವೇ ದಾಖಲೆ ರಹಿತ ಜನವಸತಿ ಪ್ರದೇಶ ನಿವಾಸಿಗಳಿಗೆ ಹಕ್ಕುಪತ್ರ

0
37

ದಾವಣಗೆರೆ: ದಾಖಲೆ ರಹಿತ ಜನವಸತಿ ಪ್ರದೇಶಗಳಾದ ತಾಂಡ, ಹಟ್ಟಿ, ಹಾಡಿ, ದೊಡ್ಡಿ, ಪಾಳ್ಯ, ಮಜರೆ, ಕ್ಯಾಂಪ್, ಕಾಲೋನಿ ಇತ್ಯಾದಿಗಳನ್ನು ಗುರುತಿಸಿ ಹೊಸ ಕಂದಾಯ ಗ್ರಾಮ
ಹಾಗೂ ಉಪಗ್ರಾಮಗಳೆಂದು ಘೋಷಿಸಿದು, ಅಲ್ಲಿನ ನಿವಾಸಿಗಳಿಗೆ ಶೀಘ್ರವೇ ಹಕ್ಕುಪತ್ರ ವಿತರಿಸಲು ಸರ್ಕಾರ ಕ್ರಮ ತೆಗೆದುಕೊಂಡಿದೆ ಎಂದು ಶಾಸಕ ಕೆ.ಎಸ್.ಬಸವಂತಪ್ಪ
ತಿಳಿಸಿದರು.
ಮಾಯಕೊಂಡ ಕ್ಷೇತ್ರದ ಕತ್ತಲಗೆರೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕವಳಿತಾಂಡ ಗ್ರಾಮದಲ್ಲಿ ೨೦೧೯-೨೦ನೇ ಸಾಲಿನ ಪ್ರಧಾನಮಂತ್ರಿ ಆದರ್ಶ ಗ್ರಾಮ ಯೋಜನೆಯಡಿ ನೂತನವಾಗಿ
ನಿರ್ಮಾಣ ಮಾಡಿರುವ ೧೨ ಲಕ್ಷ ರೂ. ವೆಚ್ಚದ ಶುದ್ಧ ಕುಡಿಯುವ ನೀರಿನ ಘಟಕ ಉದ್ಘಾಟಿಸಿ ಅವರು ಮಾತನಾಡಿದರು.
ದಾಖಲೆ ರಹಿತ ಜನವಸತಿ ಪ್ರದೇಶದಲ್ಲಿ ವಾಸಿಸುವ ಜನರು ಸರ್ಕಾರದ ಯಾವುದೇ ಸೌಲಭ್ಯಗಳು ಇಲ್ಲದೆ ನಿಕೃಷ್ಟ ಜೀವನ ಮಾಡುತ್ತಿದ್ದಾರೆ. ಈ ನಿಟ್ಟಿನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ದಾಖಲೆ ರಹಿತ ಜನವಸತಿ ಪ್ರದೇಶಗಳನ್ನು ಕಂದಾಯ ಗ್ರಾಮಗಳನ್ನಾಗಿ ಮಾಡಲು ಈಗಾಗಲೇ ಘೋಷಣೆ ಮಾಡಿದ್ದಾರೆ. ಇನ್ನು ೧೫ ರಿಂದ ೨೦ ದಿವಸದೊಳಗೆ ರಾಜ್ಯ
ಮಟ್ಟದಲ್ಲಿ ಹಕ್ಕುಪತ್ರ ವಿತರಣೆ ಮಾಡಿ ಉಳಿದ ಎಲ್ಲಾ ದಾಖಲೆ ರಹಿತ ಜನವಸತಿ ಪ್ರದೇಶಗಳಲ್ಲಿ ವಾಸಿಸುವ ನಿವಾಸಿಗಳಿಗೆ ಹಕ್ಕುಪತ್ರ ನೀಡಲಿದ್ದಾರೆ ಎಂದು ಭರವಸೆ ನೀಡಿದರು.
ದಾಖಲೆ ರಹಿತ ಜನವಸತಿ ಪ್ರದೇಶಗಳಲ್ಲಿ ವಾಸಿಸುವ ನಿವಾಸಿಗಳಿಗೆ ಹಕ್ಕುಪತ್ರ ಇಲ್ಲದೆ ಇ-ಸ್ವತ್ತು, ಸರ್ಕಾರದ ಸೌಲಭ್ಯಗಳನ್ನು ಪಡೆದುಕೊಳ್ಳಲು ಸಮಸ್ಯೆ ಆಗುತ್ತಿದೆ. ಈ
ಸಮಸ್ಯೆಗೆ ಮುಕ್ತಿ ನೀಡಲು ಸರ್ಕಾರ ಕಂದಾಯ ಗ್ರಾಮಗಳನ್ನಾಗಿಸಲು ಕ್ರಮ ತೆಗೆದುಕೊಂಡಿದ್ದು, ಹಕ್ಕುಪತ್ರ ದೊರೆತ ಬಳಿಕ ಇ-ಸ್ವತ್ತು, ಸರ್ಕಾರದ ಸೌಲಭ್ಯ ಪಡೆಯಲು ಅನುಕೂಲವಾಗಲಿದೆ ಎಂದರು.
ಸರ್ಕಾರ ಕಂದಾಯ ಗ್ರಾಮ ಘೋಷಿಸಿದ್ದರೂ ನಮಗೆ ಹಕ್ಕುಪತ್ರ ನೀಡಿಲ್ಲ ಎಂದು ಕವಳಿತಾಂಡ ನಿವಾಸಿಗಳು ಶಾಸಕರನ್ನು ಪ್ರಶ್ನಿಸಿದರು. ಕೂಡಲೇ ತಹಸೀಲ್ದಾರ್ ಅವರಿಗೆ ದೂರವಾಣಿ ಮೂಲಕ ಸಂಪರ್ಕಿಸಿ, ಸರ್ಕಾರ ಕಂದಾಯ ಘೋಷಿಸಿದ್ದು, ಈ ಭಾಗದ ಜನರಿಗೆ ಹಕ್ಕುಪತ್ರ ಏಕೆ ಕೊಟ್ಟಿಲ್ಲ ಎಂದು ಪ್ರಶ್ನಿಸಿದರು. ಹಕ್ಕುಪತ್ರ ಕೊಡಲು ಎಲ್ಲಾ ಸಿದ್ಧತೆ ಮಾಡಿಕೊಂಡಿದ್ದೇವೆ. ರಾಜ್ಯ ಮಟ್ಟದಲ್ಲಿ ಕರ‍್ಯಕ್ರಮ ಮುಗಿದ ಕೂಡಲೇ ವಿತರಿಸುತ್ತೇವೆ
ಎಂದು ಮಾಹಿತಿ ನೀಡಿದರು. ದೂರವಾಣಿ ಸಂಭಾಷಣೆಯಲ್ಲಿ ಮೈಕ್ ಮೊಬೈಲ್ ಬಳಿ ಹಿಡಿದು ಜನರಿಗೆ ಸ್ಪಷ್ಟಪಡಿಸಿದರು.

ಶುದ್ಧ ನೀರಿನ ಘಟಕ ನಿರ್ವಹಣೆ ಬಹಳ ಮುಖ್ಯ:
ಶುದ್ಧ ಕುಡಿಯುವ ನೀರಿನ ಘಟಕಗಳನ್ನು ಸ್ಥಾಪಿಸುವುದು ಮುಖ್ಯವಲ್ಲ. ಅವುಗಳ ನಿರ್ವಹಣೆ ಬಹಳ ಮುಖ್ಯ. ಧರ್ಮಸ್ಥಳ ಸಂಘದವರು ನಿರ್ವಹಣೆ ಮಾಡಿದಂತೆ ಗ್ರಾಮ ಪಂಚಾಯಿತಿ ಕೂಡ ಅದೇ ರೀತಿಯಾಗಿ ನಿರ್ವಹಣೆ ಮಾಡಬೇಕು. ಕ್ಷೇತ್ರದ ವ್ಯಾಪ್ತಿಯ ಕೆಲವೆಡೆ ಗುತ್ತಿಗೆದಾರರ ನಿರ್ವಹಣೆ ಇಲ್ಲದೇ ನೀರು ಶುದ್ಧೀಕರಿಸದೆ ನೇರವಾಗಿ ಬರುತ್ತಿವೆ. ಈ ರೀತಿ ಆಗಬಾರದು.
ಘಟಕವನ್ನು ಸರಿಯಾಗಿ ನಿರ್ವಹಣೆ ಮಾಡುವ ಮೂಲಕ ಜನರಿಗೆ ಶುದ್ಧ ನೀರು ಪೂರಸಬೇಕೆಂದು ಗ್ರಾಪಂ ಅಧಿಕಾರಿಗಳಿಗೆ ತಾಕೀತು ಮಾಡಿದರು.
ಈ ಸಂದರ್ಭದಲ್ಲಿ ಬಸವಾಪಟ್ಟಣ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬಿ.ಜಿ.ನಾಗಣ್ಣ, ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ಡಿ.ತಿಪ್ಪಣ್ಣ, ರೈತ ಮುಖಂಡರಾದ ತೇಜಸ್ವಿ ಪಟೇಲ್, ಗ್ರಾಮ ಪಂಚಾಯಿತಿ ಅಧ್ಯಕ್ಷ ಮಂಜಣ್ಣ, ಗ್ರಾಪಂ ಪಿಡಿಒ ಯಶೋಧಮ್ಮ, ಗ್ರಾಮದ ಮುಖಂಡರಾದ ಶಶಿಕುಮಾರ್ ಲೋಕೇಶ್ ನಾಯ್ಕ್, ಹನುಮಂತ ನಾಯ್ಕ್ ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.

Previous articleಜಾತಿ ಗಣತಿ ವರದಿ ಅನುಷ್ಠಾನ:ವಿರೋಧಿಸುವವರಿಗೆ ರಾಜಕೀಯ ಅಸ್ತಿತ್ವದ ಭಯ
Next articleಜಾತಿಗಣತಿ ವಿಚಾರದಲ್ಲಿ ಎಲ್ಲರಿಗೂ ನ್ಯಾಯ