ಬಾಯಿ ಮುಚ್ಚಿಕೊಂಡು ಕೂತರೆ ಮಠ ಹೋಗುವುದು ಗ್ಯಾರಂಟಿ
ಕಲಬುರಗಿ: ಆಳಂದ ಲಾಡ್ಲೆ ಮಶಾಕ್ ದರ್ಗಾದ ಆವರಣದಲ್ಲಿರುವ ಶ್ರೀ ರಾಘವ ಚೈತನ್ಯ ಶಿವಲಿಂಗಕ್ಕೆ ಪೂಜೆಗೆ ನಿನ್ನೆ ಮಂಗಳವಾರ ಹೈಕೋರ್ಟ್ ಅವಕಾಶ ನೀಡಿದ ಹಿನ್ನಲೆ ಪಟ್ಟಣದಲ್ಲಿ 144 ಅನ್ವಯ ನಿಷೇದಾಜ್ಞೆ ಜಾರಿಯಾಗಿದ್ದು ವ್ಯಾಪಕ ಪೊಲೀಸ್ ಬಂದೋಬಸ್ತ್ ಕೈಗೊಳ್ಳಲಾಗಿದೆ. ಮಧ್ಯಾಹ್ನ 2 ಗಂಟೆಯಿಂದ ಸಂಜೆ 6 ಗಂಟೆಯವರೆಗೆ 15 ಜನ ಹಿಂದೂಗಳಿಗೆ ಪೂಜೆ ಸಲ್ಲಿಕೆಗೆ ಅವಕಾಶ ಮಾಡಿಕೊಟ್ಟಿದೆ. ಕಳೆದ ವರ್ಷದಂತೆ ಈ ಬಾರಿ ಸಹ ದರ್ಗಾದ ಆವರಣದಲ್ಲಿರುವ ಶಿವಲಿಂಗಕ್ಕೆ ಮಹಾ ಶಿವರಾತ್ರಿಯಂದು ಪೂಜೆಗೆ ಅವಕಾಶ ಕೋರಿ ಹಿಂದೂಪರ ಸಂಘಟನೆಗಳು ನ್ಯಾಯಲಯದ ಮೊರೆ ಹೋಗಿದ್ದವು. ಆದರೆ ದರ್ಗಾ ಸಮಿತಿಯವರು ಲಾಡ್ಲೇ ಮಶಾಕ್ ದರ್ಗಾದಲ್ಲಿ ಶಿವಲಿಂಗ ಇಲ್ಲ ಪೂಜೆಗೆ ಅವಕಾಶ ಕೋಡಬಾರದು ಎಂದು ಅರ್ಜಿ ಸಲ್ಲಿಕೆ ಮಾಡಿದ್ದರು. ಹಿಂದೂಗಳು ಸಲ್ಲಿಸಿದ್ದ ಅರ್ಜಿ ಮತ್ತು ಲಾಡ್ಲೇ ಮಶಾಕ್ ದರ್ಗಾದವರು ಸಲ್ಲಿಸಿದ್ದ ಅರ್ಜಿಯನ್ನ ವಿಚಾರಣೆ ನಡೆಸಿದ ಕೋರ್ಟ್ ಕಮಿಟಿ ರಚಿಸಿತ್ತು. ವಿವಾದಿತ ದರ್ಗಾಕ್ಕೆ ಭೇಟಿ ಕೊಟ್ಟು ಪರಿಶೀಲನೆ ನಡೆಸಿ ವರದಿ ನೀಡುವಂತೆ ಸೂಚಿಸಿತ್ತು. ಅದರಂತೆ ಕಮಿಟಿ ದರ್ಗಾಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ವರದಿ ನೀಡಿದೆ.
ಆಳಂದ ಪಟ್ಟಣದಲ್ಲಿ ನಿಷೇಧಾಜ್ಞೆ ಜಾರಿ: ಲಾಡ್ಲೇ ಮಶಾಕ್ ದರ್ಗಾ ಆವರಣದಲ್ಲಿರುವ ಶ್ರೀ ರಾಘವ ಚೈತನ್ಯ ಶಿವಲಿಂಗಕ್ಕೆ ಪೂಜೆಗೆ ಹೈಕೋರ್ಟ್ ಮಧ್ಯಾಹ್ನ 2 ಗಂಟೆಯಿಂದ ಸಂಜೆ 6 ಗಂಟೆಯವರೆಗೆ 15 ಜನ ಹಿಂದೂಗಳಿಗೆ ಪೂಜೆ ಸಲ್ಲಿಕೆಗೆ ಅವಕಾಶ ಮಾಡಿಕೊಟ್ಟಿದೆ.
ಹೈಕೋರ್ಟ್ ಅವಕಾಶ ಹಿನ್ನಲೆ ಹಿಂದೂ ಕಾರ್ಯಕರ್ತರಿಂದ ಪೂಜೆ ಸಿದ್ಧತೆ ನಡೆಯುತ್ತಿದೆ. ಈ ಹಿನ್ನೆಲೆ ಪಟ್ಟಣದಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ನೋಡಿಕೊಳ್ಳಲು ನಿಷೇದಾಜ್ಞೆ ಜಾರಿಗೊಳಿಸಲಾಗಿದೆ. ಜೊತೆಗೆ ಪೊಲೀಸ್ ಬಂದೋಬಸ್ತ್ ವ್ಯವಸ್ಥೆಯನ್ನ ನಿಯೋಜಿಸಲಾಗಿದೆ.
ಯುಗಾದಿಗೆ ಮತ್ತೆ ಪೂಜೆ: ಬರುವ ಯುಗಾದಿಗೆ ಆಂದೋಲಾ ಸ್ವಾಮೀಜಿ ನೇತೃತ್ವದಲ್ಲಿ ಮತ್ತೆ ಪೂಜೆ ಮಾಡುತ್ತೇವೆ. ಸದ್ಯ ಈ ವಿಚಾರ ಜೀವಂತವಾಗಿ ಇಟ್ಟಿದ್ದೇವೆ. ಇದನ್ನೂ ನಾವು ಕೈ ಬಿಟ್ಟರೆ ಅದು ವಕ್ಫ್ ಬೋರ್ಡ್ದೇ ಆಗಿ ಬಿಡುತ್ತೆ ಎಂದು ಶ್ರೀರಾಮ ಸೇನೆಯ ಸಂಸ್ಥಾಪಕ ಪ್ರಮೋದ್ ಮುತಾಲಿಕ್ ಹೇಳಿದ್ದಾರೆ. ನ್ಯಾಯಾಲಯದ ನಿರ್ದೇಶನದಂತೆ ಪೂಜೆ ಮುಗಿಸಿ ಮುಂದಿನ ಹೋರಾಟ ಮಾಡುತ್ತೇವೆ. ಶ್ರೀರಾಮ ಸೇನೆ, RSS, ವಿಶ್ವ ಹಿಂದೂ ಪರಿಷತ್ ಸೇರಿ ಕೆಲವರು ಬಿಟ್ಟರೆ ಉಳಿದವರು ಯಾಕೆ ಬಾಯಿ ಮುಚ್ಚಿ ಕುಳಿತಿದ್ದಾರೋ? ಉಳಿದ ಸ್ವಾಮೀಜಿಗಳೇ ನೀವೇನು ನಿದ್ದೆ ಮಾಡುತ್ತಿದ್ದೀರಾ? ನಿಮ್ಮ ಮಠದ ಒಳಗಡೆ ಇರುವ ಲಿಂಗಕ್ಕೂ ನಾಳೆ ಮಲಮೂತ್ರ ಎರಚುತ್ತಾರೆ. ಸ್ವಾಮಿಜಿಗಳೇ, ನೀವು ಕಣ್ಣು ತೆರೆಯಿರಿ, ನೀವು ಬಾಯಿ ಮುಚ್ಚಿಕೊಂಡು ಕೂತರೆ ನಿಮ್ಮ ಮಠ ಹೋಗುವುದು ಗ್ಯಾರಂಟಿ, ಆಂದೋಲಾ ಸ್ವಾಮೀಜಿಗಳನ್ನು ಬ್ಯಾನ್ ಮಾಡಿದ್ದಾರೆ. ಆದರೂ ಒಬ್ಬ ಸ್ವಾಮಿಯೂ ತುಟಿ ಪಿಟಕ್ ಎನ್ನುತ್ತಿಲ್ಲ. ನರಸತ್ತವರ ರೀತಿ ವರ್ತನೆ ಮಾಡಬೇಡಿ ಮಠಾಧಿಪತಿಗಳೇ. ಇಂದು ಆಳಂದನಲ್ಲಿ, ನಾಳೆ ನಿಮ್ಮಲ್ಲಿ ಇದೇ ಆಟ ನಡೆಯುತ್ತೆ ಎಂದರು.