ಮಂಗಳೂರು: ಮಂಗಳೂರು ದಕ್ಷಿಣ ಶಾಸಕ ವೇದವ್ಯಾಸ ಕಾಮತ್ ಅವರ ವಿರುದ್ಧ ಎಫ್‌ಐಆರ್ ದಾಖಲಿಸಿರುವುದನ್ನು ಹಾಗೂ ಪರಿಶಿಷ್ಟ ಸಮುದಾಯದ ಯುವಕನ ಮೇಲೆ ಕಾಂಗ್ರೆಸ್ ಕಾರ್ಯಕರ್ತರು ಹಲ್ಲೆ ಮಾಡಿ ದೌರ್ಜನ್ಯ ನಡೆಸಿರುವುದನ್ನು ವಿರೋಧಿಸಿ ಬಿಜೆಪಿ ಮಂಗಳೂರು ನಗರ ದಕ್ಷಿಣ ಮಂಡಲದ ವತಿಯಿಂದ ಮಂಗಳವಾರ ಹಂಪನಕಟ್ಟೆಯ ಮಿನಿ ವಿಧಾನಸೌಧದ ಬಳಿ ಪ್ರತಿಭಟನೆ ನಡೆಯಿತು.
ಪ್ರತಿಭಟನೆಯಲ್ಲಿ ಮಾತನಾಡಿದ ದ.ಕ. ಸಂಸದ ಬ್ರಿಜೇಶ್ ಚೌಟ, ಕಾಂಗ್ರೆಸ್ ಆಡಳಿತದಲ್ಲಿ ಜನತೆಯ ನೆಮ್ಮದಿ ಕಸಿದಿರುವುದಲ್ಲದೆ, ಜನಪ್ರತಿನಿಧಿಗಳನ್ನೂ ಗುರಿಯಾಗಿಸುವ ಪರಿಸ್ಥಿತಿ ನಿರ್ಮಾಣವಾಗಿದೆ. ಬಾಂಗ್ಲಾ ಮಾದರಿಯಲ್ಲಿ ರಾಜ್ಯಪಾಲರನ್ನು ಓಡಿಸುತ್ತೇವೆ ಎಂದು ಹೇಳಿಕೆ ನೀಡಿದ್ದ ವಿಧಾನ ಪರಿಷತ್ ಸದಸ್ಯ ಐವನ್ ಡಿ’ಸೋಜಾ ಮೇಲೆ ಕೇಸು ದಾಖಲಿಸಲು ಪೊಲೀಸರಿಗೆ ಕಾನೂನು ಸಲಹೆ ಬೇಕಿತ್ತು. ಆದರೆ ಪುಂಡ ಪೋಕರಿಗಳು ದೂರು ನೀಡಿದಾಗ ಏನೂ ವಿಚಾರಿಸದೆ ಶಾಸಕರ ವಿರುದ್ಧ ಕೇಸು ದಾಖಲಿಸಲಾಗಿದೆ. ಜಿಲ್ಲೆಯಲ್ಲಿ ಇದು ಪ್ರಥಮ ಪ್ರಕರಣ ಅಲ್ಲ, ಈಗಾಗಲೇ ಶಾಸಕರಾದ ಹರೀಶ್ ಪೂಂಜಾ, ಡಾ. ಭರತ್ ಶೆಟ್ಟಿ, ಈಗ ವೇದವ್ಯಾಸ್ ಕಾಮತ್ ಮೇಲೆ ಮತ್ತೊಮ್ಮೆ ಕೇಸು ದಾಖಲಿಸಲಾಗಿದೆ ಎಂದರು.
ಕಾಂಗ್ರೆಸ್ ಅಣತಿಯಂತೆ ಕೆಲಸ ಮಾಡುವ ಪೊಲೀಸರಿಗೆ ನಾಪತ್ತೆಯಾದವರ ಪತ್ತೆ ಮಾಡುವ, ಗಾಂಜಾ ಡ್ರಗ್ಸ್ ಜಾಲವನ್ನು ಬೇಧಿಸುವ ತಾಕತ್ತು ಇಲ್ಲ. ಈ ಸರ್ಕಾರ ಎಷ್ಟು ದಿನ ಇರುತ್ತದೆ ಎನ್ನುವುದು ಕೂಡಾ ಗೊತ್ತಿರಬಹುದು. ಜಿಲ್ಲೆಯಲ್ಲಿ ಸೋತ ಅಭ್ಯರ್ಥಿ ಪತ್ರ ನೀಡಿದರೆ ನೇಮಕಾತಿ, ವರ್ಗಾವಣೆ ಸಹಿತ ವಿವಿಧ ಕೆಲಸಗಳು ಹಣ ಬಲದಲ್ಲಿ ಆಗುತ್ತದೆ. ಅಧಿಕಾರ ಶಾಶ್ವತ ಅಲ್ಲ. ಸತ್ಯ ನ್ಯಾಯ ಧರ್ಮದಲ್ಲಿ ನಡೆದರೆ ಮಾತ್ರ ಜನರ ಪ್ರೀತಿ ಸಿಗಬಹುದು. ಕಾಂಗ್ರೆಸ್‌ನ ಅಂತ್ಯ ಕರ್ನಾಟಕದಿಂದ ಆರಂಭವಾಗಲಿದೆ ಎಂದರು.
ಬಿಜೆಪಿ ಜಿಲ್ಲಾಧ್ಯಕ್ಷ ಸತೀಶ್ ಕುಂಪಲ ಮಾತನಾಡಿದರು. ದಕ್ಷಿಣ ಮಂಡಲ ಅಧ್ಯಕ್ಷ ರಮೇಶ್ ಕಂಡೆಟ್ಟು, ಮುಖಂಡರಾದ ರವೀಂದ್ರ ಶೆಟ್ಟಿ ಉಳಿದೊಟ್ಟು, ರಾಜಗೋಪಾಲ ರೈ, ಪ್ರೇಮಾನಂದ ಶೆಟ್ಟಿ, ಸುಧೀರ್ ಶೆಟ್ಟಿ ಕಣ್ಣೂರು, ಮ ನೋಜ್ ಕುಮಾರ್, ದಿವಾಕರ್ ಪಾಂಡೇಶ್ವರ, ಭಾನುಮತಿ, ವಿಜಯ ಕುಮಾರ್ ಶೆಟ್ಟಿ, ನಂದನ್ ಮಲ್ಯ, ನಿತಿನ್ ಕುಮಾರ್, ಪೂರ್ಣಿಮಾ, ವಸಂತ ಪೂಜಾರಿ ಮತ್ತಿತರರಿದ್ದರು.