ಬೆಂಗಳೂರು: ರಾಜ್ಯದ ಅಭಿವೃದ್ದಿಗೆ ಹಾಗೂ ರಾಜ್ಯವನ್ನು ಸರ್ವ ಜನಾಂಗದ ಶಾಂತಿಯ ತೋಟ ಮಾಡಲು ವಿರೋಧ ಪಕ್ಷಗಳು ಸಹಕಾರ ಕೊಡಬೇಕು ಎಂದು ಗೃಹ ಸಚಿವ ಡಾ. ಜಿ ಪರಮೇಶ್ವರ್ ತಿಳಿಸಿದರು.
ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಸಚಿವ ಪ್ರಿಯಾಂಕ್ ಖರ್ಗೆ ಅವರ ಮೇಲೆ ಬಿಜೆಪಿಯವರು ಮಾಡಿರುವ ಆರೋಪ ಪ್ರಕರಣವನ್ನು ಸಿಐಡಿಗೆ ವಹಿಸಲಾಗಿದೆ, ಸಚಿವರ ಮೇಲೆ ಅನವಶ್ಯಕವಾಗಿ ಆಪಾದನೆ ಮಾಡುವುದು ಯಾವುದೇ ಸರ್ಕಾರಕ್ಕೂ ಸರಿ ಎನಿಸುವುದಿಲ್ಲ. ಡೆತ್‌ನೋಟ್‌ನಲ್ಲಿ ಅವರ ಹೆಸರು ಕೂಡ ಇಲ್ಲ ಎಂದು ಇಲಾಖೆಯ ಅಧಿಕಾರಿಗಳು ಹೇಳಿದ್ದಾರೆ. ಸಚಿವರ ಹೆಸರನ್ನು ತಂದು, ಸರ್ಕಾರಕ್ಕೆ ಮಸಿ ಬಳಿಯುವ ಕೆಲಸ ಮಾಡುತ್ತಿದ್ದಾರೆ. ಸತ್ಯಾಸತ್ಯತೆ ಹೊರಬರಲಿ ಎಂಬ ದೃಷ್ಟಿಯಿಂದ ಮುಖ್ಯಮಂತ್ರಿಯವರೊಂದಿಗೆ ಚರ್ಚಿಸಿ ಸಿಐಡಿಗೆ ವಹಿಸಲಾಗಿದೆ, ತನಿಖೆಯ ವರದಿ ಬಂದ ನಂತರ ಏನು ಎಂಬುದನ್ನು ಹೇಳೋಣ. ಸಚಿವ ಪ್ರಿಯಾಂಕ್ ಖರ್ಗೆ ಅವರು ರಾಜೀನಾಮೆ ಕೊಡುವ ಅಗತ್ಯ ಇಲ್ಲ. ಸಿಬಿಐಗೆ ವಹಿಸುವಂತೆ ಬಿಜೆಪಿಯವರು ಒತ್ತಾಯಿಸುತ್ತಿರುವ ಕುರಿತು ಪ್ರತಿಕ್ರಿಯಿಸಿದ ಅವರು, ಎಲ್ಲ ಪ್ರಕರಣಗಳನ್ನು ಸಿಬಿಐಗೆ ವಹಿಸಲು ಆಗುವುದಿಲ್ಲ. ಸಿಐಡಿ ಸಮರ್ಥವಾಗಿದೆ.
ಪೆಟ್ರೋಲ್ ಜಿಎಸ್‌ಟಿ ವ್ಯಾಪ್ತಿಗೆ: ನಮ್ಮ ಬಜೆಟ್‌ನಲ್ಲಿ ಲೆಕ್ಕಾಚಾರ ಮಾಡಿ ತೀರ್ಮಾನ ಮಾಡಬೇಕಾಗುತ್ತದೆ, ಜಿಎಸ್‌ಟಿ ಗೊಂದಲ ಬಗೆಹರಿಸುವ ನಿಟ್ಟಿನಲ್ಲಿ ಸರ್ಕಾರ ಏನು ಕ್ರಮ ಕೈಗೊಳ್ಳಬೇಕು ಅದನ್ನು ಕೈಗೊಳ್ಳುತ್ತದೆ. ನಮಗೆ ಅನುಕೂಲ ಆಗುವುದಾದರೆ ತೆಗೆದುಕೊಳ್ಳುತ್ತದೆ.
ಶಾಂತಿಯುತವಾಗಿ ಹೊಸ ವರ್ಷಾಚರಣೆ: ಹೊಸ ವರ್ಷಾಚರಣೆ ವೇಳೆ ಯಾವುದೇ ಅಹಿತಕರ ಘಟನೆ ನಡೆದಿಲ್ಲ. ಶಾಂತಿಯುತವಾಗಿ ಹೊಸ ವರ್ಷಾಚರಣೆ ಮಾಡಲಾಗಿದೆ, ನಿನ್ನೆ ರಾತ್ರಿ ಹೊಸ ವರ್ಷದ ಆಚರಣೆಯಲ್ಲಿ ಜನ ಭಾಗವಹಿಸಿದ್ದರು. ಸಂಭ್ರಮಾಚರಣೆಯ ವೇಳೆ ರಾಜ್ಯದಲ್ಲಿ ಯಾವುದೇ ಅಹಿತಕರ ಘಟನೆ ನಡೆದಿಲ್ಲ. ಪೊಲೀಸರು ಉತ್ತಮ ಭದ್ರತೆ ಒದಗಿಸಿದ್ದಾರೆ. ನಾನು ಎಲ್ಲಿಯೂ ಭೇಟಿ ನೀಡಿಲ್ಲ ಎಲ್ಲರೂ ಶಾಂತಿಯಿಂದ ಹೊಸ ವರ್ಷ ಆಚರಣೆ ಮಾಡಿದ್ದಾರೆ. ರಾಜ್ಯದ ಯುವಕರಿಗೆ ಅಭಿನಂದನೆ ಸಲ್ಲಿಸುತ್ತೇನೆ ಎಂದರು.