ವ್ಯಕ್ತಿ ತಲೆ ಕಡಿದು ಪೊಲೀಸ್ ಠಾಣೆಗೆ ತಂದಿದ್ದವನಿಗೆ: ಜೀವಾವಧಿ ಶಿಕ್ಷೆ

ಮಂಡ್ಯ: ತನ್ನ ತಾಯಿಗೆ ಕೆಟ್ಟ ಸನ್ನೆ ಮಾಡಿದ ಎಂಬ ಕಾರಣಕ್ಕಾಗಿ ವ್ಯಕ್ತಿಯೊಬ್ಬನ ತಲೆ ಕಡಿದು ತನ್ನ ಬೈಕಿನ ಪೆಟ್ರೋಲ್ ಟ್ಯಾಂಕ್ ಮೇಲೆ ಇಟ್ಟುಕೊಂಡು ಪೊಲೀಸ್ ಠಾಣೆಗೆ ಬಂದಿದ್ದ ಆರೋಪಿಗೆ ಮಂಡ್ಯದ 2ನೇ ಅಧಿಕ ಜಿಲ್ಲಾ ಮತ್ತು ಸತ್ರ ನ್ಯಾಯಾಲಯವು ಜೀವಾವಧಿ ಶಿಕ್ಷೆ ವಿಧಿಸಿರುವುದಲ್ಲೇ 2 ಲಕ್ಷ ರೂ. ದಂಡವನ್ನು ವಿಧಿಸಿ ಆದೇಶ ಹೊರಡಿಸಿದೆ.
ಮಳವಳ್ಳಿ ತಾಲ್ಲೂಕು ಬಿ.ಜಿ. ಪುರ ಹೋಬಳಿ ಚಿಕ್ಕಬಾಗಿಲು ಗ್ರಾಮದ ಪಶುಪತಿ ಜೀವಾವಧಿ ಶಿಕ್ಷೆಗೆ ಒಳಗಾದವನು. ಈತ ಗಿರೀಶ್ ಎಂಬ ವ್ಯಕ್ತಿಯು ತನ್ನ ತಾಯಿಗೆ ಕೆಟ್ಟ ಸನ್ನೆ ಮಾಡಿದ ಎಂಬ ಕಾರಣಕ್ಕಾಗಿ ಆತನ ತಲೆ ಕಡಿದು, ಪೊಲೀಸ್ ಠಾಣೆಗೆ ಕೊಂಡೊಯ್ದು ಶರಣಾಗಿದ್ದನು.

ಏನಿದು ಘಟನೆ ?
ಮಳವಳ್ಳಿ ತಾಲ್ಲೂಕು ಬಿ.ಜಿ.ಪುರ ಹೋಬಳಿ ಚಿಕ್ಕಬಾಗಿಲು ಗ್ರಾಮದಲ್ಲಿ ಆರೋಪಿ ಪಶುಪತಿಯು ಗಿರೀಶನ ತಾಯಿಯನ್ನು ನೋಡಿ ಕೆಟ್ಟ ರೀತಿಯಲ್ಲಿ ಸನ್ನೆ ಮಾಡಿದ ಎಂದು ತಿಳಿದುಕೊಂಡು ಆತನ ವಿರುದ್ಧ ದ್ವೇಷ ಸಾಧಿಸಿ ಸೆ. 29, 2018ರಂದು ಜಮೀನಿನ ಬಳಿ ಕೆಲಸ ಮಾಡಲು ಜೊತೆಯಲ್ಲಿ ಕೊಡಲಿಯನ್ನು ತೆಗೆದುಕೊಂಡು ಹೋಗುತ್ತಿದ್ದ ಮಹದೇವ ಅಲಿಯಾಸ್ ಲಾರಿ ಎಂಬುವನಿಂದ ಕೊಡಲಿಯನ್ನು ಕಿತ್ತುಕೊಂಡು ಏಕಾಏಕಿ ಗಿರೀಶನಿಗೆ ಹೊಡೆದು ಕೊಲೆ ಮಾಡಿ ನಂತರ ಕೊಡಲಿಯಿಂದ ಅತಿ ಕ್ರೂರವಾಗಿ ಮೃತ ಗಿರೀಶನ ತಲೆಯನ್ನು ಕತ್ತರಿಸಿಕೊಂಡು ನಂತರ ತನ್ನ ಬೈಕ್‌ನ ಪೆಟ್ರೋಲ್‌ ಟ್ಯಾಂಕ್ ಮೇಲೆ ಇಟ್ಟುಕೊಂಡು ಹಗಲು ವೇಳೆಯಲ್ಲಿಯೇ ಸಾರ್ವಜನಿಕರು ಬೆಚ್ಚಿ ಬೀಳುವಂತೆ ರಾಜರೋಷವಾಗಿ ಮಳವಳ್ಳಿ ಪುರ ಠಾಣೆಯ ಬಳಿ ಸ್ವತಃ ಹಾಜರಾಗಿ, ತಾನೇ ಕೊಲೆ ಮಾಡಿದ್ದಾಗಿ ಒಪ್ಪಿಕೊಂಡು ಶರಣಾಗಿದ್ದ.
ಈ ಬಗ್ಗೆ ಬೆಳಕವಾಡಿ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಳ್ಳಲಾಗಿತ್ತು. ಈ ಪ್ರಕರಣದ ವಿಚಾರಣೆಯು ಮಂಡ್ಯದ 2ನೇ ಅಧಿಕ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದಲ್ಲಿ ವಿಚಾರಣೆ ನಡೆದು, ಈ ಪ್ರಕರಣದಲ್ಲಿ ಆರೋಪಿಗೆ ಜೀವಾವಧಿ ಶಿಕ್ಷೆ ಮತ್ತು 2 ಲಕ್ಷ ರೂಪಾಯಿ ದಂಡವನ್ನು ವಿಧಿಸಿದೆ.