ಬಾಗಲಕೋಟೆ: ಜಿಲ್ಲೆಯಲ್ಲಿ ನಡೆದ ರಾಷ್ಟ್ರೀಯ ಲೋಕ ಅದಾಲತ್ ಶಿಬಿರದಲ್ಲಿ ಜಿಲ್ಲಾ ಕೌಟುಂಬಿಕ ನ್ಯಾಯಾಲಯದಲ್ಲಿ ವಿಚ್ಛೇದನ ಬಯಸಿದ್ದ ೪ ಜೋಡಿಗಳು ಮತ್ತೆ ಒಂದಾಗುವ ಮೂಲಕ ಹೊಸ ಜೀವನಕ್ಕೆ ಅಡಿ ಇಟ್ಟರು.
ರಾಷ್ಟ್ರೀಯ ಕಾನೂನು ಸೇವೆಗಳ ಪ್ರಾಧಿಕಾರ ಹಾಗೂ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದ ನಿರ್ದೇಶನದಂತೆ ಜಿಲ್ಲಾ ನ್ಯಾಯಾಲಯದಲ್ಲಿ ನಡೆದ ಲೋಕ ಅದಾಲತ್‌ನಲ್ಲಿ ಕೌಟುಂಬಿಕ ವಿವಾದದ ಹಿನ್ನೆಲೆಯಲ್ಲಿ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದ ದಂಪತಿಗಳು ತಮ್ಮ ವಾಜ್ಯಗಳನ್ನು ಬಗೆಹರಿಸಿಕೊಂಡು ಮತ್ತೆ ಸತಿ-ಪತಿಗಳಾಗಿ ಹೊಸ ಜೀವನ ಶುರು ಮಾಡಲು ನಿರ್ಧರಿಸಿದರು. ಜಿಲ್ಲಾ ನ್ಯಾಯಾಲಯದ ವಿವಿಧ ಅಧೀನ ನ್ಯಾಯಾಲಯದಲ್ಲಿಯೂ ಸಹ ವಿಚ್ಛೇದನ ಕೋರಿದ್ದ ೫ ಜೋಡಿಗಳೂ ಒಂದಾಗಿವೆ.
ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಎನ್.ವಿ. ವಿಜಯ ಅವರ ನೇತೃತ್ವದಲ್ಲಿ ನಡೆದ ಲೋಕ ಅದಾಲತ್‌ನಲ್ಲಿ ಬಾಕಿ ಇರುವ ೮,೨೫೩ ಪೈಕಿ ೪,೪೩೦ ಹಾಗೂ ವ್ಯಾಜ್ಯ ಪೂರ್ವ ಪ್ರಕರಣಗಳಲ್ಲಿ ೨೪,೧೮೭ ಪೈಕಿ ೨೨,೬೪೬ ಪ್ರಕರಣ ಸೇರಿ ಒಟ್ಟು ೨೭,೦೭೬ ಪ್ರಕರಣಗಳನ್ನು ರಾಜಿ ಸಂಧಾನ ಮೂಲಕ ಇತ್ಯರ್ಥ ಪಡಿಸಲಾಯಿತು. ಅದಾಲತ್‌ನಲ್ಲಿ ಒಟ್ಟು ೬೪.೦೨ ಕೋಟಿ ರೂ.ಗಳ ಪ್ರಕರಣದ ಮೊತ್ತವಾಗಿತ್ತು.