ವೈದ್ಯರ ನಿರ್ಲಕ್ಷ್ಯಕ್ಕೆ ಯುವಕ ಸಾವು: ಪ್ರತಿಭಟನೆ

0
27

ಹೊಸಪೇಟೆ: ವೈದ್ಯರ ನಿರ್ಲಕ್ಷ್ಯದಿಂದ ಯುವಕ ಮೃತಪಟ್ಟಿದ್ದಾನೆಂದು ಆರೋಪಿಸಿ ಮೃತನ ಸಂಬಂಧಿಕರು ಮಂಗಳವಾರ ಮರಿಯಮ್ಮನ ಹಳ್ಳಿಯ ಸಮುದಾಯ ಆರೋಗ್ಯ ಕೇಂದ್ರದ ಮುಂದೆ ಪ್ರತಿಭಟನೆ ನಡೆಸಿದರು.
ಪಟ್ಟಣದ 11ನೇ ವಾರ್ಡಿನ ನಾಲಬಂದಿ ಸಲೀಂ(28) ಮೃತಪಟ್ಟ ಯುವಕ. ಯುವಕ ಸಲೀಂ ಬೆಳಿಗ್ಗೆ 8.30ರ ಸುಮಾರಿಗೆ ಚಿಕನ್ ಅಂಗಡಿಗೆ ಬಂದಾಗ ಏಕಾಏಕಿ ಅಸ್ವಸ್ಥಗೊಂಡಿದ್ದಾನೆ. ಇದರಿಂದ ಆತಂಕಗೊಂಡ ಕುಟಂಬಸ್ಥರು ಪಟ್ಟಣದ ಸಮುದಾಯ ಆರೋಗ್ಯ ಕೇಂದ್ರಕ್ಕೆ ಕರೆ ತಂದಿದ್ದಾರೆ.
ಕೇಂದ್ರದಲ್ಲಿ ವೈದ್ಯರಿಲ್ಲದ್ದರಿಂದ ಹೊಸಪೇಟೆ ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗುವಂತೆ ಸೂಚಿಸಿದ್ದಾರೆ. ಇದರಿಂದ ಆತಂಕಗೊಂಡ ಕುಟುಂಬಸ್ಥರು ಹೆಚ್ಚಿನ ಚಿಕಿತ್ಸೆಗಾಗಿ 108 ವಾಹನದಲ್ಲಿ ಸಾಗಿಸುವ ಮಾರ್ಗ ಮದ್ಯೆ ಸಲೀಂ ಮೃತಪಟ್ಟಿದ್ದಾರೆ.
ಇದರಿಂದ ಆಕ್ರೋಶಗೊಂಡ ಮೃತನ ಸಂಬಂಧಿಕರು ಹಾಗೂ ನಾಗರಿಕರು ಆರೋಗ್ಯ ಕೇಂದ್ರದ ಎದುರು ಪ್ರತಿಭಟನೆ ನಡೆಸಿ, ಯುವಕನ ಸಾವಿಗೆ ವೈದ್ಯರ ನಿರ್ಲಕ್ಷ್ಯವೇ ಕಾರಣ, ಕೂಡಲೇ ಅವರ ವಿರುದ್ಧ ಕ್ರಮಕೈಗೊಳ್ಳುವಂತೆ ಒತ್ತಾಯಿಸಿದರು.
ವಿಷಯ ತಿಳಿಯುತ್ತಿದ್ದಂತೆ ಕೇಂದ್ರಕ್ಕೆ ಬಂದ ತಾಲೂಕು ಆರೋಗ್ಯಧಿಕಾರಿ ಡಾ. ಭಾಸ್ಕರ್, ಸಿಪಿಐ ವಿಕಾಸ್ ಲಮಾಣಿ, ಪಿಎಸ್‍ಐ ಮೌನೇಶ್ ರಾಠೋಡ್ ಅವರು ಪ್ರತಿಭಟನಾಕಾರರ ಸಮಸ್ಯೆ ಆಲಿಸಿ ಮನವೊಲಿಸಲು ಯತ್ನಿಸಿದರೂ ಜಗ್ಗದ ಪ್ರತಿಭಟನಾಕಾರರು, ಕೂಡಲೇ ಕ್ರಮಕೈಗೊಳ್ಳಬೇಕೆಂದು ಆಗ್ರಹಿಸಿದರು.
ನಂತರ ಸ್ಥಳಕ್ಕೆ ಬಂದ ಶಾಸಕ ಕೆ. ನೇಮರಾಜ ನಾಯ್ಕ, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಸಲೀಂ ಪಾಷಾ ಹಾಗೂ ಜಿಲ್ಲಾ ಆರೋಗ್ಯಾಧಿಕಾರಿ ಡಾ.ಶಂಕರ್ ನಾಯ್ಕ, ಡಿವೈಎಸ್ಪಿ ಮಲ್ಲೇಶಪ್ಪ ಮಲ್ಲಾಪುರ ಹಾಗೂ ತಹಶೀಲ್ದಾರ್ ಶೃತಿ ಮಾಳಪ್ಪಗೌಡ ಅವರು ಪ್ರತಿಭಟನಾಕಾರರ ಸಮಸ್ಯೆ ಆಲಿಸಿದರು.
ನಂತರ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಬಳಿಕ ಮಾತನಾಡಿದ ಶಾಸಕ ಕೆ.ನೇಮರಾಜ ನಾಯ್ಕ, ಕೇಂದ್ರದಲ್ಲಿ ಸರಿಯಾದ ವೈದ್ಯರಿಲ್ಲದೆ ಇಂತಹ ಘಟನೆ ನಡೆದಿದ್ದು, ಕೂಡಲೇ ಹೆಚ್ಚುವರಿ ಇಬ್ಬರು ಎಂಬಿಬಿಎಸ್ ವೈದ್ಯರನ್ನು ಹಾಗೂ ನಾಲ್ಕು ಜನ ಡಿ ಗ್ರುಪ್ ಸಿಬ್ಬಂದಿಯನ್ನು ನೇಮಿಸುವಂತೆ ಸೂಚಿಸಿದರು.‌

Previous articleಹೋಂ ಸ್ಟೇ ದಾಳಿ ಪ್ರಕರಣದ ಆರೋಪಿಗಳು ಖುಲಾಸೆ
Next articleಮುಂದುವರೆದ ಮಳೆ ಮತ್ತೆ ಮಲಪ್ರಭೆಗೆ ಪ್ರವಾಹ ಭೀತಿ