ವೇಗದ ಶತಕ ದಾಖಲಿಸಿದ ಸ್ಮೃತಿ ಮಂಧಾನಾ

0
22

ಅತೀ ವೇಗದ ಶತಕ ಬಾರಿಸಿದ ಬ್ಯಾಟರ್ ಎಂಬ ದಾಖಲೆ

ರಾಜಕೋಟ್: ಐರ್ಲೆಂಡ್ ವಿರುದ್ಧ ನಡೆಯುತ್ತಿರುವ ೩ನೇ ಏಕದಿನ ಪಂದ್ಯದಲ್ಲಿ ಸ್ಮೃತಿ ಮಂಧಾನ ಭರ್ಜರಿ ಶತಕ ಸಿಡಿಸಿದ್ದಾರೆ. ಈ ಶತಕದೊಂದಿಗೆ ಭಾರತದ ಪರ ಮಹಿಳಾ ಏಕದಿನ ಕ್ರಿಕೆಟ್‌ನಲ್ಲಿ ಅತೀ ವೇಗದ ಶತಕ ಸಿಡಿಸಿದ ದಾಖಲೆ ನಿರ್ಮಿಸಿದ್ದಾರೆ.
ಇಲ್ಲಿನ ನಿರಂಜನ್ ಶಾ ಸ್ಟೇಡಿಯಂನಲ್ಲಿ ಐರ್ಲೆಂಡ್ ವಿರುದ್ಧ ಪಂದ್ಯದಲ್ಲಿ ಟಾಸ್ ಗೆದ್ದ ಭಾರತ ವನಿತೆಯರ ತಂಡ ಬ್ಯಾಟಿಂಗ್ ಆಯ್ದುಕೊಂಡಿತು. ಅದರಂತೆ ಇನಿಂಗ್ಸ್ ಆರಂಭಿಸಿದ ಟೀಮ್ ಇಂಡಿಯಾದ ಹಂಗಾಮಿ ನಾಯಕಿ ಸ್ಮೃತಿ ಮಂಧಾನ ಹಾಗೂ ಪ್ರತೀಕಾ ರಾವಲ್ ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸಿದರು. ಒಂದೆಡೆ ಪ್ರತೀಕಾ ಎಚ್ಚರಿಕೆಯ ಬ್ಯಾಟಿಂಗ್ ಪ್ರದರ್ಶಿಸಿದರೆ, ಮತ್ತೊಂದೆಡೆ ಸ್ಮೃತಿ ಮಂಧಾನ ಸ್ಫೋಟಕ ಇನಿಂಗ್ಸ್ ಆಡಿದರು.
ಬಿರುಸಿನ ಬ್ಯಾಟಿಂಗ್‌ನೊಂದಿಗೆ ಐರ್ಲೆಂಡ್ ಬೌಲರ್‌ಗಳ ಬೆಂಡೆತ್ತಿದ ಸ್ಮೃತಿ ಕೇವಲ ೭೦ ಎಸೆತಗಳಲ್ಲಿ ಶತಕ ಪೂರೈಸಿದರು. ಈ ಮೂಲಕ ಮಹಿಳಾ ಏಕದಿನ ಕ್ರಿಕೆಟ್‌ನಲ್ಲಿ ಟೀಮ್ ಇಂಡಿಯಾ ಪರ ಅತೀ ವೇಗದ ಶತಕ ಬಾರಿಸಿದ ಬ್ಯಾಟರ್ ಎಂಬ ದಾಖಲೆಯನ್ನು ತಮ್ಮದಾಗಿಸಿಕೊಂಡರು.
ಇದಕ್ಕೂ ಮುನ್ನ ಈ ದಾಖಲೆ ಟೀಮ್ ಇಂಡಿಯಾ ನಾಯಕಿ ಹರ್ಮನ್‌ಪ್ರೀತ್ ಕೌರ್ ಹೆಸರಿನಲ್ಲಿತ್ತು. ೨೦೨೪ರಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧದ ಏಕದಿನ ಪಂದ್ಯದಲ್ಲಿ ಹರ್ಮನ್ ಕೇವಲ ೮೭ ಎಸೆತಗಳಲ್ಲಿ ಶತಕ ಸಿಡಿಸಿ ದಾಖಲೆ ಬರೆದಿದ್ದರು. ಇದೀಗ ಈ ದಾಖಲೆಯನ್ನು ಮುರಿದು ಸ್ಮೃತಿ ಮಂಧಾನ ಹೊಸ ಇತಿಹಾಸ ನಿರ್ಮಿಸಿದ್ದಾರೆ. ಅಲ್ಲದೆ ಈ ಪಂದ್ಯದಲ್ಲಿ ೮೦ ಎಸೆತಗಳನ್ನು ಎದುರಿಸಿದ ಸ್ಮೃತಿ ೭ ಭರ್ಜರಿ ಸಿಕ್ಸ್ ಹಾಗೂ ೧೨ ಫೋರ್‌ಗಳೊಂದಿಗೆ ೧೩೫ ರನ್ ಬಾರಿಸಿ ಔಟಾದರು.

Previous article೪೫ ಅಪರಾಧಿಗಳಿಗೆ ೬ ತಿಂಗಳು ಗಡಿಪಾರು
Next articleನಾಳೆ ಜಾತಿ ಗಣತಿ ವರದಿ ಮಂಡಿಸುತ್ತಿಲ್ಲ