ವಿಶ್ವ ಪರಿಸರ ದಿನಾಚರಣೆ: ಸಿಂಧೂರ ಸಸಿ ನೆಟ್ಟ ಪ್ರಧಾನಿ ಮೋದಿ

ನವದೆಹಲಿ: ಇಂದು, ವಿಶ್ವ ಪರಿಸರ ದಿನದಂದು ಪ್ರಧಾನಿ ನರೇಂದ್ರ ಮೋದಿ ಅವರುಲೋಕ ಕಲ್ಯಾಣ್ ಮಾರ್ಗ್‌ನಲ್ಲಿರುವ ತಮ್ಮ ಅಧಿಕೃತ ನಿವಾಸದಲ್ಲಿ ಸಿಂಧೂರ ಸಸಿಯನ್ನು ನೆಟ್ಟರು.
ಈ ಕುರಿತಂತೆ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌ ಮಾಡಿದ್ದು 1971ರ ಯುದ್ಧದ ಭಾಗವಾಗಿದ್ದ ಮಹಿಳೆಯರ ಗುಂಪು ಈ ಗಿಡವನ್ನು ಮೋದಿ ಅವರಿಗೆ ಉಡುಗೊರೆಯಾಗಿ ನೀಡಿತ್ತು ಎಂಬುದು ವಿಶೇಷ. ಈ ಬಗ್ಗೆ ಪ್ರಧಾನಿ ಮೋದಿ ಎಕ್ಸ್​ ಖಾತೆಯಲ್ಲಿ ಬರೆದುಕೊಂಡಿದ್ದು, ‘1971ರ ಯುದ್ಧದಲ್ಲಿ ಧೈರ್ಯ ಮತ್ತು ಶೌರ್ಯದ ಅದ್ಭುತ ಉದಾಹರಣೆಯನ್ನು ನೀಡಿದ ಕಚ್‌ನ ಧೈರ್ಯಶಾಲಿ ತಾಯಂದಿರು ಮತ್ತು ಸಹೋದರಿಯರು ಇತ್ತೀಚೆಗೆ ಗುಜರಾತ್‌ಗೆ ಭೇಟಿ ನೀಡಿದಾಗ ನನಗೆ ಸಿಂಧೂರದ ಗಿಡವನ್ನು ಉಡುಗೊರೆಯಾಗಿ ನೀಡಿದರು. ವಿಶ್ವ ಪರಿಸರ ದಿನವಾದ ಇಂದು ನವದೆಹಲಿಯಲ್ಲಿರುವ ಪ್ರಧಾನ ಮಂತ್ರಿ ನಿವಾಸದಲ್ಲಿ ಆ ಗಿಡವನ್ನು ನೆಡುವ ಸೌಭಾಗ್ಯ ನನಗೆ ಸಿಕ್ಕಿದೆ. ಈ ಗಿಡ ನಮ್ಮ ದೇಶದ ಮಹಿಳಾ ಶಕ್ತಿಯ ಶೌರ್ಯ ಮತ್ತು ಸ್ಫೂರ್ತಿಯ ಬಲವಾದ ಸಂಕೇತವಾಗಿ ಉಳಿಯುತ್ತದೆ’ ಎಂದಿದ್ದಾರೆ.