ಹುಬ್ಬಳ್ಳಿ: ಪದವೀಧರರಿಗೆ “ಯುವ ನಿಧಿ” ಗ್ಯಾರಂಟಿ ಘೋಷಿಸಿದ ರಾಜ್ಯ ಸರ್ಕಾರವು ಈಗ ಅಂಥ ಪದವೀಧರರನ್ನು ರೂಪಿಸೋ ವಿವಿಗಳನ್ನೇ ಮುಚ್ಚಲು ಹೊರಟಿದ್ದು ಅಕ್ಷಮ್ಯ ಎಂದು ಕೇಂದ್ರ ಆಹಾರ ಮತ್ತು ನಾಗರಿಕ, ನವೀಕರಿಸಬಹುದಾದ ಇಂಧನ ಖಾತೆ ಸಚಿವ ಪ್ರಲ್ಹಾದ ಜೋಶಿ ಕಿಡಿಕಾರಿದ್ದಾರೆ.
ರಾಜ್ಯ ಸಚಿವ ಸಂಪುಟದ ಉಪ ಸಮಿತಿ ರಾಜ್ಯದಲ್ಲಿನ ೯ ವಿಶ್ವವಿದ್ಯಾಲಯಗಳನ್ನು ಮುಚ್ಚಲು ಕೈಗೊಂಡಿರುವ ತೀರ್ಮಾನಕ್ಕೆ ತಮ್ಮ ಎಕ್ಸ್ ಖಾತೆಯಲ್ಲಿ ಸಚಿವ ಜೋಶಿ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿ ರಾಜ್ಯದೆಲ್ಲೆಡೆ ವಿದ್ಯಾರ್ಥಿಗಳಿಗೆ ಉನ್ನತ ಶಿಕ್ಷಣ ಕಲ್ಪಿಸಲು 10 ವಿಶ್ವವಿದ್ಯಾಲಯಗಳನ್ನು ಸ್ಥಾಪಿಸಿದರೆ, ಕಾಂಗ್ರೆಸ್ ಸರ್ಕಾರ ಅವನ್ನು ಮುಚ್ಚುವ ಮೂಲಕ ವಿದ್ಯಾರ್ಥಿಗಳ ಉನ್ನತ ಶಿಕ್ಷಣದ ಕನಸಿಗೆ ಕೊಳ್ಳಿ ಇಡುತ್ತಿದೆ ಎಂದು ಹರಿ ಹಾಯ್ದಿದ್ದಾರೆ.
ರಾಜ್ಯ ಕಾಂಗ್ರೆಸ್ ಸರ್ಕಾರ ವಿವಿಗಳನ್ನೂ ಆದಾಯದ ಮೂಲ ಮತ್ತು ಒಂದು ಸರಕನ್ನಾಗಿ ನೋಡುತ್ತಿರುವುದು ಖಂಡನೀಯ ಮತ್ತು ವಿಪರ್ಯಾಸವಾಗಿದೆ. ವಿವಿಗಳು ಆರ್ಥಿಕ ಮತ್ತು ಅಗತ್ಯ ಭೂಮಿಯ ಕೊರತೆ ಎದುರಿಸುತ್ತಿವೆ ಎಂಬ ಕುಂಟು ನೆಪವೊಡ್ಡುವ ಈ ಸರ್ಕಾರವೇ ಮೊದಲು ಆರ್ಥಿಕ ಸಂಕಷ್ಟದಲ್ಲಿದೆ. ಹಾಗಾಗಿ ಇಂಥ ಕ್ರಮಕ್ಕೆ ಮುಂದಾಗುತ್ತಿದೆ ಎಂದು ಟೀಕಿಸಿದ್ದಾರೆ.
ಸರ್ಕಾರಕ್ಕೆ ಸಲಹೆ
ಡಿಸಿಎಂ ಡಿಕೆ ಶಿವಕುಮಾರ್ ಅವರು ವಿಶ್ವವಿದ್ಯಾಲಯಗಳ ಆರ್ಥಿಕ ಸ್ಥಿತಿಗತಿಯ ಪರಿಶೀಲನೆ ಸಭೆ ನಡೆಸುವ ಮೊದಲು ತಮ್ಮ ಸರ್ಕಾರ ಮತ್ತು ಇಲಾಖೆಗಳ ಆರ್ಥಿಕ ಸ್ಥಿತಿಗತಿಯ ಪರಿಶೀಲನೆಗೆ ಸಭೆ ನಡೆಸುವುದು ಒಳಿತು ಎಂದು ಜೋಶಿ ಸಲಹೆ ಮಾಡಿದ್ದಾರೆ. ಕರಾವಳಿ ಭದ್ರತೆಗೆ ಬೇಕಿರುವ ಅಗತ್ಯ ಇಂಧನ ಕಡಿತಗೊಳಿಸಲು ಆದೇಶಿಸಿದೆ. ಕರಾವಳಿ ಭದ್ರತೆಯ ವಿಚಾರದಲ್ಲಿ ಇಂಧನ ಕಡಿತಗೊಳಿಸಿರುವದು ಇವರ ಆಡಳಿತ ವೈಫಲ್ಯದ ನಿದರ್ಶನ ಎಂದು ಜೋಶಿ ಪ್ರತಿಕ್ರಿಯಿಸಿದ್ದಾರೆ.