ವಿವಿಧ ಕಾಮಗಾರಿಗಳ ಪರಿಶೀಲನೆ

0
33

ಬಳ್ಳಾರಿ: ಬಹು ನಿರೀಕ್ಷಿತ ಗಡಿಗಿ ಚನ್ನಪ್ಪ ವೃತ್ತ, ಗೋಪುರ ಹಾಗೂ ಇಂದಿರಾ ವೃತ್ತದವರೆಗಿನ ರಸ್ತೆಯನ್ನು ಶೀಘ್ರ ಪೂರ್ಣಗೊಳಿಸಲಾಗುವುದೆಂದು ಬಳ್ಳಾರಿ ನಗರ ಕ್ಷೇತ್ರದ ಶಾಸಕ ನಾರಾ ಭರತ್ ರೆಡ್ಡಿ ತಿಳಿಸಿದ್ದಾರೆ.
ಬುಧವಾರ ನಗರದ ನಿರ್ಮಾಣ ಹಂತದಲ್ಲಿರುವ ಗಡಿಗಿ ಚನ್ನಪ್ಪ ವೃತ್ತ ಸೇರಿದಂತೆ ನಗರದ ವಿವಿಧ ಕಾಮಗಾರಿಗಳು ನಡೆಯುತ್ತಿರುವ ಸ್ಥಳಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿ, ಕಾಮಗಾರಿಯನ್ನು ಶೀಘ್ರ ಪೂರ್ಣಗೊಳಿಸುವಂತೆ ಸೂಚಿಸಿದರು.
ಗಡಿಗಿ ಚನ್ನಪ್ಪ ವೃತ್ತದ ಕಾಮಗಾರಿ ಆ. 15ರಂದು ಪೂರ್ಣಗೊಳ್ಳುವ ನಿರೀಕ್ಷೆ ಇತ್ತು, ಆದರೆ ಕಾಮಗಾರಿಯಲ್ಲಿ ಬದಲಾವಣೆ ಹಾಗೂ ಸುಂದರೀಕರಣ ಮಾಡುವ ಉದ್ದೇಶದಿಂದ ಪೂರ್ಣ ಆಗಿಲ್ಲ, ಆದರೆ ಆದಷ್ಟು ಬೇಗ ಕಾಮಗಾರಿಯು ಪೂರ್ಣಗೊಳ್ಳುವ ವಿಶ್ವಾಸವಿದೆ ಎಂದು ಅವರು ಹೇಳಿದ್ದಾರೆ.
ಗಡಿಗಿ ಚನ್ನಪ್ಪ ವೃತ್ತದ ಗೋಪುರವು ಅಂದಾಜು 4 ಕೋಟಿ ರೂ.ಗಳು, ಇಂದಿರಾ ಪ್ರಿಯದರ್ಶಿನಿ ವೃತ್ತದವರೆಗಿನ ರಸ್ತೆಗೆ ಅಂದಾಜು 8 ಕೋಟಿ 50 ಲಕ್ಷ ರೂ.ಗಳ ಮೊತ್ತದಲ್ಲಿ ಕಾಮಗಾರಿ ನಡೆಯುತ್ತಿವೆ ಎಂದು ತಿಳಿಸಿದ್ದಾರೆ.
ಗಡಿಗಿ ಚನ್ನಪ್ಪ ವೃತ್ತದ ಸುಂದರೀಕರಣಕ್ಕಾಗಿ 2 ಕೋಟಿ ರೂ.ಗಳ ವೆಚ್ಚದಲ್ಲಿ ಕಾಮಗಾರಿ ನಿರ್ಮಾಣವಾಗುತ್ತಿದ್ದು, ಹಿಂದಿನ ಸರ್ಕಾರ ಗೋಪುರಕ್ಕಾಗಿ ಕುಣಿ ತೋಡಿದ್ದು ಬಿಟ್ಟರೆ ಇನ್ನೇನೂ ಮಾಡಿರಲಿಲ್ಲ, ಸ್ಥಳ ಪರಿಶೀಲನೆಗೆ ಹೋದಾಗ ಅನುದಾನದ ಕೊರತೆಯನ್ನು ಗುತ್ತಿಗೆದಾರರು ತಿಳಿಸಿದ್ದರು, ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ನಂತರ ನಾನು ಮುತುವರ್ಜಿ ವಹಿಸಿ ಅನುದಾನ ಬಿಡುಗಡೆಗೊಳಿಸಿರುವೆ ಎಂದು ತಿಳಿಸಿದ್ದಾರೆ.
ಅದೇ ರೀತಿ ವಿಶೇಷ ಪ್ರಯತ್ನ ನಡೆಸಿ ಗಡಿಗಿ ಚನ್ನಪ್ಪ ವೃತ್ತದಿಂದ ಈಡಿಗ ಹಾಸ್ಟೇಲ್ ವರೆಗಿನ ರಸ್ತೆಯ ಅಗಲೀಕರಣ ಮಾಡಿ, ಸುಂದರೀಕರಣಗೊಳಿಸಿ ಅಭಿವೃದ್ಧಿಪಡಿಸಲು ಅಂದಾಜು 2 ಕೋಟಿ ರೂ.ಗಳನ್ನು ಮೀಸಲಿರಿಸಿದ್ದು, ಶೀಘ್ರ ಕಾಮಗಾರಿ ಆರಂಭಗೊಳ್ಳಲಿದೆ ಎಂದು ಶಾಸಕ ಭರತ್ ರೆಡ್ಡಿ ತಿಳಿಸಿದ್ದಾರೆ.
ಗ್ಯಾರಂಟಿ ಯೋಜನೆಗಳಿಂದಾಗಿ ಕಾಮಗಾರಿಗಳು ನಡೆಯುತ್ತಿಲ್ಲ ಎಂಬ ವಿಪಕ್ಷಗಳ ಆರೋಪದಲ್ಲಿ ಹುರುಳಿಲ್ಲ ಎಂದು ಅವರು ಹೇಳಿದ್ದಾರೆ.
ಇದಕ್ಕೂ ಮುನ್ನ ಮೋಕ ರಸ್ತೆಯ ನಿರ್ಮಾಣ ಹಂತದಲ್ಲಿರುವ ಶ್ರೀ ಮಾರೆಮ್ಮ ದೇವಸ್ಥಾನಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ನಿರ್ಮಾಣ ಹಂತದಲ್ಲಿರುವ (1 ಕೋಟಿ 50 ಲಕ್ಷ ರೂ.ಗಳು) ನೂತನ ಶ್ರೀ ಬಸವೇಶ್ವರ ವೃತ್ತಕ್ಕೆ ಭೇಟಿ ನೀಡಿ ಪರಿಶೀಲಿಸಿದರು.
4 ಕೋಟಿ 50 ಲಕ್ಷ ರೂ.ಗಳ ವೆಚ್ಚದಲ್ಲಿ ಶಬರಿ ಹೊಟೇಲಿನಿಂದ ಕೆಇಬಿ ವೃತ್ತದವರೆಗೆ ರಸ್ತೆ ನಿರ್ಮಾಣ, 80 ಲಕ್ಷ ರೂ.ಗಳ ವೆಚ್ಚದಲ್ಲಿ ಕನ್ಸೀಲ್ಡ್ ಎಲೆಕ್ಟ್ರಿಕ್ ಕೇಬಲ್ ಅಳವಡಿಕೆ ಹಾಗೂ ಕೆಆರೆಸ್ ಸಭಾಂಗಣದಿಂದ ಕೆಇಬಿ ವೃತ್ತದವರೆಗೆ ರಸ್ತೆ ಸುಂದರೀಕರಣ ಕಾಮಗಾರಿಯು ಅಂದಾಜು 2 ಕೋಟಿ 50 ಲಕ್ಷ ರೂ.ಗಳಲ್ಲಿ ನಡೆಯುತ್ತಿದೆ ಎಂದು ಶಾಸಕ ನಾರಾ ಭರತ್ ರೆಡ್ಡಿ ತಿಳಿಸಿದ್ದಾರೆ.
ಈ ವೇಳೆ ಡಿಸಿಸಿ ಜಿಲ್ಲಾಧ್ಯಕ್ಷ ಅಲ್ಲಂ ಪ್ರಶಾಂತ್, ಮಹಾನಗರ ಪಾಲಿಕೆಯ ಮೇಯರ್ ಮುಲ್ಲಂಗಿ ನಂದೀಶ್, ಕಾಂಗ್ರೆಸ್ ಮುಖಂಡರಾದ ಅಯಾಜ್ ಅಹ್ಮದ್, ಪಾಲಿಕೆಯ ಸದಸ್ಯರಾದ ಮಿಂಚು ಶ್ರೀನಿವಾಸ್, ನೂರ್ ಮೊಹಮ್ಮದ್, ಜಬ್ಬಾರ್, ನಾಜು, ರಾಜಶೇಖರ, ಶಿವರಾಜ್, ಅಭಾವೀಮ ಜಿಲ್ಲಾಧ್ಯಕ್ಷ ಚಾನಾಳ್ ಶೇಖರ್, ಉದ್ಯಮಿಗಳಾದ ಟಿಲ್ಲು, ಉಮೇಶ್ ರೆಡ್ಡಿ ಮೊದಲಾದವರು ಹಾಜರಿದ್ದರು.

Previous article೨೦ರಂದು ಸಿದ್ಧಾರೂಢಮಠದಲ್ಲಿ `ಜಲರಥೋತ್ಸವ’
Next articleದೈವಾರಾಧನೆಗೆ ಅಪಚಾರ: ಕದ್ರಿ ಮಂಜುನಾಥ ದೇವಸ್ಥಾನದಲ್ಲಿ ಮಂಡಿಯೂರಿ ಕ್ಷಮೆಯಾಚಿಸಿದ ಮಹಿಳೆ