ದಾವಣಗೆರೆ: ದಾವಣಗೆರೆಯ ಎಪಿಎಂಸಿ, ಆವರಗೆರೆಯ ಘನ ತ್ಯಾಜ್ಯ ವಿಲೇವಾರಿ ಘಟಕ, ಜಿಲ್ಲಾಸ್ಪತ್ರೆ ಸೇರಿದಂತೆ ವಿವಿಧೆಡೆ ಬೆಳ್ಳಂಬೆಳಿಗ್ಗೆಯೇ ಉಪ ಲೋಕಾಯುಕ್ತ ಬಿ. ವೀರಪ್ಪ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಪ್ರಭಾರ ಜಿಲ್ಲಾಧಿಕಾರಿ ಸುರೇಶ್ ಇಟ್ನಾಳ್ ಸೇರಿದಂತೆ ಅಧಿಕಾರಿಗಳ ತಂಡದೊಂದಿಗೆ ಎಪಿಎಂಸಿಗೆ ಭೇಟಿ ನೀಡಿ ಅಲ್ಲಿನ ತೂಕ, ಅಳತೆ ಯಂತ್ರ ಪರಿಶೀಲನೆ ನಡೆಸಿದರು. ಸರಿಯಾದ ಅಳತೆಯಿಂದ ತೂಕ ಹಾಕಬೇಕು, ವ್ಯಾಪಾರದಲ್ಲಿ ತೂಕ ಮೋಸಮಾಡುವಂತಿಲ್ಲ ಎಂದು ತಾಕೀತು ಮಾಡಿದರಷ್ಡೇ ಅಲ್ಲದೇ, ಇಲ್ಲಿ ಕೆಲಸ ಮಾಡುವ ಕಾರ್ಮಿಕರಿಗೆ ಲೇಬರ್ ಕಾರ್ಡ್ ನೀಡಲು ಸೂಚನೆ ನೀಡಿದರು.
ಕಲ್ಲೇಶ್ವರ ಎಂಟರ್ ಪ್ರೈಸಸ್ ಇವರು ರಸೀದಿ ಪುಸ್ತಕವಿಟ್ಟಿಲ್ಲ. ಕೂಡಲೇ ರಸೀದಿ ಪುಸ್ತಕವಿಡಬೇಕು. ರೈತರಿಂದ ಕಮೀಷನ್ ತೆಗೆದುಕೊಳ್ಳುವಂತಿಲ್ಲ, ಮೂಲ ರಸೀದಿಯನ್ನೆ ಕೊಡಬೇಕೆಂದು ಸೂಚನೆ ನೀಡಿ ಎಪಿಎಂಸಿ ಅಧಿಕಾರಿಗಳಿಗೆ ಸೂಚಿಸಿದರು.
ಕೆಎಸ್ ಆರ್ ಟಿಸಿ ಬಸ್ ನಿಲ್ದಾಣದ ಹೋಟೆಲ್ ಗಳಿಗೆ ತೆರಳಿ ಆಹಾರ ಪರಿಶೀಲನೆ ನಡೆಸಿ, ಆಹಾರ ಸುರಕ್ಷತಾ ಕ್ರಮ ಅನುಸರಿಸಲು ಆಹಾರ ಸುರಕ್ಷತಾ ಅಧಿಕಾರಿಗಳಿಗೆ ಪರೀಕ್ಷೆ ಮಾಡಲು ಸೂಚನೆ ನೀಡಿದರು.
ನಂತರ ಜಿಲ್ಲಾ ಆಸ್ಪತ್ರೆಯಲ್ಲಿ ಹೊರರೋಗಿಗಳ ವಿಭಾಗದಲ್ಲಿ ಮಹಿಳೆಯರಿಗೆ ಪ್ರತ್ಯೇಕ ಸರದಿ, ಸಾಲು ಮಾಡಲು ತಿಳಿಸಿ ವಯೋವೃದ್ಧರಿಗೆ ಮೊದಲ ಆದ್ಯತೆ ನೀಡಬೇಕು. ವೃದ್ಧರು ರಕ್ತದೊತ್ತಡ, ಮಧುಮೇಹ ತಪಾಸಣೆಗೆ ಹೆಚ್ಚಿನ ಸಮಯ ಸಾಲಿನಲ್ಲಿ ನಿಲ್ಲುವುದಕ್ಕಾಗುವುದಿಲ್ಲ ಎಂದು ಜಿಲ್ಲಾ ಸರ್ಜನ್ ಗೆ ತಿಳಿಸಿದರು.
ಇದಲ್ಲದೇ ಖಾಸಗಿ ಆಸ್ಪತ್ರೆಯಲ್ಲಿ ದಾಖಲಾಗಿರುವ ರೋಗಿಗಳಿಗೆ ಎಕ್ಸ್ ರೇ, ಸ್ಕ್ಯಾನಿಂಗ್ ಇಲ್ಲಿ ಮಾಡುವ ಬದಲಾಗಿ ಇಲ್ಲಿನ ರೋಗಿಗಳಿಗೆ ಮೊದಲ ಆದ್ಯತೆ ನೀಡಲು ಸೂಚಿಸಿದರು.