ವಿಮಾನ ದುರಂತ: ಮಾಜಿ ಸಿಎಂ ವಿಜಯ್ ರೂಪಾನಿ ಮೃತದೇಹದ ಗುರುತು ಪತ್ತೆ

ಅಹಮದಾಬಾದ್‌: ಏರ್ ಇಂಡಿಯಾ ವಿಮಾನ ದುರಂತದಲ್ಲಿ ಮೃತಪಟ್ಟ ಗುಜರಾತ್ ಮಾಜಿ ಮುಖ್ಯಮಂತ್ರಿ ವಿಜಯ್ ರೂಪಾನಿ ಅವರ ಮೃತದೇಹವನ್ನು ಡಿಎನ್‌ಎ ಪರೀಕ್ಷೆ ಮೂಲಕ ಗುರುತಿಸಲಾಗಿದ್ದು, ಮೃತದೇಹ ಹಸ್ತಾಂತರಕ್ಕೆ ತಯಾರಿ ನಡೆದಿದೆ.
ಈ ಕುರಿತು ರಾಜ್ಯದ ಗೃಹ ಸಚಿವ ಹರ್ಷ್ ಸಾಂಘವಿ ಮಾಹಿತಿ ನೀಡಿದ್ದು, ಮುಂಜಾನೆ 11.10ಕ್ಕೆ ಡಿಎನ್‌ಎ ಮಾದರಿ ಪರಿಶೀಲನೆ ನಡೆಸಲಾಗಿದ್ದು, ವಿಜಯ್ ರೂಪಾನಿ ಅವರ ಡಿಎನ್‌ಎ ಮಾದರಿ ಅವರ ಕುಟುಂಬ ಸದಸ್ಯರ ಡಿಎನ್ಎ ಮಾದರಿಯೊಂದಿಗೆ ಹೊಂದಿಕೆಯಾಗಿದೆ ಎಂದು ತಿಳಿಸಿದ್ದಾರೆ.
ಸದ್ಯ ಇಲ್ಲಿಯವರೆಗೆ ಡಿಎನ್‌ಎ ಪರೀಕ್ಷೆ ಮೂಲಕ 32 ಮೃತದೇಹವನ್ನು ಗುರುತಿಸಲಾಗಿದ್ದು, 14 ಮೃತದೇಹಗಳನ್ನು ಸಂಬಂಧಪಟ್ಟ ಕುಟುಂಬಸ್ಥರಿಗೆ ಹಸ್ತಾಂತರಿಸಲಾಗಿದೆ’ ಎಂದು ವೈದ್ಯ ರಜನೀಶ್ ಪಟೇಲ್ ತಿಳಿಸಿದ್ದಾರೆ.