ಉಡುಪಿ: ಮೊಬೈಲ್ ವಿಚಾರವಾಗಿ ಗಂಡ ಹೆಂಡಿರ ನಡುವೆ ಶುರುವಾದ ಜಗಳ ಪತ್ನಿಯ ಕೊಲೆಯಲ್ಲಿ ಅಂತ್ಯಗೊಂಡ ಘಟನೆ ಶಂಕರನಾರಾಯಣ ಠಾಣೆ ವ್ಯಾಪ್ತಿಯ ಹಿಲಿಯಾಣ ಗ್ರಾಮದ ಹೊಸಮಠ ಎಂಬಲ್ಲಿ ಜೂ.19ರ ರಾತ್ರಿ ಸಂಭವಿಸಿದೆ.
ರೇಖಾ (27) ಕೊಲೆಯಾದ ದುರ್ದೈವಿ.
ಕೊಲೆ ಆರೋಪಿ, ಮೃತ ರೇಖಾಳ ಪತಿ ಗಣೇಶ ಪೂಜಾರಿ (42)ಯನ್ನು ಪೊಲೀಸರು ಬಂಧಿಸಿ, ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.
ವೃತ್ತಿಯಲ್ಲಿ ಪೈಂಟಿಂಗ್ ಕೆಲಸ ಮಾಡಿಕೊಂಡಿದ್ದ ಗಣೇಶ್ ಪೂಜಾರಿ ಹಾಗೂ ರೇಖಾಳಿಗೆ 8 ವರ್ಷದ ಹಿಂದೆ ಮದುವೆಯಾಗಿದ್ದು ಇಬ್ಬರು ಮಕ್ಕಳಿದ್ದಾರೆ. ರೇಖಾ ಪೆಟ್ರೋಲ್ ಬಂಕ್ ವೊಂದರಲ್ಲಿ ಕೆಲಸಕ್ಕಿದ್ದು, ಮೊಬೈಲ್ ಅತಿ ಬಳಕೆ ವಿಚಾರದಲ್ಲಿ ಗಂಡ ಆಗಾಗ ಗಲಾಟೆ ಮಾಡುತ್ತಿದ್ದ.
ಗುರುವಾರ ತಡರಾತ್ರಿ ಮನೆಗೆ ಬಂದು ಇದೇ ಕಾರಣಕ್ಕೆ ಪತ್ನಿಯೊಂದಿಗೆ ಜಗಳ ಮಾಡಿದ ಗಣೇಶ, ಪತ್ನಿಗೆ ಕತ್ತಿಯಿಂದ ಕಡಿದ ಪರಿಣಾಮ ಗಂಭೀರ ಗಾಯಗೊಂಡ ರೇಖಾ ಸ್ಥಳದಲ್ಲಿ ಮೃತಪಟ್ಟರು. ಬಳಿಕ ಪರಾರಿಯಾಗಿ ತಲೆಮರೆಸಿಕೊಂಡಿದ್ದ ಆರೋಪಿ ಗಣೇಶ್ ಪೂಜಾರಿಯನ್ನು ಶಂಕರನಾರಾಯಣ ಪೊಲೀಸರು ಬಂಧಿಸಿದ್ದಾರೆ. ಶಂಕರನಾರಾಯಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.